Deepfake: ‘ಕ್ವಾಂಟಮ್ ಎಐಗೆ ಬನ್ನಿ, ಮೊದಲ ದಿನವೇ 2.5 ಲಕ್ಷ ರೂ ಗಳಿಸಿ’- ಇನ್ಫೋಸಿಸ್ ನಾರಾಯಣಮೂರ್ತಿ ಓಪನ್ ಆಫರ್ ಕೊಟ್ಟಿದ್ದು ನಿಜವಾ?
NR Narayana Murthy Fake Video: ನನ್ನ ತಂಡ ಹಾಗೂ ಇಲಾನ್ ಮಸ್ಕ್ ತಂಡ ಸೇರಿ ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದೇವೆ ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ. ನಮ್ಮ ಕ್ವಾಂಟಮ್ ಎಐ ಸಂಸ್ಥೆಗೆ ಬಂದರೆ ಮೊದಲ ದಿನವೇ 3,000 ಡಾಲರ್ವರೆಗೂ (2.5 ಲಕ್ಷ ರೂ) ಹಣ ಸಂಪಾದನೆ ಮಾಡಬಹುದು ಎಂದು ವಿಡಿಯೋದಲ್ಲಿ ಮೂರ್ತಿಗಳು ಆಫರ್ ಮಾಡಿದ್ದಾರೆ. ಆದರೆ, ಮೂರ್ತಿ ಅವರು ಮಾತನಾಡಿರುವ ವಿಡಿಯೋ ಡೀಪ್ಫೇಕ್ ತಂತ್ರಜ್ಞಾನದಿಂದ ಮಾಡಲಾದ ನಕಲಿ ವಿಡಿಯೋವೆಂಬುದು ಸಾಬೀತಾಗಿದೆ.
ಬೆಂಗಳೂರು, ಡಿಸೆಂಬರ್ 13: ತಮ್ಮ ಹಾಗು ಇಲಾನ್ ಮಸ್ಕ್ ಅವರ ತಂಡಗಳು ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್ವೇರ್ (Quantum computing software) ಅಭಿವೃದ್ಧಿಪಡಿಸಿವೆ. ಕ್ವಾಂಟಮ್ ಎಐನಲ್ಲಿ (Quantum AI) ನೀವು ಮೊದಲ ದಿನವೇ 3,000 ಡಾಲರ್ವರೆಗೆ (ಸುಮಾರು 2.5 ಲಕ್ಷ ರೂ) ಹಣ ಸಂಪಾದನೆ ಮಾಡಬಹುದು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿರುವ ವಿವಿಧ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ, ಇವು ನಕಲಿ ವಿಡಿಯೋ (deepfake video) ಎಂದು ತಿಳಿದುಬಂದಿದೆ. ಸೆಲಬ್ರಿಟಿಗಳನ್ನು ಗುರಿ ಮಾಡಲಾಗಿದ್ದ ಡೀಪ್ಫೇಕ್ ತಂತ್ರಜ್ಞಾನ ದುರ್ಬಳಕೆಯು ಈಗ ತಂತ್ರಜ್ಞಾನ ಮುಖಂಡರನ್ನೇ ಟಾರ್ಗೆಟ್ ಮಾಡುತ್ತಿದೆ. ನಾರಾಯಣಮೂರ್ತಿ ಇರುವ ಈ ಡೀಪ್ಫೇಕ್ ವಿಡಿಯೋಗಳನ್ನು ಫೇಸ್ಬುಕ್ನಿಂದ ಅಳಿಸಲಾಗಿದೆ. ಆದರೆ, ಈ ಘಟನೆಯು ಡೀಪ್ಫೇಕ್ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿದೆ.
‘ಇಲಾನ್ ಮಸ್ಕ್ ಜೊತೆ ಸೇರಿ ನಮ್ಮ ಹೊಸ ಪ್ರಾಜೆಕ್ಟ್ ಅನ್ನು ಇವತ್ತು ನಾವು ಪ್ರಸ್ತುಪಡಿಸಲು ಬಯಸುತ್ತೇನೆ. ನನ್ನ ತಂಡ ಹಾಗೂ ಇಲಾನ್ ಮಸ್ಕ್ ಅವರ ತಂಡ ಸೇರಿ ಕ್ವಾಂಟಮ್ ಎಐ ಅಭಿವೃದ್ಧಿಪಡಿಸಲಾಗಿದೆ. ಇದು ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್ವೇರ್ ಆಗಿದ್ದು ಶೇ. 94ರಷ್ಟು ಸಕ್ಸಸ್ ರೇಟ್ ಹೊಂದಿದೆ…’ ಎಂದು ನಕಲಿ ವಿಡಿಯೋವೊಂದರಲ್ಲಿ ನಾರಾಯಣಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: Argentina Crisis: ಅರ್ಧದಷ್ಟು ಕರೆನ್ಸಿ ಮೌಲ್ಯ ಇಳಿಸಿದ ಅರ್ಜೆಂಟೀನಾ; ಈಗ ಒಂದು ಡಾಲರ್ಗೆ 800 ಪೆಸೋ
ಹಾಗೆಯೇ, ಕ್ವಾಂಟಮ್ ಎಐಗೆ ಕೆಲಸಕ್ಕೆ ಬಂದು ಸೇರಬೇಕೆಂದು ಕರೆನೀಡಿರುವ ಇನ್ಫೋಸಿಸ್ ಮಾಜಿ ಛೇರ್ಮನ್ ಅವರು, ‘ಇಲ್ಲಿ ಮೊದಲ ದಿನವೇ 3,000 ರೂವರೆಗೆ ಸಂಪಾದನೆ ಮಾಡಬಹುದು,’ ಎಂದೂ ತಿಳಿಸಿದ್ದಾರೆ.
