LIC IPO: ಎಲ್​ಐಸಿ ಐಪಿಒದಲ್ಲಿ ಶೇ 20ರಷ್ಟು ವಿದೇಶಿ ನೇರ ಹೂಡಿಕೆಗೆ ಸಂಪುಟದಿಂದ ಸಮ್ಮತಿ ಎನ್ನುತ್ತಿದೆ ವರದಿ

| Updated By: Srinivas Mata

Updated on: Feb 26, 2022 | 8:19 PM

ಭಾರತೀಯ ಜೀವ ವಿಮಾ ನಿಗಮದ ಐಪಿಒದಲ್ಲಿ ಶೇ 20ರ ತನಕ ವಿದೇಶ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದಕ್ಕೆ ಕೇಂದ್ರ ಸಂಪುಟದಿಂದ ಅನುಮೋದನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

LIC IPO: ಎಲ್​ಐಸಿ ಐಪಿಒದಲ್ಲಿ ಶೇ 20ರಷ್ಟು ವಿದೇಶಿ ನೇರ ಹೂಡಿಕೆಗೆ ಸಂಪುಟದಿಂದ ಸಮ್ಮತಿ ಎನ್ನುತ್ತಿದೆ ವರದಿ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಜೀವ ವಿಮಾ ನಿಗಮದಲ್ಲಿ (Life Insurance Corporation Of India) ಶೇ 20ರ ತನಕ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡಿ, ಕೇಂದ್ರ ಸಚಿವ ಸಂಪುಟವು ನೀತಿ ತಿದ್ದುಪಡಿಗೆ ಅನುಮತಿ ನೀಡಿದೆ, ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸರ್ಕಾರಿ ಸ್ವಾಮ್ಯದ ಇನ್ಷೂರೆನ್ಸ್ ಕಂಪೆನಿಯ ಲಿಸ್ಟಿಂಗ್​ಗೆ ಅನುಕೂಲ ಆಗಲಿ ಎಂಬ ಗುರಿಯೊಂದಿಗೆ ಹೀಗೆ ಮಾಡಲಾಗಿದೆ. ಭಾರತದ ಅತಿ ದೊಡ್ಡ ಇನ್ಷೂರೆನ್ಸ್ ಕಂಪೆನಿ ಶೇ 5ರಷ್ಟು ಪಾಲನ್ನು ಮಾರ್ಚ್​ನಲ್ಲಿ ಮಾರಾಟ ಮಾಡಿ, 800 ಕೋಟಿ ಅಮೆರಿಕನ್ ಡಾಲರ್​ ಅನ್ನು ಸಂಗ್ರಹಿಸಲು ಮುಂದಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಈವರೆಗಿನ ಅತಿ ದೊಡ್ಡ ಐಪಿಒ ಆಗಿದೆ. ಈಗಿನ ತಿದ್ದುಪಡಿಯ ಮೂಲಕ ವಿದೇಶೀ ನೇರ ಹೂಡಿಕೆದಾರರು ಆಟೋಮೆಟಿಕ್ ಮಾರ್ಗದ ಮೂಲಕ ಶೇ 20ರ ತನಕ ಷೇರನ್ನು ಖರೀದಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ, ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಂಪುಟ ಸಭೆಯ ನಂತರ, ತಮ್ಮ ಗುರುತನ್ನು ಬಹಿರಂಗ ಮಾಡಬಾರದು ಎಂಬ ಷರತ್ತಿನ ಮೇಲೆ ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಇರುವ ನಿಯಮಾವಳಿ ಪ್ರಕಾರ, ವಿದೇಶೀ ಹೂಡಿಕೆಗೆ ಎಲ್​ಐಸಿಯಲ್ಲಿ ಅವಕಾಶ ಇಲ್ಲ. ಈ ಬಗ್ಗೆ ವಿಶೇಷ ಸಂಸತ್ ಕಾಯ್ದೆಯನ್ನು ತರಲಾಗಿದೆ. ಆದರೆ ಇತರ ಖಾಸಗಿ ಇನ್ಷೂರೆನ್ಸ್ ಕಂಪೆನಿಗಳಲ್ಲಿ ಶೇ 74ರಷ್ಟು ವಿದೇಶೀ ನೇರ ಹೂಡಿಕೆಗೆ ಅವಕಾಶ ಇದೆ. ಈಗಿನ ತಿದ್ದುಪಡಿ ಮೂಲಕ ಸರ್ಕಾರವು ಎಲ್​ಐಸಿಯಲ್ಲಿನ ಹೂಡಿಕೆ ಮಿತಿಯನ್ನು ಶೇ 20ರ ವರೆಗೆ ಮಾಡಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ಇರುವಂಥ ನಿಯಮವೇ ಇದಕ್ಕೂ ಅನ್ವಯಿಸುತ್ತದೆ, ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಉಕ್ರೇನ್​ ಮೇಲೆ ರಷ್ಯಾ ದಾಳಿಯ ನಂತರ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಹೆಚ್ಚಿರುವ ಕಾರಣಕ್ಕೆ ಎಲ್​ಐಸಿ ಸಾರ್ವಜನಿಕ ಲಿಸ್ಟಿಂಗ್ ಅನ್ನು ಸರ್ಕಾರವು ಮುಂದಕ್ಕೆ ಹಾಕಬಹುದು ಎಂಬ ಆತಂಕ ಕೆಲವು ಹೂಡಿಕೆದಾರರಲ್ಲಿ ಇತ್ತು. ಆ ಆತಂಕದ ಮಧ್ಯೆ ಸಂಪುಟದಿಂದ ಈ ನಿರ್ಧಾರ ಬಂದಿದೆ.

