ನವದೆಹಲಿ, ಏಪ್ರಿಲ್ 3: ತೊಂಬತ್ತರ ದಶಕದಲ್ಲಿ ವ್ಯಕ್ತಿಯೊಬ್ಬರು 500 ರೂ ಮೊತ್ತಕ್ಕೆ ಖರೀದಿಸಿದ್ದ ಎಸ್ಬಿಐ ಷೇರು ಇವತ್ತು 3.76 ಲಕ್ಷ ರೂ ಮೌಲ್ಯದ್ದಾಗಿರುವ ಒಂದು ಸುದ್ದಿ ವೈರಲ್ ಆಗಿದೆ. ಈಗ ಅಂಥದ್ದೇ ಇನ್ನೊಂದು ಸುದ್ದಿ ಇದೆ. ಎಪ್ಪತ್ತರ ದಶಕದಲ್ಲಿ ವ್ಯಕ್ತಿಯೊಬ್ಬರು ತೆಗೆದಿರಿಸಿದ್ದ ಹಿಂದೂಸ್ತಾನ್ ಯುನಿಲಿವರ್ನ (HUL shares) 100 ಷೇರುಗಳು ಇವತ್ತು 2 ಕೋಟಿ ರು ಮೌಲ್ಯದವಾಗಿದೆ. ಅಂದು ಷೇರು ಕೊಂಡಿದ್ದನ್ನು ಮರೆತೇ ಹೋಗಿದ್ದ ವ್ಯಕ್ತಿಗೆ ಈಗ 85 ವರ್ಷ. ಇವತ್ತು ಆ ನೂರು ಷೇರುಗಳ ಮೌಲ್ಯ 2 ಕೋಟಿ ರೂ ಆಸುಪಾಸಿನಲ್ಲಿ ಇದೆ. ಮಕ್ಕಳು ವಿದೇಶಗಳಲ್ಲಿ ನೆಲಸಿದ್ದು, ಭಾರತದಲ್ಲಿರುವ ಈ ವೃದ್ಧ ಅಚಾನಕ್ಕಾಗಿ ಸಿಕ್ಕಿದ ಈ ಹಣ ಬಳಸಿ ಒಂದು ಮನೆ ಖರೀದಿಸಿ ಅಲ್ಲಿ ಇರಲು ಬಯಸುತ್ತಿದ್ದಾರೆ.
ಈ ವ್ಯಕ್ತಿ ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯಾರೋ ಸ್ನೇಹಿತರು ಸಲಹೆ ನೀಡಿದರೆಂದು ಹಿಂದೂಸ್ತಾನ್ ಯುನಿಲಿವರ್ ಲಿ ಸಂಸ್ಥೆಯ 100 ಷೇರುಗಳನ್ನು ಖರೀದಿಸಿದರು. ಅವರ ಷೇರು ಪೇಟೆ ಸಹವಾಸ ಅದೇ ಕೊನೆಯಾಯಿತು. ಆ ಷೇರುಗಳನ್ನು ಅವರು ಮರೆತೇ ಹೋದರು. ತಮ್ಮ ಊರಿಗೆ ವಾಪಸ್ ಹೋಗಿ ಸೆಟ್ಲ್ ಆದರು. ಅಲ್ಲಿಗೆ ಆ ಎಚ್ಯುಎಲ್ ಷೇರು ಅವರ ಸ್ಮರಣೆಯಿಂದಲೇ ಹೊರಟುಹೋಗಿತ್ತು.
ಅವರ ಮಕ್ಕಳು ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ತಮ್ಮ ತಂದೆಗೆ ಹಣ ಕಳುಹಿಸುತ್ತಿರುತ್ತಾರೆ. ಹೀಗಾಗಿ, ಇವರಿಗೆ ಹಣದ ಅವಶ್ಯಕತೆ ಬೀಳುವುದಿಲ್ಲ.
