ಬರುತ್ತಿದೆ ಇಪಿಎಫ್ಒ 3.0: ನಿಮ್ಮ ಪಿಎಫ್ ಖಾತೆಗೆ ಇಷ್ಟಬಂದಷ್ಟು ಹಣ ಸೇರಿಸಿ; ಎಟಿಎಂನಲ್ಲೇ ವಿತ್ಡ್ರಾ ಮಾಡಿ
EPFO 3.0 with new features: ಇಪಿಎಫ್ಒ ಕಾರ್ಯನಿರ್ವಹಣೆಯಲ್ಲಿ ನಿರಂತರ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತಷ್ಟು ಹೆಜ್ಜೆಗಳನ್ನು ಇರಿಸುತ್ತಿದೆ. ಪಿಎಫ್ ಹಣವನ್ನು ಎಟಿಎಂಗಳಲ್ಲಿ ವಿತ್ಡ್ರಾ ಮಾಡಲು ಕಾರ್ಡ್ ನೀಡುವ ಸಾಧ್ಯತೆ ಇದೆ. ಪಿಎಫ್ ಖಾತೆಗೆ ಉದ್ಯೋಗಿಯ ಸಂಬಳದಿಂದ ಹಣ ಹಾಕುವ ಮಿತಿಯನ್ನು ತೆಗೆದುಹಾಕಲು ಸರ್ಕಾರ ಯೋಜಿಸಿದೆ.
ನವದೆಹಲಿ, ಡಿಸೆಂಬರ್ 6: ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಲ್ಲಿ ಇಪಿಎಫ್ ಖಾತೆಗಳ ನಿರ್ವಹಣೆಯನ್ನು ಕ್ರಮೇಣವಾಗಿ ಸರಳಗೊಳಿಸಲಾಗುತ್ತಿದೆ, ಹೆಚ್ಚು ಪರಿಣಾಮಕಾರಿಯಾಗಿಸಲಾಗುತ್ತಿದೆ. ಈಗ ಇಪಿಎಫ್ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುತ್ತಿದೆ. ಮಾಧ್ಯಮಗಳ ವರದಿಯ ಪ್ರಕಾರ ಇಪಿಎಫ್ಒ 3.0 ಆವೃತ್ತಿಯಲ್ಲಿ ಉದ್ಯೋಗಿಗಳಿಗೆ ಅನುಕೂಲವಾಗುವ ಕೆಲ ಫೀಚರ್ಗಳನ್ನು ಜಾರಿಗೊಳಿಸಲಾಗುತ್ತಿದೆಯಂತೆ. ಎಟಿಎಂನಲ್ಲಿ ಪಿಎಫ್ ಹಣ ವಿತ್ಡ್ರಾ ಮಾಡುವುದು, ಇಪಿಎಫ್ ಖಾತೆಗೆ ಹೆಚ್ಚು ಸೇವಿಂಗ್ಸ್ ಸೇರಿಸುವುದು, ಪೆನ್ಷನ್ ಆಗಿ ಪರಿವರ್ತಿಸುವುದು ಇತ್ಯಾದಿ ಆಯ್ಕೆಗಳು ಮತ್ತು ಸೌಲಭ್ಯಗಳು ಮುಂಬರುವ ದಿನಗಳಲ್ಲಿ ಸೇರ್ಪಡೆಯಾಗಲಿವೆ ಎಂದು ಇಟಿ ನೌ ವೆಬ್ಸೈಟ್ನಲ್ಲಿ ವರದಿಯಾಗಿದೆ.
ಪಿಎಫ್ ಹಣ ವಿತ್ಡ್ರಾ ಮಾಡಲು ಎಟಿಎಂ ಕಾರ್ಡ್
ಇಪಿಎಫ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಸುಲಭವಾಗುವಂತೆ ಕಾರ್ಡ್ವೊಂದನ್ನು ನೀಡಲು ಕಾರ್ಮಿಕ ಸಚಿವಾಲಯ ಯೋಜಿಸುತ್ತಿದೆ. ಈ ಕಾರ್ಡ್ ಅನ್ನು ಬಳಸಿ ಎಟಿಎಂಗಳಲ್ಲಿ ಹಣ ಪಡೆಯಬಹುದು. ನಿಮ್ಮ ಇಪಿಎಫ್ ಅಕೌಂಟ್ನಲ್ಲಿನ ಶೇ. 50ರಷ್ಟು ಹಣವನ್ನು ಮಾತ್ರವೇ ವಿತ್ಡ್ರಾ ಮಾಡಲು ಮಿತಿ ಇರುತ್ತದೆ. ವರದಿ ಪ್ರಕಾರ 2025ರ ಮೇ-ಜೂನ್ ತಿಂಗಳಲ್ಲಿ ಈ ಸೌಲಭ್ಯ ಸಿಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು
ಇಪಿಎಫ್ ಖಾತೆಗೆ ಹಣ ತುಂಬಲು ಮಿತಿ ಇಲ್ಲ….
