ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ (Twitter) ಅನ್ನು 44 ಶತಕೋಟಿ ಯುಎಸ್ಡಿಗೆ ಖರೀದಿಸಿದಾಗಿನಿಂದ ಅಲ್ಲಿನ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಸಿಇಒ ಪರಾಗ್ ಅಗರವಾಲ್ ಅವರು ಉದ್ಯೋಗಿಗಳ ವಜಾ, ಟ್ವಿಟ್ಟರ್‌ನ ಭವಿಷ್ಯ ಮತ್ತು ಹೆಚ್ಚಿನದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಆ ರೀತಿಯ ಏನೂ ನಡೆಯುತ್ತಿಲ್ಲ ಎಂದು ಅಗರವಾಲ್ ಭರವಸೆ ನೀಡಿದ್ದಾರೆ. ಆದರೆ ರಾಯಿಟರ್ಸ್‌ನ ಹೊಸ ವರದಿಯು ವಿಭಿನ್ನವಾದದ್ದನ್ನು ಸೂಚಿಸುತ್ತದೆ. ಈ ವರ್ಷದ ಕೊನೆಯಲ್ಲಿ 44 ಶತಕೋಟಿ ಡಾಲರ್ ಮಾರಾಟದ ಒಪ್ಪಂದವು ಪೂರ್ಣಗೊಂಡ ನಂತರ ಅಗರವಾಲ್ ಅವರನ್ನು ಬದಲಿಸುವ ಟ್ವಿಟ್ಟರ್‌ಗೆ ಈಗಾಗಲೇ ಹೊಸ ಮುಖ್ಯ ಕಾರ್ಯನಿರ್ವಾಹಕರನ್ನು ಮಸ್ಕ್ ನೇಮಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು, ಕಂಪೆನಿಯ ನಿರ್ವಹಣೆಯಲ್ಲಿ ವಿಶ್ವಾಸವಿಲ್ಲ ಎಂದು ಸ್ವತಃ ಮಸ್ಕ್ ಟ್ವಿಟ್ಟರ್‌ನ ಅಧ್ಯಕ್ಷ ಬ್ರೆಟ್ ಟೇಲರ್ ಅವರಿಗೆ ಹೇಳಿದ್ದರು. ಮ್ಯಾನೇಜ್ಮೆಂಟ್ ಮಟ್ಟದಲ್ಲಿ ಪುನರ್ರಚನೆ ಬಗ್ಗೆ ಸುಳಿವು ನೀಡಿದ್ದರು.
ಕಳೆದ ನವೆಂಬರ್‌ನಲ್ಲಿ ಟ್ವಿಟ್ಟರ್ ಸಿಇಒ ಹುದ್ದೆಗೆ ಜಾಕ್ ಡೋರ್ಸೆಗೆ ಬದಲಿಯಾಗಿ ನೇಮಕವಾದ ಅಗರವಾಲ್, ಮಸ್ಕ್‌ಗೆ ಕಂಪೆನಿಯ ಮಾರಾಟ ಪೂರ್ಣಗೊಳ್ಳುವವರೆಗೆ ತಮ್ಮ ಪಾತ್ರವನ್ನು ನಿರ್ವಹಿಸುವ ನಿರೀಕ್ಷೆಯಿದೆ. ಬದಲಿ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲು ಮಸ್ಕ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಟ್ವಿಟ್ಟರ್‌ನಲ್ಲಿ ಕಂಪೆನಿಯ ನಿಯಂತ್ರಣ ಬದಲಾವಣೆಯಾದ 12 ತಿಂಗಳೊಳಗೆ ಅಗರವಾಲ್ ಅವರನ್ನು ಮಸ್ಕ್ ವಜಾ ಮಾಡಿದರೆ 43 ಮಿಲಿಯನ್ ಡಾಲರ್ ಪಾವತಿಸಬೇಕಾಗುತ್ತದೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು.
ವಿಜಯಾ ಗದ್ದೆಯವರನ್ನೂ ವಜಾಗೊಳಿಸಬಹುದು
ಟ್ವಿಟ್ಟರ್‌ನ ಕಾನೂನು ಮುಖ್ಯಸ್ಥರಾದ ವಿಜಯಾ ಗದ್ದೆ ಅವರನ್ನು ವಜಾಗೊಳಿಸಲು ಮಸ್ಕ್ ಯೋಜಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್‌ನ ವರದಿ ಬಹಿರಂಗಪಡಿಸಿದೆ. ಸ್ಥಾನದಿಂದ ತೆಗೆದುಹಾಕಿದರೆ, ಗದ್ದೆ ಟ್ವಿಟ್ಟರ್ ಷೇರುಗಳು ಸೇರಿದಂತೆ ಯುಎಸ್ಡಿ 12.5 ಮಿಲಿಯನ್ ಮೌಲ್ಯದ ಬೇರ್ಪಡಿಕೆ ಪ್ಯಾಕೇಜ್ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಅವರು ಸದ್ಯಕ್ಕೆ vಆರ್ಷಿಕ ಸುಮಾರು 17 ಮಿಲಿಯನ್ ಯುಎಸ್ಡಿ ಗಳಿಸುತ್ತಾರೆ ಮತ್ತು ಕಂಪೆನಿಯಲ್ಲಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಒಬ್ಬರು. “ಕಳೆದ ವರ್ಷ ಟ್ವಿಟ್ಟರ್‌ನ ಉನ್ನತ ಕಾನೂನು ಸಲಹೆಗಾರರಾಗಿ ಯುಎಸ್ಡಿ 17 ಮಿಲಿಯನ್ ಅನ್ನು ಗದ್ದೆ ಗಳಿಸಿದ್ದು, ಮಸ್ಕ್ ತನ್ನ ಟ್ವಿಟ್ಟರ್ ಬಿಡ್‌ಗೆ ಹಣಕಾಸು ಪಡೆಯಲು ನೋಡುತ್ತಿರುವ ಕಾರಣ ಉದ್ಯೋಗಗಳನ್ನು ಕಡಿತಗೊಳಿಸಲು ಮತ್ತು ಕಾರ್ಯನಿರ್ವಾಹಕರ ವೇತನವನ್ನು ಕಡಿಮೆ ಮಾಡಲು ಯೋಜಿಸುತ್ತಿರುವುದರಿಂದ ಕಡಿತಗೊಳಿಸುವ ಇರಾದೆಯಲ್ಲಿದ್ದಾರೆ,” ಎಂದು ವರದಿ ಹೇಳಿದೆ.
