ನವದೆಹಲಿ, ಜನವರಿ 21: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಯಾವುದೋ ಮೂಲೆಯಲ್ಲಿ ಎಲೆಮರೆಕಾಯಿಯಂತೆ ಇರುವ ವಿಶೇಷ ಪ್ರತಿಭೆ, ಕಲೆ, ಸಂಪ್ರದಾಯ, ಆಚರಣೆಗಳನ್ನು ಪ್ರಸ್ತಾಪಿಸಿ ಅವುಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಪ್ರಧಾನಿಗಳೇ ಮಾತನಾಡಿದ್ದಾರೆಂದು ಸಾಕಷ್ಟು ಕುತೂಹಲದ ಕಣ್ಣುಗಳು ಅತ್ತ ತಿರುಗುತ್ತವೆ. 2023ರ ವರ್ಷದಲ್ಲೂ ಮನ್ ಕೀ ಬಾತ್ ಕಾರ್ಯಕ್ರಮವೊಂದರಲ್ಲಿ ಏಟಿಕೊಪ್ಪಕ ಆಟಿಕೆ ಬಗ್ಗೆ ಪ್ರಧಾನಿಗಳು ಮಾತನಾಡಿದ್ದರು. ಸಿ.ವಿ. ರಾಜು ಎಂಬುವವರು ಈ ಕಲೆಯನ್ನು ಉಳಿಸಲು ಮಾಡಿದ ಶ್ರಮವನ್ನು ಪ್ರಶಂಸಿಸಿದ್ದರು. ಅಳಿವಿನಂಚಿನಲ್ಲಿದ್ದು, ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದ ಈ ಆಟಿಕೆ ಪರಂಪರೆಯು ಕಳೆದ ಕೆಲ ತಿಂಗಳಿಂದ ಹೊಸ ಕಳೆ ಪಡೆದುಕೊಂಡಿದೆ.
ಏಟಿಕೊಪ್ಪಕ ಆಟಿಕೆಗಳನ್ನು ಚನ್ನಪಟ್ಟಣದ ಬೊಂಬೆ ಕಲೆಗೆ ಹೋಲಿಸಬಹುದು. ಏಟಿಕೊಪ್ಪಕ ಎಂಬುದು ಆಂಧ್ರಪ್ರದೇಶದಲ್ಲಿ ಕಾಕಿನಾಡ ಮತ್ತು ವಿಶಾಖಪಟ್ಟಣ ಮಧ್ಯದಲ್ಲಿ ಇರುವ ಆನಕಪಲ್ಲಿ ಎನ್ನುವ ಜಿಲ್ಲೆಯಲ್ಲಿರುವ ಒಂದು ಗ್ರಾಮ. ಈ ಗ್ರಾಮ ಹಾಗು ಸುತ್ತಲಿನ ಕೆಲ ಗ್ರಾಮಗಳ ಜನರು ವಿಶೇಷ ಆಟಿಕೆಗಳನ್ನು ಮಾಡುತ್ತಾರೆ. ಸ್ಥಳೀಯವಾಗಿ ಸಿಗುವ ಮತ್ತು ಬಹಳ ಮೃದುವಾಗಿರುವ ಅಂಕುಡು ಎನ್ನುವ ಮರದಿಂದ ಈ ಆಟಿಕೆಗಳನ್ನು ಮಾಡಲಾಗುತ್ತದೆ. ಆಟಿಕೆಗೆ ಬಳಸುವ ಎಲ್ಲಾ ವಸ್ತುಗಳೂ ಕೂಡ ನೈಸರ್ಗಿಕವಾಗಿವೆ. ಅಡಕೆ ಚೊಗರಿನ ಸಹಾಯದಿಂದ ಮಾಡಲಾದ ಬಣ್ಣವನ್ನು ಈ ಆಟಿಕೆಗಳಿಗೆ ಬಳಸಲಾಗುತ್ತದೆ. ಹಾಗಾಗಿ, ಇದು ಪರಿಶುದ್ಧ ನೈಸರ್ಗಿಕ ವಸ್ತುಗಳಿಂದ ಮಾಡಲಾಗುವ ಆಟಿಕೆ. ಮತ್ತೊಂದು ವಿಶೇಷ ಎಂದರೆ, ಈ ಆಟಿಕೆಯಲ್ಲಿ ಎಲ್ಲೂ ಕೂಡ ಚೂಪು ಭಾಗ ಇಲ್ಲ. ಮಕ್ಕಳಿಗೆ ಅಪಾಯ ತರುವುದಿಲ್ಲ. ಈ ಆಟಿಕೆಗೆ ಜಿಐ ಟ್ಯಾಗ್ ಇದೆ.
ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಹೊಸ ಟ್ರಂಪ್ ಮೀಮ್ ಕಾಯಿನ್, ಪತ್ನಿಯ ಹೊಸ ಕ್ರಿಪ್ಟೋಕಾಯಿನ್; ಏನಿದು ಮೀಮ್ ಕಾಯಿನ್?
ಮಾಹಿತಿ ಪ್ರಕಾರ, ಏಟಿಕೊಪ್ಪಕ ಆಟಿಕೆಗೆ ಐದಾರು ಶತಮಾನಗಳಷ್ಟು ಇತಿಹಾಸ ಇದೆ. ಆದರೆ, ಇಪ್ಪತ್ತನೇ ಶತಮಾನದ ಹೊತ್ತಿಗೆ ಈ ಬೊಂಬೆ ಪರಂಪರೆ ನಶಿಸುವ ಅಂಚಿಗೆ ಹೋಗಿತ್ತು. ಸಿ.ವಿ. ರಾಜು ಎಂಬುವವರು 1988ರಲ್ಲಿ ಏಟಿಕೊಪ್ಪಕ ಆಟಿಕೆ ಕಲೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಆರಂಭಿಸಿದರು. ಸ್ಥಳೀಯ ಕಲಾವಿದರೊಂದಿಗೆ ಸೇರಿ ಈ ಆಟಿಕೆಗಳು ದೇಶದ ಮೂಲೆ ಮೂಲೆ ತಲುಪಲು ಶ್ರಮಿಸಿದ್ದಾರೆ. 2023ರಲ್ಲಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಆಟಿಕೆ ಪರಂಪರೆ ಹಾಗೂ ಅದನ್ನು ಉಳಿಸಲು ಪ್ರಯತ್ನಿಸುತ್ತಿರುವ ಸಿ.ವಿ. ರಾಜು ಅವರನ್ನು ಪ್ರಶಂಸಿಸಿದ್ದಾರೆ.
It was during one of the #MannKiBaat episodes that we had talked about boosting toy manufacturing and powered by collective efforts across India, we’ve covered a lot of ground in that.
Our strides in the sector have boosted our quest for Aatmanirbharta and popularised… https://t.co/9YmECjt1h4
— Narendra Modi (@narendramodi) January 20, 2025
ಮನ್ ಕೀ ಬಾತ್ನಲ್ಲಿ ಪ್ರಸ್ತಾಪವಾದ ಬಳಿಕ ಸಾಕಷ್ಟು ಕುತೂಹಲದ ಕಣ್ಣುಗಳು ಏಟಿಕೊಪ್ಪಕ ಕಲೆಯತ್ತ ನೆಟ್ಟವು. ಆರು ತಿಂಗಳಲ್ಲಿ ಆ ಆಟಿಕೆಗಳ ಬಿಸಿನೆಸ್ ಬಹಳ ಚೆನ್ನಾಗಿ ಬೆಳೆದಿದೆ. ಹೆಚ್ಚು ಜನಪ್ರಿಯತೆ ಪಡೆದಿವೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸಮಾರಂಭ, ಮೊದಲ ಸಾಲಿನಲ್ಲೇ ಕಾಣಿಸಿಕೊಂಡ ಸಚಿವ ಜೈಶಂಕರ್
‘ಈ ಕಲೆ ದೀರ್ಘ ಕಾಲ ಉಳಿಯುವಂತೆ ಏನಾದರೂ ಮಾಡು ಎಂದು ನನ್ನ ಹಿರಿಯರು ಹೇಳಿದರು. ಈ ಕಲೆ ನಶಿಸಿದರೆ ಅದರ ಜೊತೆಗೆ ಒಂದು ಸಂಪ್ರದಾಯವೂ ನಶಿಸಿ ಹೋಗುತ್ತದೆ. ಈ ಕಲೆ ನಂಬಿ ಬದುಕುತ್ತಿರುವ 160 ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದನಿಸಿತು’ ಎಂದುಕೊಂಡು ಸಿ.ವಿ. ರಾಜು ಅವರು ಏಟಿಕೊಪ್ಪಕ ಆಟಿಕೆ ಕಲೆ ಉಳಿಸುವ ಸಂಕಲ್ಪ ತೊಟ್ಟರು. ದೇಶದ ಪ್ರಧಾನಿಗಳು ಆಡಿದ ಮಾತುಗಳೂ ಕೂಡ ಈ ಕಲೆ ಬೆಳಗಲು ಸಹಾಯವಾಯಿತು ಎಂದು ಹೇಳುತ್ತಾರೆ ಅವರು.
ಸಿ.ವಿ. ರಾಜು ಅವರಿಗೆ 2023ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಸಿಕ್ಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