ಸದ್ಯ ಇರುವ ನಿಯಮ ಪ್ರಕಾರ ಇಪಿಎಫ್ ಸದಸ್ಯರ ಮೂಲ ವೇತನದ ಶೇ. 12ರಷ್ಟು ಹಣವನ್ನು ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಉದ್ಯೋಗದಾತರು ಅಥವಾ ಕಂಪನಿಯ ವತಿಯಿಂದ ಅಷ್ಟೇ ಪ್ರಮಾಣದ ಹಣವು ಖಾತೆಗೆ ಸೇರ್ಪಡೆಯಾಗುತ್ತದೆ. ಈಗ ಸರ್ಕಾರವು ಈ 12 ಪರ್ಸೆಂಟ್ ಮಿತಿಯನ್ನು ತೆಗೆದುಹಾಕುವ ಆಲೋಚನೆಯಲ್ಲಿದೆ.
ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಎಷ್ಟು ಬೇಕಾದರೂ ಹಣವನ್ನು ಇಪಿಎಫ್ಗೆ ಸೇರ್ಪಡೆಯಾಗಿಸಬಹುದು. ಆದರೆ, ಕಂಪನಿ ಪಾಲಿನ ಕೊಡುಗೆಯಲ್ಲಿ ಹೆಚ್ಚಳ ಇರುವುದಿಲ್ಲ. ಕಂಪನಿಯು ಶೇ. 12ರಷ್ಟು ಹಣದ ಕೊಡುಗೆಯನ್ನು ಮುಂದುವರಿಸುತ್ತದೆ. ಉದ್ಯೋಗಿ ವೈಯಕ್ತಿಕವಾಗಿ ಹೆಚ್ಚು ಹಣವನ್ನು ಇಪಿಎಫ್ಗೆ ಸೇರಿಸಲು ಮಾತ್ರ ಅವಕಾಶ ಇರುತ್ತದೆ. ಆದರೂ ಕೂಡ ಈ ಸೌಲಭ್ಯವು ಉದ್ಯೋಗಿಗೆ ಭವಿಷ್ಯದಲ್ಲಿ ಬಹಳ ಸಹಾಯಕವಾಗಲಿದೆ. ಇದೇ ರೀತಿಯಲ್ಲಿ ವಾಲಂಟರಿ ಪಿಎಫ್ ಫೀಚರ್ ಜಾರಿಯಲ್ಲಿ ಇದೆ.
ಇಪಿಎಫ್ಗೆ ಸಂಬಳ ಮಿತಿಯೂ ಹೆಚ್ಚಳ ಸಾಧ್ಯತೆ
ಸದ್ಯ ಇಪಿಎಫ್ಗೆ ಸಂಬಳದ ಮಿತಿ 15,000 ರೂ ಇದೆ. ಅಂದರೆ, 15,000 ರೂವರೆಗಿನ ಮೂಲವೇತನಕ್ಕೆ ಮಾತ್ರವೇ ಇಪಿಎಫ್ ಅನ್ವಯ ಆಗುತ್ತದೆ. ಈಗ ಈ ಮಿತಿಯನ್ನು ಹೆಚ್ಚಿಸುವ ಇರಾದೆಯಲ್ಲಿ ಸರ್ಕಾರ ಇದೆ.
ಇದನ್ನೂ ಓದಿ: ಬ್ಯಾಂಕ್ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…
ಸೇರ್ಪಡೆ ಸಾಧ್ಯತೆ ಇರುವ ಮತ್ತೊಂದು ಫೀಚರ್ ಎಂದರೆ ಅದು ಪಿಂಚಣಿಗೆ ಪರಿವರ್ತನೆಯಾಗುವಂಥದ್ದು. ಇಪಿಎಫ್ನಲ್ಲಿನ ನಿಧಿಯನ್ನು ಉದ್ಯೋಗಿಯ ಸಮ್ಮತಿ ಮೇರೆಗೆ ಪಿಂಚಣಿಯಾಗಿ ಪರಿವರ್ತಿಸುವ ಫೀಚರ್ ಅನ್ನು ತರಲು ಸರ್ಕಾರ ಹೊರಟಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