ಆದರೆ, ಈ ವಿವಿಧ ವಿಡಿಯೋಗಳು ಡೀಪ್ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಿದ ನಕಲಿ ವಿಡಿಯೋಗಳಾಗಿವೆ. ಮನಿಕಂಟ್ರೋಲ್, ಬಿಸಿನೆಸ್ ಟುಡೇ ತಾಣಗಳೊಂದಿಗೆ ನಾರಾಯಣಮೂರ್ತಿ ನಡೆಸಿದ ಸಂದರ್ಶನದ ವಿಡಿಯೋಗಳನ್ನು ಇಟ್ಟುಕೊಂಡು ಡೀಪ್ಫೇಕ್ ವಿಡಿಯೋ ರೂಪಿಸಲಾಗಿದೆ.
ಈ ವಿಡಿಯೋಗಳಲ್ಲಿ ಕೆಲವೊಂದೆಡೆ ನಾರಾಯಣಮೂರ್ತಿ ಅವರ ಧ್ವನಿಗೂ ಅವರ ಮೌಖಿಕ ಉಚ್ಚಾರಣೆಗೂ ತಾಳೆ ಆಗುತ್ತಿಲ್ಲದಿರುವುದು ಸ್ಪಷ್ಟವಾಗಿದೆ. ಹಾಗೆಯೇ, ಇಲಾನ್ ಮಸ್ಕ್ ಜೊತೆ ಸಹಭಾಗಿತ್ವದಲ್ಲಿ ಎಐ ಸಾಫ್ಟ್ವೇರ್ ತಯಾರಿಸುತ್ತಿರುವುದಾಗಲೀ, ಕ್ವಾಂಟಮ್ ಎಐ ಬಗ್ಗೆಯಾಗಲೀ ಎನ್ ಆರ್ ನಾರಾಯಣಮೂರ್ತಿ ಅವರು ಹಿಂದೆಂದೂ ಹೇಳಿದ್ದಿಲ್ಲ. ಈ ಕಾರಣಕ್ಕೆ ಸಾಕಷ್ಟು ಜನರು ಫೇಸ್ಬುಕ್ನಲ್ಲಿ ಹರಿದಾಡುತ್ತಿದ್ದ ಈ ಡೀಪ್ಫೇಕ್ ವಿಡಿಯೋಗಳನ್ನು ಗುರುತಿಸಿ ಫ್ಲ್ಯಾಗ್ ಮಾಡಿದ್ದಾರೆ. ಅದಾದ ಬಳಿಕ ಅವುಗಳು ಅಲ್ಲಿಂದ ಡಿಲೀಟ್ ಆಗಿವೆ.
ಇದನ್ನೂ ಓದಿ: ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ
ಡೀಪ್ಫೇಕ್ ವಿಡಿಯೋ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ನಾರಾಯಣಮೂರ್ತಿ
ಇನ್ಫೋಸಿಸ್ ನಾರಾಯಣಮೂರ್ತಿ ಅವರು ಈ ಹಿಂದೆ ಡೀಪ್ಫೇಕ್ ತಂತ್ರಜ್ಞಾನದಿಂದ ಎದುರಾಗುವ ಅಪಾಯದ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಿದೆ. ಆದರೆ ಅದರ ಬಗ್ಗೆ ಅಷ್ಟು ನಕಾರಾತ್ಮಕವಾಗಿ ತಾನು ಯೋಚಿಸುವುದಿಲ್ಲ ಎಂದೂ ಮೂರ್ತಿಗಳು ಹೇಳಿದ್ದರು.
ವಿಪರ್ಯಾಸ ಎಂದರೆ, ಡೀಪ್ಫೇಕ್ ಟೆಕ್ನಾಲಜಿ ಬಗ್ಗೆ ತೀರಾ ನೆಗಟಿವ್ ಆಗುವುದು ಬೇಡ ಎಂದ ನಾರಾಯಣಮೂರ್ತಿಯವರನ್ನೇ ಡೀಪ್ಫೇಕ್ ಟೆಕ್ನಾಲಿಜಿ ಮೂಲಕ ಟಾರ್ಗೆಟ್ ಮಾಡಲಾಗಿದೆ. ಅವರ ಆ ಹೇಳಿಕೆಗೆ ತಿರುಗೇಟು ನೀಡಲೆಂದೇ ದುಷ್ಕರ್ಮಿಗಳು ಈ ಡೀಪ್ಫೇಕ್ ಮಾಡಿರಬಹುದಾದ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