ಇನ್ಷೂರೆನ್ಸ್ ಕಂಪೆನಿಯ ಐಪಿಒ ಮುಂದೂಡುವ ಯೋಜನೆ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಬಜೆಟ್ ವೆಚ್ಚದ ಅಂದಾಜಿಗೆ ತಕ್ಕಂತೆ ಹಣ ಹೊಂದಿಸಲು ಇದು ಗಂಭೀರ ಯೋಜನೆ ಆಗಿದೆ. ಐಪಿಒನಲ್ಲಿ ಕೆಲವು ಭಾಗದಷ್ಟು ಷೇರನ್ನು ಪಾಲಿಸಿದಾರರಿಗೆ ಮೀಸಲಿರಿಸಲಾಗಿದೆ. ಅದು ಒಟ್ಟಾರೆ ಆಫರ್​ನ ಶೇ 10 ಅನ್ನು ಮೀರದಂತೆ ನೀಡಲಾಗುವುದು. ಉದ್ಯೋಗಿಗಳಿಗೆ ಶೇ 5ಕ್ಕಿಂತ ಹೆಚ್ಚಾಗದಂತೆ ಮೀಸಲಿರಿಸಲಾಗುವುದು, ಅದರಲ್ಲೂ ಆಫರ್​ ಈಕ್ವಿಟಿ ಕ್ಯಾಪಿಟಲ್​ ನಂತರ ಈ ಪ್ರಮಾಣ ವಿತರಿಸಲಾಗುವುದು ಎಂದು ಐಪಿಒ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. 2021ರ ಮಾರ್ಚ್ ಕೊನೆ ಹೊತ್ತಿಗೆ ಎಲ್​ಐಸಿಯಿಂದ 1,14,498 ಮಂದಿಯನ್ನು ನಿಯೋಜಿಸಲಾಗಿದೆ.

ಭಾರತದ ವಿಮಾ ವಲಯವು ರಾಷ್ಟ್ರೀಕರಣ ಆದಾಗ ಎಲ್​ಐಸಿಯು 60 ವರ್ಷಗಳ ಹಿಂದೆ ಆರಂಭಿಸಲಾಯಿತು. ದೇಶದಲ್ಲಿ 28 ಕೋಟಿಗೂ ಹೆಚ್ಚು ಪಾಲಿಸಿಗಳು ಮತ್ತು ಶೇ 60ಕ್ಕೂ ಹೆಚ್ಚು ಇನ್ಷೂರೆನ್ಸ್ ಸೆಗ್ಮೆಂಟ್​ಗಳ ವಹಿವಾಟನ್ನು ಹೊಂದಿದೆ.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒಗೆ ಅಪ್ಲೈ ಮಾಡೋಕೆ ಆಸೆಯಿದೆಯೇ? ಡಿಮ್ಯಾಟ್ ಅಕೌಂಟ್ ಬೇಕೇಬೇಕು: ಎಲ್ಲಿ ಓಪನ್ ಮಾಡಿದ್ರೆ ಒಳ್ಳೇದು?

Published On - 8:18 pm, Sat, 26 February 22