ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಕನ್ನಡದಲ್ಲೇ ಕಲಿಯಬೇಕು: ಆನ್​ಲೈನ್​ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ ಉದ್ಯಮಿ ಶ್ರೀಧರ್ ವೆಂಬು ಪೋಸ್ಟ್

Zoho founder Sridhar Vembu bats for education in mother tongue: ಭಾರತದಲ್ಲಿ ಎಲ್ಲಾ ಮಕ್ಕಳೂ ತಮ್ಮ ಮಾತೃಭಾಷೆಯಲ್ಲಿ ಪಾಠಗಳನ್ನು ಕಲಿಯಬೇಕು ಎನ್ನುವ ವಾದಕ್ಕೆ ಉದ್ಯಮಿ ಶ್ರೀಧರ್ ವೆಂಬು ಬೆಂಬಲ ನೀಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಾ ಮಕ್ಕಳೂ ಕನ್ನಡದಲ್ಲೇ ಕಲಿಯಬೇಕು, ಚೆನ್ನೈನಲ್ಲಿರುವವರು ತಮಿಳಲ್ಲಿ ಕಲಿಯಬೇಕು ಎಂದಿದ್ದಾರೆ. ಬೇರೆ ದೇಶಕ್ಕೆ ಹೋಗುವ ಭಾರತೀಯರು ಅಲ್ಲಿಯ ಭಾಷೆ ಕಲಿಯುವಂತೆ ಇಲ್ಲೂ ಯಾಕಾಗಬಾರದು ಎನ್ನುವುದು ವೆಂಬು ಪ್ರಶ್ನೆ.

ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಕನ್ನಡದಲ್ಲೇ ಕಲಿಯಬೇಕು: ಆನ್​ಲೈನ್​ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ ಉದ್ಯಮಿ ಶ್ರೀಧರ್ ವೆಂಬು ಪೋಸ್ಟ್
ಶ್ರೀಧರ್ ವೆಂಬು

Updated on: Aug 06, 2025 | 5:31 PM

ಬೆಂಗಳೂರು, ಆಗಸ್ಟ್ 6: ಜೋಹೋ ಕಾರ್ಪೊರೇಶನ್ ಸಂಸ್ಥಾಪಕ ಹಾಗು ಸದ್ಯ ಮುಖ್ಯ ವಿಜ್ಞಾನಿಯಾಗಿರುವ ಶ್ರೀಧರ್ ವೆಂಬು (Sridhar Vembu) ಪ್ರಾದೇಶಿಕ ಭಾಷೆಗಳ ಪರ ಧ್ವನಿ ಎತ್ತಿದ್ದಾರೆ. ಹಿಂದಿ ಬೇಡ, ಇಂಗ್ಲೀಷ್ ಇರಲಿ ಎಂದು ವಾದಿಸುತ್ತಿರುವವರಿಗೆ ಟಾಂಟ್ ಕೊಟ್ಟಿದ್ದಾರೆ. ಎಕ್ಸ್​ನಲ್ಲಿ ವಿವರವಾದ ಪೋಸ್ಟ್ ಹಾಕಿರುವ ಶ್ರೀಧರ್ ವೆಂಬು, ಆಯಾ ರಾಜ್ಯದಲ್ಲಿ ಆಯಾ ಭಾಷೆಯಲ್ಲೇ ಎಲ್ಲರೂ ಕಲಿಯುವಂತಾಗಬೇಕು, ಸಂವಹನ ನಡೆಸುವಂತಾಗಬೇಕು ಎಂದಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಯೊಂದು ಮಗುವೂ ಕನ್ನಡದಲ್ಲೇ ಕಲಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿಯುವುದು ಸರಿ. ಆದರೆ, ಕಲಿಕಾ ಮಾಧ್ಯಮವಾಗಿ ಇಂಗ್ಲೀಷ್ ಅನ್ನು ಮುಂದುವರಿಸಿರುವುದು ಎಷ್ಟು ಸರಿ?’ ಎಂದು ಹೇಳಿರುವ ಶ್ರೀಧರ್ ವೆಂಬು, ಇಂಗ್ಲೀಷ್ ಅನ್ನು ಪ್ರತಿಷ್ಠೆಯ ಕುರುಹಾಗಿ ಇಟ್ಟುಕೊಂಡಿರುವುದು ಜಾತಿಗಿಂತ ದೊಡ್ಡ ತಡೆ ನಿರ್ಮಾಣ ಆಗಿಬಿಟ್ಟಿದೆ. ಗ್ರಾಮೀಣ ಯುವಕರಿಗೆ ಅದು ಎಷ್ಟು ಹಿನ್ನಡೆ ತಂದಿದೆ ಎಂಬುದು ತನಗೆ ಗೊತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೋಹೋ ಸಿಇಒ ಸ್ಥಾನ ತ್ಯಜಿಸಿದ ಶ್ರೀಧರ್ ವೆಂಬು; ಹಳ್ಳಿಗಳ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆ ಈ ಉದ್ಯಮಿ

‘ಸರ್ಕಾರಿ ಶಾಲೆಗಳು ಎಲ್ಲರಿಗೂ ಇಂಗ್ಲೀಷ್ ಮೀಡಿಯಂ ಆಫರ್ ಮಾಡುವುದು ಇದಕ್ಕೆ ಪರಿಹಾರವಲ್ಲ. ಶ್ರೀಮಂತರು, ಬಡವರು ಹೀಗೆ ಎಲ್ಲಾ ವರ್ಗದವರ ಮಕ್ಕಳೂ ಅವರದ್ದೇ ಭಾಷೆಗಳಲ್ಲಿ ಕಲಿಯಬೇಕು ಎಂಬುದು ನನ್ನ ಭಾವನೆ. ಯೂರೋಪ್​ನ ಎಲ್ಲಾ ದೇಶಗಳಲ್ಲೂ ಇದು ನಡೆಯುತ್ತದೆ’ ಎಂದಿದ್ದಾರೆ.

