ಉದ್ಯಮಕ್ಕಾಗಿ ಸಾಲ (Business Loan) ಪಡೆಯಬೇಕಾದ ಸಂದರ್ಭಗಳು ಹಲವು ಬಾರಿ ಎದುರಾಗುತ್ತವೆ. ಉದ್ಯಮ ವಿಸ್ತರಣೆಗಾಗಿಯೋ ಅಥವಾ ವೆಚ್ಚಗಳನ್ನು ಸರಿಹೊಂದಿಸುವುದಕ್ಕಾಗಿಯೋ ಸಾಲ (Loan) ಮಾಡಬೇಕಾದ ಅನಿವಾರ್ಯತೆಗೆ ವಾಣಿಜ್ಯೋದ್ಯಮಿಗಳು (Entrepreneurs) ಸಿಲುಕಿಕೊಳ್ಳುವುದು ಸಹಜ. ಎಲ್ಲದಕ್ಕಿಂತ ಮುಖ್ಯವಾಗಿ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗಲು ಅವರಿಗೆ ಮುಖ್ಯವಾಗಿ ಬೇಕಾಗುವುದು ಬಂಡವಾಳ. ವಿವಿಧ ವ್ಯಾಪಾರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಹಣವನ್ನು ಸಂಗ್ರಹಿಸಲು ವಾಣಿಜ್ಯೋದ್ಯಮಿಗೆ ಎರಡು ಮೂಲಗಳಿವೆ. ಮೊದಲನೆಯದು ಅವರ ಉಳಿತಾಯದಿಂದ ಮತ್ತು ಇನ್ನೊಂದು ಬಾಹ್ಯ ಮೂಲಗಳು. ಬಂಡವಾಳದ ಅಗತ್ಯಕ್ಕಾಗಿ ಉಳಿತಾಯವನ್ನು ಬಳಸುವುದು ಉತ್ತಮ ಆಯ್ಕೆ ಎಂದಿಗೂ ಅಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ, ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಬಯಸುವ ಉದ್ಯಮಿಗಳು ಹೊರಗಿನಿಂದ ಬಂಡವಾಳ ಸಂಗ್ರಹಣೆಗೆ ಒತ್ತು ನೀಡುತ್ತಾರೆ.
ಬಂಡವಾಳ ಸಂಗ್ರಹಣೆಗೆ ಅಲ್ಪಾವಧಿ ಉದ್ಯಮ ಸಾಲ ಅಥವಾ ಶಾರ್ಟ್ ಟರ್ಮ್ ಬ್ಯುಸಿನೆಸ್ ಲೋನ್ ಒಂದು ಆಯ್ಕೆ. ಈ ಸಾಲ ಕೆಲವು ಸಾಧಕ-ಬಾಧಕಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಇಲ್ಲಿ ನೀಡಲಾಗಿದೆ.
ಅಲ್ಪಾವಧಿ ಉದ್ಯಮ ಸಾಲದ ಲಾಭಗಳು
ತಕ್ಷಣದ ಬಂಡವಾಳ: ತ್ವತರಿತವಾಗಿ ಬಂಡವಾಳ ಒದಗಿಸುವುದಕ್ಕೆ ಈ ಸಾಲ ಉತ್ತಮ ಆಯ್ಕೆ. ಸಾಲ ಮಂಜೂರಾತಿ ಪ್ರಕ್ರಿಯೆ ಸಹ ಅಷ್ಟೆ ತ್ವರಿತವಾಗಿ ನಡೆಯುವುದರಿಂದ 48 ಗಂಟೆಗಳ ಒಳಗೆ ಹಣ ದೊರೆಯುತ್ತದೆ.
ಯಾವುದೇ ಕ್ರೆಡಿಟ್ ಚೆಕ್‌ಗಳಿಲ್ಲ: ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರದವರಿಗೆ ಸಾಲ ಸಿಗುವ ಸಾಧ್ಯತೆಗಳು ಕಡಿಮೆಯೇ. ಆದರೆ ಕೆಲವು ಹಣಕಾಸು ಸಂಸ್ಥೆಗಳು ವ್ಯಾಪಕವಾದ ಕ್ರೆಡಿಟ್ ಸ್ಕೋರ್ ಪರಿಶೀಲನೆಗಳಿಲ್ಲದೆಯೇ ಅಲ್ಪಾವಧಿಯ ಸಾಲ ಒದಗಿಸುತ್ತವೆ. ಅರ್ಜಿದಾರರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಅವರು ತಕ್ಷಣವೇ ಸಾಲದ ಮೊತ್ತ ಪಡೆದುಕೊಳ್ಳುತ್ತಾರೆ.
