EPFO New Subscribers: ಅಕ್ಟೋಬರ್​ನಲ್ಲಿ 12.94 ಲಕ್ಷ ಮಂದಿ ಇಪಿಎಫ್​ಒಗೆ ಸೇರ್ಪಡೆ; ಉದ್ಯೋಗ ಹೆಚ್ಚಳವೂ ಕಾರಣ

ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಇದು ಸೂಚಿಸಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

EPFO New Subscribers: ಅಕ್ಟೋಬರ್​ನಲ್ಲಿ 12.94 ಲಕ್ಷ ಮಂದಿ ಇಪಿಎಫ್​ಒಗೆ ಸೇರ್ಪಡೆ; ಉದ್ಯೋಗ ಹೆಚ್ಚಳವೂ ಕಾರಣ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Dec 21, 2022 | 5:06 PM

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್​ಒಗೆ (EPFO) ಅಕ್ಟೋಬರ್​ನಲ್ಲಿ 12.94 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ಇದು ಕಳೆದ ವರ್ಷ ಅಕ್ಟೋಬರ್​ಗೆ ಹೋಲಿಸಿದರೆ ಹೆಚ್ಚು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (Ministry of Labour and Employment) ತಿಳಿಸಿದೆ. 12.94 ಲಕ್ಷ ಮಂದಿ ಹೊಸ ಸದಸ್ಯರ ಪೈಕಿ ಸುಮಾರು 7.28 ಲಕ್ಷ ಹೊಸ ಸದಸ್ಯರು ಇದೇ ಮೊದಲ ಬಾರಿಗೆ ಇಪಿಎಫ್​ಒ ವ್ಯಾಪ್ತಿಗೆ ಬಂದಿದ್ದಾರೆ. ಈ ಪೈಕಿ 18ರಿಂದ 21 ವರ್ಷ ವಯೋಮಾನದ 2.19 ಲಕ್ಷ ಜನ ಇದ್ದಾರೆ. ಸುಮಾರು ಶೇಕಡಾ 57.25ರಷ್ಟು ಮಂದಿ 18ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಇದು ಸೂಚಿಸಿದೆ. ಇದರೊಂದಿಗೆ, ಶಿಕ್ಷಣ ಪಡೆದ ಕೂಡಲೇ ಯುವ ಜನರು ಸಂಘಟಿತ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿರುವುದು ತಿಳಿದುಬಂದಿದೆ. ಜತೆಗೆ, ಸಂಘಟಿತ ವಲಯದ ಉದ್ಯೋಗಾವಕಾಶ ಹೆಚ್ಚುತ್ತಿರುವುದರ ಸಂಕೇತವೂ ಆಗಿದೆ ಎಂದು ಸಚಿವಾಲಯ ಹೇಳಿದೆ. ಸುಮಾರು 5.66 ಲಕ್ಷ ಮಂದಿ ಒಮ್ಮೆ ನಿರ್ಗಮಿಸಿ ಮತ್ತೆ ಸೇರ್ಪಡೆಯಾಗಿದ್ದಾರೆ. ಇದು ಉದ್ಯೋಗ ಬದಲಾವಣೆಯ ಸೂಚಕ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: Bengaluru House Rent: ಬೆಂಗಳೂರಿನ ಬಾಡಿಗೆ ನಿವಾಸಿಗಳಿಗೆ ದರ ಏರಿಕೆಯ ಶಾಕ್; ಮನೆ ಬಾಡಿಗೆ ಶೇ 45ರವರೆಗೆ ಹೆಚ್ಚಳ

ರಾಜ್ಯವಾರು ಅಂಕಿಅಂಶಗಳೂ ತಿಂಗಳಿನಿಂದ ತಿಂಗಳಿಗೆ ಇಪಿಎಫ್​ಒಗೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಸೂಚಿಸಿದೆ. ಕೇರಳ, ಮಧ್ಯ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಅಂದಾಜು 7.78 ಲಕ್ಷ ಸದಸ್ಯರು ಅಕ್ಟೋಬರ್​ನಲ್ಲಿ ಇಪಿಎಫ್​ಒಗೆ ಏರ್ಪಡೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಉದ್ಯೋಗ ಹೆಚ್ಚಳದ ಸಂಕೇತ

ಉದ್ಯೋಗಕ್ಕೆ ಹೊಸದಾಗಿ ಸೇರಿದವರು ಇಪಿಎಫ್​ಒಗೆ ಸೇರುವುದು ಸಹಜ. ಹೀಗಾಗಿ ಇಪಿಎಫ್​ಒ ಸದಸ್ಯರ ಸಂಖ್ಯೆ ಹೆಚ್ಚಾಗುವುದೆಂದರೆ ಉದ್ಯೋಗ ಹೆಚ್ಚಳದ ಸಂಕೇತವೂ ಹೌದು. ಆದರೆ ಇನ್ನೊಂದು ಅಂಶವನ್ನು ಇಲ್ಲಿ ಗಮನಿಸಬೇಕು. ಅದೆಂದರೆ, ಉದ್ಯೋಗ ತೊರೆದು ಹೊಸ ಉದ್ಯೋಗಕ್ಕೆ ಸೇರಿದವರ ಲೆಕ್ಕಾಚಾರವೂ ಹೊಸ ಇಪಿಎಫ್​ಒ ಸದಸ್ಯರ ಲೆಕ್ಕದಲ್ಲಿ ಬರುತ್ತದೆ. ಇನ್ನು ಕೆಲವು ಕಂಪನಿಗಳು ಇಪಿಎಫ್​ಒ ನಿಯಮದ ವ್ಯಾಪ್ತಿಗೆ ಹೊಸದಾಗಿ ಬರುವುದರಿಂದಲೂ ಆ ಕಂಪನಿಗಳ ಉದ್ಯೋಗಿಗಳು ಇಪಿಎಫ್​ಒದ ಹೊಸ ಸದಸ್ಯರಾಗುತ್ತಾರೆ. ಆದರೆ, ಇದನ್ನು ಹೊಸದಾಗಿ ಸೃಷ್ಟಿಯಾದ ಉದ್ಯೋಗ ಎಂದು ಪರಿಗಣಿಸಲಾಗದು. ಅಕ್ಟೋಬರ್​ನಲ್ಲಿ ಇಪಿಎಫ್​ಒಗೆ ಸೇರ್ಪಡೆಯಾದ 12.94 ಲಕ್ಷ ಮಂದಿಯ ಪೈಕಿ 18ರಿಂದ 21 ವರ್ಷ ವಯೋಮಾನದ 2.19 ಲಕ್ಷ ಜನ ಇದ್ದಾರೆ ಎಂದು ಸಚಿವಾಲಯ ಹೇಳಿದೆ. ಇವರೆಲ್ಲ ಮೊದಲ ಬಾರಿ ಉದ್ಯೋಗಕ್ಕೆ ಸೇರಿದವರೆಂದು ಅಂದಾಜಿಸಲಾಗಿದ್ದು, ಹೊಸ ಉದ್ಯೋಗ ಸೃಷ್ಟಿ ಎನ್ನಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