ಕಳೆದ ವಾರ ಟ್ವಿಟ್ಟರ್‌ನ ಭವಿಷ್ಯದ ಬಗ್ಗೆ ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ 48 ವರ್ಷದ ಗದ್ದೆ ಕಣ್ಣೀರು ಹಾಕಿದ್ದರು ಎಂದು ವರದಿಯಾಗಿದೆ.
ಟ್ವಿಟ್ಟರ್ ಉದ್ಯೋಗಿಗಳಲ್ಲಿ ಆತಂಕ
ಟ್ವಿಟ್ಟರ್ ಅನ್ನು ಮಸ್ಕ್ ಖರೀದಿಸಿದಾಗಿನಿಂದ ಉದ್ಯೋಗಿಗಳು ತಮ್ಮ ಕೆಲಸ ಸುರಕ್ಷಿತವಾಗಿದೆಯೇ ಅಥವಾ ಅವರು ಇತರ ಆಯ್ಕೆಗಳನ್ನು ಹುಡುಕಬೇಕೇ ಎಂದು ಅಗರವಾಲ್ರನ್ನು ಪ್ರಶ್ನಿಸುತ್ತಿದ್ದಾರೆ. ಇತ್ತೀಚಿನ ಕಂಪೆನಿ ಸಭೆಯಲ್ಲಿ ಮಸ್ಕ್ ಅವರ ಸೂಚನೆಯಂತೆ ನಿರೀಕ್ಷಿತ ಸಾಮೂಹಿಕ ನಿರ್ಗಮನವನ್ನು ನಿರ್ವಹಿಸಲು ವ್ಯವಸ್ಥಾಪಕರು ಹೇಗೆ ಯೋಜಿಸುತ್ತಾರೆ ಎಂಬುದರ ಕುರಿತು ಉದ್ಯೋಗಿಗಳು ಕೇಳಿದ್ದಾರೆ. ರಾಯಿಟರ್ಸ್ ಪ್ರಕಾರ, ಆಂತರಿಕ ಟೌನ್ ಹಾಲ್‌ಗಳಲ್ಲಿ ಒಂದರಲ್ಲಿ, ಟ್ವಿಟ್ಟರ್ ಕಾರ್ಯನಿರ್ವಾಹಕರು ಕಂಪೆನಿಯು ಪ್ರತಿದಿನವೂ ಸಿಬ್ಬಂದಿ ಕ್ಷೀಣಿಸುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಟೆಸ್ಲಾ ಸಿಇಒ ಮಂಡಳಿಯನ್ನು ಪುನರ್ರಚಿಸಲು ಮತ್ತು ಕಾರ್ಯನಿರ್ವಾಹಕ ವೇತನಗಳನ್ನು ಕಡಿತಗೊಳಿಸಲು ಮಸ್ಕ್ ಮುಂದಾಗಿದ್ದಾರೆ. ಆದರೆ ನಿಖರವಾದ ವೆಚ್ಚ ಕಡಿತಗಳು ಸ್ಪಷ್ಟವಾಗಿಲ್ಲ. ರಾಯಿಟರ್ಸ್‌ನ ಮತ್ತೊಂದು ವರದಿಯು ಮಸ್ಕ್ ಅವರು ಟ್ವಿಟ್ಟರ್‌ನ ಸಂಪೂರ್ಣ ಮಾಲೀಕತ್ವವನ್ನು ತೆಗೆದುಕೊಳ್ಳುವವರೆಗೆ ಉದ್ಯೋಗ ಕಡಿತದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ಉದ್ಯೋಗಿಗಳ ಕಳವಳಗಳನ್ನು ಉದ್ದೇಶಿಸಿ ಮಾತನಾಡಿದ ಅಗರವಾಲ್, “ಭವಿಷ್ಯದ ಟ್ವಿಟರ್ ಸಂಸ್ಥೆಯು ಜಗತ್ತು ಮತ್ತು ಅದರ ಗ್ರಾಹಕರ ಮೇಲೆ ಅದರ ಪ್ರಭಾವದ ಬಗ್ಗೆ ಕಾಳಜಿ ವಹಿಸುವುದನ್ನು ಮುಂದುವರಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದರು.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Parag Agarwal: ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ರನ್ನು ಕೆಲಸದಿಂದ ತೆಗೆದಲ್ಲಿ 300 ಕೋಟಿ ರೂ.ಗೂ ಹೆಚ್ಚು ಪರಿಹಾರ
Published On - 1:31 pm, Tue, 3 May 22