ಉತ್ತಮ ನಿಯಂತ್ರಣ: ನಿಧಿ ಸಂಗ್ರಹಿಸಲು ವಾಣಿಜ್ಯೋದ್ಯಮಿಗಳಿಗೆ ಎರಡು ಆಯ್ಕೆಗಳಿವೆ. ವಿಸಿ ಫಂಡಿಂಗ್ ಅಥವಾ ಉದ್ಯಮ ಸಾಲಗಳು ಮೊದಲ ಆಯ್ಕೆ. ತಮ್ಮ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಫಂಡ್ ಸಂಗ್ರಹಿಸಬಹುದು. ಆದರೆ ಇದರಿಂದ ಕಂಪನಿ ಮೇಲಿನ ಹಿಡಿತ ಕಡಿಮೆಯಾಗಬಹುದು. ಇದಕ್ಕೆ ಬದಲಾಗಿ ಸಣ್ಣ ಉದ್ಯಮ ಸಾಲ ಪಡೆದುಕೊಂಡರೆ ಕಂಪನಿ ಮೇಲಿನ ಹಿಡಿತ ತಪ್ಪುವುದಿಲ್ಲ. ಆದರೆ ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ತುಂಬಬೇಕಾಗುತ್ತದೆ ಎಂಬುದು ನೆನಪಿರಲಿ.
ಅಲ್ಪಾವಧಿಯ ಹೊಣೆಗಾರಿಕೆ: ಅಲ್ಪಾವಧಿಯ ಉದ್ಯಮ ಸಾಲಗಳು ಮರುಪಾವತಿಗೆ ಕಡಿಮೆ ಅವಧಿ ಹೊಂದಿರುತ್ತವೆ. ಇಎಂಐ ಮಾದರಿಯಲ್ಲಿ ಸಾಲವನ್ನು ಮರುಪಾವತಿ ಮಾಡಿಕೊಳ್ಳುತ್ತಾ ಬರಬಹುದು.
ಅಲ್ಪಾವಧಿ ಉದ್ಯಮ ಸಾಲದ ಸವಾಲುಗಳು
ಹೆಚ್ಚಿನ ಇಎಂಐ: ದೀರ್ಘಾವಧಿ ಉದ್ಯಮ ಸಾಲಕ್ಕೆ ಸಾಮಾನ್ಯವಾಗಿ ಬಡ್ಡಿ ದರ ಕಡಿಮೆ ಇದ್ದರೆ ಅಲ್ಪಾವಧಿ ಸಾಲಕ್ಕೆ ಜಾಸ್ತಿ ಇರುತ್ತದೆ. ಹೀಗಾಗಿ, ಅಲ್ಪಾವಧಿಯ ವ್ಯಾಪಾರ ಸಾಲಗಳ ಇಎಂಐ ಮೊತ್ತ (EMI)ಹೆಚ್ಚಿರುತ್ತವೆ. ಇವುಗಳು ಅಸಲು ಮೊತ್ತ ಮತ್ತು ಬಡ್ಡಿಯ ಒಂದು ಭಾಗವನ್ನು ಒಳಗೊಂಡಿರುತ್ತವೆ. ಇದು ಮಾಸಿಕವಾಗಿ ಹೆಚ್ಚಿನ ಮೊತ್ತ ಪಾವತಿ ಮಾಡಬೇಕಾದ ಒತ್ತಡಕ್ಕೆ ನಿಮ್ಮನ್ನು ಸಿಲುಕಿಸಬಹುದು.
ಅಧಿಕ-ಬಡ್ಡಿ ದರಗಳು: ಮೊದಲೇ ಹೇಳಿದಂತೆ ಅಲ್ಪಾವಧಿ ಸಾಲದ ಬಡ್ಡಿ ದರ ದೀರ್ಘಾವಧಿ ಸಾಲದ ಬಡ್ಡಿ ದರಕ್ಕಿಂತ ಅಧಿಕ. ಈ ಸಾಲ ಮಾಡಿದಾಗ ಹೆಚ್ಚಿನ ಬಡ್ಡಿ ದರ ಪಾವತಿ ಮಾಡಬೇಕಾಗಿರುವುದು ಅನಿವಾರ್ಯ.
ಹಣಕಾಸಿನ ಬಾಧ್ಯತೆಗಳು: ಅಲ್ಪಾವಧಿಯ ಉದ್ಯಮ ಸಾಲಗಳು ಹಣಕಾಸಿನ ಹೊಣೆಗಾರಿಕೆಯನ್ನು ಸೃಷ್ಟಿಸುತ್ತವೆ. ನಿಮ್ಮ ಬಳಿ ಸಾಕಷ್ಟು ನಗದು ಇಲ್ಲವಾದ ಸಂದರ್ಭ ಎದುರಾದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು.
ಅರ್ಹತೆಯ ಮಾನದಂಡ: ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವ ಉದ್ಯಮಿಗಳಿಗೆ ಮಾತ್ರ ಸಾಲದಾತರು ಉದ್ಯಮ ಸಾಲ ನೀಡುತ್ತಾರೆ. ಎಲ್ಲ ಸಂದರ್ಭಗಳಲ್ಲಿ ಸಣ್ಣ ಉದ್ಯಮಿಗಳಿಗೆ ಈ ಅರ್ಹತಾ ಮಾನದಂಡಗಳನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಾಗದೆ ಇರಬಹುದು.
ಇದನ್ನೂ ಓದಿ: Entrepreneurs Day 2022: ಇಂದು ವಾಣಿಜ್ಯೋದ್ಯಮಿಗಳ ದಿನ; ಭಾರತದ ಟಾಪ್ 10 ಉದ್ಯಮಿಗಳಿವರು