ನವದೆಹಲಿ, ಡಿಸೆಂಬರ್ 31: ಇಪಿಎಫ್ನಲ್ಲಿನ ಹಣ ಹಿಂಪಡೆಯುವ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಇಪಿಎಫ್ ನಿಯಮಗಳು ಹಾಗೂ ಕ್ಲೇಮ್ ಪ್ರಕ್ರಿಯೆಗಳು ಹೆಚ್ಚು ಸರಳಗೊಂಡಿವೆ. ಆದರೂ ಕೂಡ ತುರ್ತು ಸಂದರ್ಭದಲ್ಲಿ ಇಪಿಎಫ್ ಹಣ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಈ ಕೊರತೆಯನ್ನು ನೀಗಿಸಿ, ಇಪಿಎಫ್ ಸದಸ್ಯರಿಗೆ ತುರ್ತುಕಾಲದಲ್ಲಿ ಹಣ ಬಳಸಿಕೊಳ್ಳಲು ಅನುವಾಗುವಂತೆ ಮಾರ್ಗೋಪಾಯ ಹುಡುಕಲಾಗುತ್ತಿದೆ. ಇ ವ್ಯಾಲಟ್ ಮತ್ತು ಎಟಿಎಂ ವಿತ್ಡ್ರಾಯಲ್ ಸೌಲಭ್ಯವನ್ನು ನೀಡುವ ಕುರಿತು ಯೋಚಿಸಲಾಗುತ್ತಿದೆ. 2025ರಲ್ಲಿ ಇಪಿಎಫ್ಒದಿಂದ ಈ ಹೊಸ ಫೀಚರ್ಗಳು ಬರಬಹುದು.
ಇಪಿಎಫ್ನಿಂದ ಹಣ ಹಿಂಪಡೆಯಬೇಕಾದರೆ ಮೊದಲು ಹಣಕ್ಕೆ ಕ್ಲೇಮ್ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಸಮ್ಮತವಾಗಿ 7ರಿಂದ 15 ದಿನದಲ್ಲಿ ಆ ಹಣ ಬ್ಯಾಂಕ್ ಖಾತೆಗೆ ರವಾನೆಯಾಗುತ್ತದೆ. ಆಗ ಆ ಹಣವನ್ನು ಹಿಂಪಡೆಯಬಹುದು. ಆದರೆ, ಸರ್ಕಾರವು ಮಹತ್ವದ ಆಲೋಚನೆ ಮಾಡಿದೆ. ಇಪಿಎಫ್ ಅಕೌಂಟ್ನಲ್ಲಿರುವ ಹಣವನ್ನು ನೇರವಾಗಿ ಎಟಿಎಂಗಳಲ್ಲಿ ವಿತ್ಡ್ರಾ ಮಾಡುವ ಅವಕಾಶ ಕಲ್ಪಿಸಲು ಮುಂದಾಗಿದೆ. ಅಂದರೆ, ನೀವು ಕ್ಲೇಮ್ಗೆ ಅರ್ಜಿ ಹಾಕುವ ಅವಶ್ಯಕತೆ ಇರುವುದಿಲ್ಲ.
ಇದನ್ನೂ ಓದಿ: ಬರುತ್ತಿದೆ ಇಪಿಎಫ್ಒ 3.0: ನಿಮ್ಮ ಪಿಎಫ್ ಖಾತೆಗೆ ಇಷ್ಟಬಂದಷ್ಟು ಹಣ ಸೇರಿಸಿ; ಎಟಿಎಂನಲ್ಲೇ ವಿತ್ಡ್ರಾ ಮಾಡಿ
ಇಪಿಎಫ್ಒದಿಂದ ನಿಮಗೆ ಎಟಿಎಂ ರೀತಿಯ ಒಂದು ಕಾರ್ಡ್ ಅನ್ನು ನೀಡಲಾಗುತ್ತದೆ. ಅದನ್ನು ಎಟಿಎಂಗಳಲ್ಲಿ ಬಳಸಿ ಹಣ ಪಡೆಯಬಹುದು. ಇಪಿಎಫ್ ಅಕೌಂಟ್ನಲ್ಲಿ ಶೇ. 50ರಷ್ಟು ಮೊತ್ತದವರೆಗೆ ವಿತ್ಡ್ರಾ ಮಾಡಲು ಮಿತಿ ಹಾಕಲಾಗಿರುತ್ತದೆ. ಆದರೂ ಕೂಡ ತುರ್ತು ಸಂದರ್ಭದಲ್ಲಿ ಇದು ಬಹಳ ಉಪಯೋಗಕ್ಕೆ ಬರುವ ಸೌಲಭ್ಯ.
ಇಪಿಎಫ್ನ ಮತ್ತೊಂದು ಹೊಸ ಫೀಚರ್ ಎಂದರೆ ಇ-ವ್ಯಾಲಟ್ನದ್ದು. ನೀವು ನಿಮ್ಮ ಇಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸಿದಾಗ ಅದು ನೇರವಾಗಿ ಇ-ವ್ಯಾಲಟ್ಗೆ (e Wallet) ರವಾನೆಯಾಗುವಂತಹ ಒಂದು ಸಾಧನವನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ಗಳ ಜೊತೆ ಮಾತನಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ವಿವರ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಇಎಲ್ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಮಾಡಲು ಡೆಡ್ಲೈನ್ ವಿಸ್ತರಣೆ
ಅಧಿಕ ವೇತನಕ್ಕೆ ಸಂಬಂಧಿಸಿದ ಬಾಕಿ ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಇದ್ದ ಡೆಡ್ಲೈನ್ ಅನ್ನು 2025ರ ಜನವರಿ 31ರವರೆಗೂ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಅಪೂರ್ಣ ಮಾಹಿತಿ ಇದ್ದು ಅದನ್ನು ಅಪ್ಡೇಟ್ ಮಾಡಲು ಹಾಗೂ ಹೆಚ್ಚುವರಿ ಮಾಹಿತಿ ಸೇರಿಸುವ ಅವಶ್ಯಕತೆ ಇದ್ದರೆ ಅದನ್ನು ಮಾಡಲು ಜನವರಿ 15ರವರೆಗೆ ಕಾಲಾವಕಾಶ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