ನಿಮ್ಮ ಪಿಎಫ್ ಖಾತೆಗೆ ಬಡ್ಡಿಹಣ ಯಾವಾಗ ಕ್ರೆಡಿಟ್ ಆಗುತ್ತೆ? ಇಲ್ಲಿದೆ ಇಪಿಎಫ್ಒ ಅಪ್ಡೇಟ್ಸ್
EPF Interest: ಕೇಂದ್ರ ಸರ್ಕಾರ 2022-23ರ ಹಣಕಾಸು ವರ್ಷಕ್ಕೆ ಪಿಎಫ್ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಕೊಡಲಿದೆ. ಇದು ಯಾವಾಗ ಕ್ರೆಡಿಟ್ ಆಗುತ್ತದೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಇದಕ್ಕೆ ಇಪಿಎಫ್ಒ ಸ್ಪಂದಿಸಿದೆ.
ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಗೆ ಉದ್ಯೋಗಿಯ ಸಂಬಳ ಹಾಗೂ ಉದ್ಯೋಗನೀಡುಗ (Employer) ಸಂಸ್ಥೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣ ತುಂಬಿಸುತ್ತಾರೆ. ಈ ಹಣಕ್ಕೆ ಸರ್ಕಾರ ವರ್ಷಕ್ಕೊಮ್ಮೆ ಬಡ್ಡಿಹಣ ಸೇರಿಸುತ್ತದೆ. ಈ ಬಡ್ಡಿಹಣವನ್ನು (PF Interest) ಪ್ರತೀ ವರ್ಷವೂ ಸರ್ಕಾರವೇ ನಿಗದಿ ಮಾಡುತ್ತದೆ. 2022-23ರ ಹಣಕಾಸು ವರ್ಷಕ್ಕೆ ಇಪಿಎಫ್ ನಿಧಿ ಮೇಲೆ ಶೇ. 8.15ರಷ್ಟು ಬಡ್ಡಿ ಕೊಡಲೆಂದು ನಿರ್ಧರಿಸಲಾಗಿದೆ. ಇಪಿಎಫ್ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟೀ ಮಂಡಳಿ (CBT- Central Board of Trustees) ಈ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ನೀಡಬೇಕೆಂದು ಮಾಡಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಜುಲೈ 24ರಂದು ಒಪ್ಪಿಗೆ ಕೊಟ್ಟಿದೆ. ಅದಾದ ಬಳಿಕ ಪಿಎಫ್ ಸದಸ್ಯರು ತಮ್ಮ ಖಾತೆಗೆ ಬಡ್ಡಿ ಜಮೆ ಆಗುತ್ತದೆಂದು ಕಾಯುತ್ತಿದ್ದಾರೆ. ಇಲ್ಲಿಯವರೆಗೂ ಆಗಿಲ್ಲ.
ಟ್ವಿಟ್ಟರ್ನಲ್ಲಿ ಹಲವು ಇಪಿಎಫ್ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇಪಿಎಫ್ಒ ಸಂಸ್ಥೆ ಮಾಡಿದ ವಿಡಿಯೋ ಪೋಸ್ಟ್ವೊಂದಕ್ಕೆ ಪ್ರತಿಕ್ರಿಯೆಯಾಗಿ ಕೆಲ ಸದಸ್ಯರು ಇಪಿಎಫ್ ಬಡ್ಡಿ ಹಣ ಯಾವಾಗ ಕ್ರೆಡಿಟ್ ಆಗುತ್ತೆ ಎಂದು ಕೇಳಿದ್ದಾರೆ. ಇದಕ್ಕೆ ಸ್ಪಂದಿಸಿದ ಇಪಿಎಫ್ಒ, ಯಾವಾಗ ಬಡ್ಡಿಹಣ ಕೊಟ್ಟರೂ ಅದರಲ್ಲಿ ವ್ಯತ್ಯಯ ಆಗಲ್ಲ ಎಂದಿದೆ.
ಇದನ್ನೂ ಓದಿ: ಭರ್ಜರಿಯಾಗಿ ಬಡ್ಡಿದರ ಹೆಚ್ಚಿಸಿದ ಸೂರ್ಯೋದಯ್ ಬ್ಯಾಂಕ್; ಎಫ್ಡಿಗೆ ಶೇ. 9.10ರವರೆಗೂ ಬಡ್ಡಿ
‘ಈ ಪ್ರಕ್ರಿಯೆ (ಬಡ್ಡಿಹಣ ವಿಲೇವಾರಿ ಮಾಡುವ) ಚಾಲನೆಯಲ್ಲಿದೆ. ಬಹಳ ಶೀಘ್ರದಲ್ಲಿ ಇದು ಸೇರಬಹುದು. ಯಾವಾಗಲೇ ಬಡ್ಡಿ ಜಮೆಯಾದರೂ ಪೂರ್ಣಮೊತ್ತ ಕೂಡುತ್ತದೆ. ಬಡ್ಡಿಯಲ್ಲಿ ಏನೂ ಕಡಿಮೆ ಆಗುವುದಿಲ್ಲ. ದಯವಿಟ್ಟು ತಾಳ್ಮೆ ಇರಲಿ’ ಎಂದು ಇಪಿಎಫ್ಒ ಟ್ವೀಟ್ ಮಾಡಿದೆ.
The process is in pipeline and may be shown there very shortly. Whenever the interest will be credited, it will be accumulated and paid in full. There would be no loss of interest. Please maintain patience.
— EPFO (@socialepfo) August 7, 2023
ಇತರ ಸಮಸ್ಯೆಗಳಿಗೂ ಇಪಿಎಫ್ಒ ಸ್ಪಂದನೆ
ಹಾಗೆಯೇ, ಮತ್ತೊಬ್ಬರು, ತಮ್ಮ ಪಿಎಫ್ ಕ್ಲೇಮ್ ಅರ್ಜಿಗೆ ಆಗಸ್ಟ್ 1ರಂದು ಅನುಮೋದನೆ ಸಿಕ್ಕಿದೆ. ಆದರೆ, ಹಣ ಇನ್ನೂ ಕ್ರೆಡಿಟ್ ಆಗಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಇಪಿಎಫ್ಒ, ಪಿಎಫ್ ಹಣ ಬಿಡುಗಡೆ ಆಗಲು 20 ದಿನ ಬೇಕಾಗುತ್ತದೆ ಎಂದಿದೆ.
ಇನ್ನು, ಪಿಎಫ್ ಟ್ರಾನ್ಸ್ಫರ್ ಸೇರಿದಂತೆ ಏನಾದರೂ ಸಮಸ್ಯೆಗಳು ಕಂಡುಬಂದರೆ epfigms.gov.in ಜಾಲತಾಣಕ್ಕೆ ಹೋಗಿ ದೂರನ್ನು ದಾಖಲು ಮಾಡುವಂತೆಯೂ ಇಪಿಎಫ್ ಮಾರ್ಗದರ್ಶನ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Mon, 7 August 23