‘ಬೆಂಗಳೂರಿನಲ್ಲಿರುವ ಪ್ರತಿಯೊಂದು ಮಗು ಕೂಡ ಕನ್ನಡದಲ್ಲಿ ಅಧ್ಯಯನ ಮಾಡಬೇಕು. ಚೆನ್ನೈನಲ್ಲಿರುವವರು ತಮಿಳಿನಲ್ಲಿ ಕಲಿಯಬೇಕು. ನೆದರ್​ಲ್ಯಾಂಡ್ಸ್​ನಂತಹ ಕಡಿಮೆ ಜನಸಂಖ್ಯೆಯ ದೇಶದಲ್ಲಿ ಡಚ್ ಭಾಷೆಯಲ್ಲಿ ಕಲಿಯುವುದನ್ನು ಕಡ್ಡಾಯಪಡಿಸಲಾಗಿದೆ. ಅಲ್ಲಿ ಮಕ್ಕಳು ಬೇಗ ಕಲಿಯುತ್ತಾರೆ’ ಎಂದು ಜೋಹೋ ಸಂಸ್ಥೆಯ ಸಂಸ್ಥಾಪಕರು ವಾದ ಮುಂದಿಟ್ಟಿದ್ದಾರೆ.

ಇಂಗ್ಲೀಷ್ ಕಲಿಯದಿದ್ದರೆ ಐಟಿ ಕೆಲಸಗಳು ಸಿಕ್ಕೋದಿಲ್ಲವಾ?

ಇಂಗ್ಲೀಷ್ ಕಲಿಯದಿದ್ದರೆ ಐಟಿ ಕೆಲಸ ಸಿಕ್ಕೋದಿಲ್ಲ ಎನ್ನುವ ವಾದಕ್ಕೂ ಶ್ರೀಧರ್ ವೆಂಬು ಉತ್ತರಿಸಿದ್ದಾರೆ, ತಮ್ಮದೇ ಕಂಪನಿಯ ಎಂಜಿನಿಯರುಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ‘ಕಂಪೈಲರ್​ಗಳಂತಹ ಉನ್ನತ ಪರಿಕರಗಳನ್ನು ನಿರ್ಮಿಸುವ ತಂಡದರು ಹೆಚ್ಚಾಗಿ ತಮಿಳನ್ನೇ ಮಾತನಾಡುತ್ತಾರೆ. ಇಂಗ್ಲೀಷ್ ಡಾಕ್ಯುಮೆಂಟೇಶನ್ ಓದುವಷ್ಟು ಆಗ ಭಾಷೆಯನ್ನು ಕಲಿತಿರುತ್ತಾರೆ. ಜಪಾನ್, ಚೀನಾ, ಕೊರಿಯಾ, ಜರ್ಮನಿಯ ಎಂಜಿನಿಯರುಗಳೂ ಮಾಡುವುದು ಇದನ್ನೇ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ 2, ಭಾರತ 6; ಟಾಂಟ್ ಕೊಟ್ಟ ಪೀಯೂಶ್ ಗೋಯಲ್; ಯಾರದ್ದು ಸತ್ತ ಆರ್ಥಿಕತೆ?

ಶ್ರೀಧರ್ ವೆಂಬು ಅವರ ಈ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿವೆ. ಪರ ವಿರೋಧ ಚರ್ಚೆಗಳು ಜೋರಾಗಿ ನಡೆದಿವೆ. ಮಕ್ಕಳು ತಮ್ಮದೇ ಭಾಷೆಯಲ್ಲಿ ಕಲಿಯುವುದರಿಂದ ಹಿನ್ನಡೆ ಆಗುವುದಿಲ್ಲ ಎಂದಿದ್ದಾರೆ.

ವೆಂಬು ಅವರ ಪೋಸ್ಟ್

ಹಾಗೆಯೇ, ವಿಜ್ಞಾನದಲ್ಲಿನ ಕ್ಲಿಷ್ಟಕರ ವಿಚಾರಗಳನ್ನು ಇಂಗ್ಲೀಷ್​ನಲ್ಲಿ ಕಲಿಯುವುದೇ ಸೂಕ್ತ ಎನ್ನುವ ವಾದವನ್ನೂ ವೆಂಬು ಅಲ್ಲಗಳೆದಿದ್ದಾರೆ. ಕೊರಿಯನ್ನರು ಭೌತಶಾಸ್ತ್ರ ಹೇಗೆ ಕಲಿಯುತ್ತಾರೆ ಎಂದು ಕೇಳಿದ ಅವರು, ಎಲ್ಲಾ ಕಲಿಕಾ ಸಾಮಗ್ರಿಗಳು ಪ್ರಾದೇಶಿಕ ಭಾಷೆಗಳಿಗೆ ಸರಿಯಾದ ರೀತಿಯಲ್ಲಿ ತರ್ಜುಮೆಗೊಳ್ಳುವುದು ದೊಡ್ಡ ವಿಚಾರವೇನಲ್ಲ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