ಇದನ್ನೂ ಓದಿ: ತಾತನ 30 ವರ್ಷ ಹಿಂದಿನ ಎಸ್ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ… ಈಗೆಷ್ಟಿದೆ ನೋಡಿ ಅದರ ಮೌಲ್ಯ
ಇದೇ ವೇಳೆ, ಜಿಎಲ್ಸಿ ವೆಲ್ತ್ ಎಂಬ ವೆಲ್ತ್ ರಿಕವರಿ ಅಡ್ವೈಸರಿ ಸಂಸ್ಥೆಯೊಂದು ಈ ವೃದ್ಧರ ಕುಟುಂಬ ಸದಸ್ಯರನ್ನು ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿ ಈ ಷೇರುಗಳ ಮಾಹಿತಿ ನೀಡುತ್ತದೆ. ಮೊದಲಿಗೆ ಅವರು ನಂಬುವುದಿಲ್ಲ. ಆದರೆ, ನಿಜ ಗೊತ್ತಾದ ಬಳಿಕ ಕುಟುಂಬದವರಿಗೆ ಅಚ್ಚರಿ ಆಗುತ್ತದೆ.
ಈ ವೃದ್ಧರು ಅಂದು ಖರೀದಿಸಿದ್ದು 100 ಷೇರು ಮಾತ್ರ. ಅದಾದ ಬಳಿಕ ಷೇರು ಹಲವು ಬಾರಿ ವಿಭಜನೆಗೊಂಡಿದೆ. ಇದೀಗ ಆ ನೂರು ಷೇರು 7,000 ಷೇರುಗಳಾಗಿವೆ. ಒಂದು ಷೇರು ಬೆಲೆ ಇವತ್ತು 2,270 ರೂ ಇದೆ. ಬೋನಸ್, ಡಿವಿಡೆಂಡ್ ಎಲ್ಲವೂ ಸೇರಿ 2 ಕೋಟಿ ರೂ ಹತ್ತಿರದಷ್ಟು ಹಣ ಆಗಿದೆ.
ಕುತೂಹಲ ಎಂದರೆ ಈ ವ್ಯಕ್ತಿ ಭಾರತಕ್ಕೆ ಬಂದ ಬಳಿಕವೂ ದುಬೈನಲ್ಲಿದ್ದಾಗ ನೀಡಿದ್ದ ವಿಳಾಸವನ್ನು ಬದಲಿರಲಿಲ್ಲ. ಅಲ್ಲಿ ಅವರು ಕೆಲಸ ಮಾಡುತ್ತಿದ್ದ ಕಚೇರಿ ವಿಳಾಸಕ್ಕೆ ಷೇರುಗಳಿಗೆ ಸಂಬಂಧಿಸಿದ ವರ್ತಮಾನಗಳು ಹೋಗುತ್ತಿದ್ದವು. ಹೀಗಾಗಿ, ಇವರಿಗೆ ತಾನು ಖರೀದಿಸಿದ್ದ ಷೇರಿನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ
ಜಿಎಲ್ಸಿ ವೆಲ್ತ್ ಸಂಸ್ಥೆ ಸಾಕಷ್ಟು ಸಮಯ ಪ್ರಯಾಸ ಪಟ್ಟು ಈ ಷೇರುಗಳನ್ನು ರಿಕವರ್ ಮಾಡಿಸಿಕೊಟ್ಟಿದೆ. ಇವತ್ತು ಮಕ್ಕಳ ಹಣದ ಮೇಲೆ ಅವಲಂಬನೆ ಇಲ್ಲದೇ ಬದುಕುವ ಆಸೆ ಈ ವೃದ್ಧನಲ್ಲಿ ಚಿಗುರಿದೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿದರೆ ಎಷ್ಟು ಹಣ ವೃದ್ದಿಸಬಹುದು ಎಂಬುದಕ್ಕೆ ಇವರು ನಿದರ್ಶನವಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