AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮೊದಲ ಬಾರಿಗೆ 200 ದಾಟಿದ ಬಿಲಿಯನೇರ್​ಗಳ ಸಂಖ್ಯೆ; ಪಟ್ಟಿಗೆ ಈ ವರ್ಷ 25 ಹೊಸಬರು ಸೇರ್ಪಡೆ

Forbes List 2024: ಫೋರ್ಬ್ಸ್ ಪಟ್ಟಿ 2024 ಪ್ರಕಾರ ಭಾರತದಲ್ಲಿ ಬಿಲಿಯನೇರ್​ಗಳ ಸಂಖ್ಯೆ ಮೊದಲ ಬಾರಿಗೆ 200 ದಾಟಿದೆ. ಜಾಗತಿಕವಾಗಿ ಅತಿ ಹೆಚ್ಚು ಬಿಲಿಯನೇರ್​ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ವಿಶ್ವಾದ್ಯಂತ ಬಿಲಿಯನೇರ್​ಗಳ ಸಂಖ್ಯೆ 2,781 ಇದೆ. ಈ ಪೈಕಿ ಹೆಚ್ಚೂಕಡಿಮೆ ಶೇ. 10ರಷ್ಟು ಕುಬೇರರು ಭಾರತದಲ್ಲಿ ಇದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ 200 ದಾಟಿದ ಬಿಲಿಯನೇರ್​ಗಳ ಸಂಖ್ಯೆ; ಪಟ್ಟಿಗೆ ಈ ವರ್ಷ 25 ಹೊಸಬರು ಸೇರ್ಪಡೆ
ಮುಕೇಶ್ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2024 | 1:07 PM

ನವದೆಹಲಿ, ಏಪ್ರಿಲ್ 3: ಭಾರತದಲ್ಲಿ ಬಿಲಿಯನೇರ್​ಗಳ ಸಂಖ್ಯೆ (Billionaires) ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬರುತ್ತಿದೆ. ಇಲ್ಲಿ ಆರ್ಥಿಕತೆ ಬೆಳೆದಂತೆಲ್ಲಾ ಹೆಚ್ಚೆಚ್ಚು ಮಂದಿ ಕುಬೇರರಾಗುತ್ತಿದ್ದಾರೆ. ಜಾಗತಿಕ ಬಿಲಿಯನೇರ್​ಗಳ ಸಾಲಿನಲ್ಲಿ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಫೋರ್ಬ್ಸ್ ಬಿಲಿಯನೇರ್ ಪಟ್ಟಿ 2024 ಪ್ರಕಾರ ಭಾರತದಲ್ಲಿ ಬಿಲಿಯನೇರ್​ಗಳ ಸಂಖ್ಯೆ 200 ದಾಟಿದೆ. ಈ ಮೈಲಿಗಲ್ಲನ್ನು ಭಾರತ ಮುಟ್ಟಿದ್ದು ಇದೇ ಮೊದಲು. ವಿಶ್ವದಲ್ಲಿ ಅತಿ ಹೆಚ್ಚು ಬಿಲಿಯನೇರ್​​ಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನ ಪಡೆದಿದೆ. ಕಳೆದ ವರ್ಷ ಈ ಕುಬೇರರ ಸಂಖ್ಯೆ 169 ಇತ್ತು. ಈ ವರ್ಷ 25 ಹೊಸ ಬಿಲಿಯನೇರ್​ಗಳು ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿರುವ 200 ಬಿಲಿಯನೇರ್​​ಗಳ ಬಳಿ ಒಟ್ಟಾರೆ ಇರುವ ಸಂಪತ್ತು 954 ಬಿಲಿಯನ್. ಅಂದರೆ ಹೆಚ್ಚೂಕಡಿಮೆ ಒಂದು ಟ್ರಿಲಿಯನ್ ಡಾಲರ್​​ನಷ್ಟು ಸಂಪತ್ತು ಈ 200 ಜನರ ಬಳಿ ಇದೆ. ಪಾಕಿಸ್ತಾನದ ಜಿಡಿಪಿಯ ಮೂರು ಪಟ್ಟು ಹಣ ಈ ಭಾರತೀಯ ಕುಬೇರರ ಬಳಿ ಇದೆ ಎನ್ನಬಹುದು.

ಅಂಬಾನಿ ವಿಶ್ವದ ನಂಬರ್ 11, ಇಲಾನ್ ಮಸ್ಕ್ 3ನೇ ಸ್ಥಾನಕ್ಕೆ

ಫೋರ್ಬ್ಸ್ ಪಟ್ಟಿ ಪ್ರಕಾರ ವಿಶ್ವಾದ್ಯಂತ ಬಿಲಿಯನೇರ್​ಗಳ ಸಂಖ್ಯೆ 2,781 ಇದೆ. 2021ರಲ್ಲಿ 2,760 ಬಿಲಿಯನೇರ್​ಗಳಿದ್ದರು. ಈ ಬಾರಿ ಸಂಖ್ಯೆ ಹೆಚ್ಚಾಗಿದೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಜಾಗತಿಕವಾಗಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇವರ ಬಳಿ 222.4 ಬಿಲಿಯನ್ ಡಾಲರ್​ನಷ್ಟು ಸಂಪತ್ತು ಇದೆ. ಅಮೇಜಾನ್​ನ ಜೆಫ್ ಬೆಜೋಸ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಸಾಕಷ್ಟು ಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಇಲಾನ್ ಮಸ್ಕ್ 190 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ.

ಇದನ್ನೂ ಓದಿ: ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್​ನಿಂದ ಹೋಲಿಕೆ

ಭಾರತದ ಮುಕೇಶ್ ಅಂಬಾನಿ 116.3 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ಭಾರತದ ನಂಬರ್ ಒನ್ ಶ್ರೀಮಂತ ಎಂಬ ಪಟ್ಟ ಮುಂದುವರಿಸಿದ್ದಾರೆ. ಒಂದಿಲ್ಲೊಂದು ಹಿನ್ನಡೆ ಕಾಣುತ್ತಿರುವ ಗೌತಮ್ ಅದಾನಿ ಆಸ್ತಿ 84.8 ಬಿಲಿಯನ್ ಡಾಲರ್​ಗೆ ಇಳಿದಿದ್ದು ಇವರು ಶ್ರೀಮಂತಿಕೆಯಲ್ಲಿ 17ನೇ ಸ್ಥಾನಕ್ಕೆ ಬಂದಿದ್ದಾರೆ.

ಭಾರತದ ಟಾಪ್-5 ಶ್ರೀಮಂತರು

  1. ಮುಕೇಶ್ ಅಂಬಾನಿ: 116 ಬಿಲಿಯನ್ ಡಾಲರ್
  2. ಗೌತಮ್ ಅದಾನಿ: 84 ಬಿಲಿಯನ್ ಡಾಲರ್
  3. ಶಿವ್ ನಾದರ್: 36.9 ಬಿಲಿಯನ್ ಡಾಲರ್
  4. ಸಾವಿತ್ರಿ ಜಿಂದಾಲ್ ಕುಟುಂಬ: 33.5 ಬಿಲಿಯನ್ ಡಾಲರ್
  5. ದಿಲೀಪ್ ಶಾಂಘವಿ: 26.7 ಬಿಲಿಯನ್ ಡಾಲರ್

ಇದನ್ನೂ ಓದಿ: ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?

ಬಿಲಿಯನೇರ್ ಎನಿಸುವುದು ಹೇಗೆ?

ಒಂದು ಬಿಲಿಯನ್ ಅಥವಾ ನೂರು ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವವರನ್ನು ಬಿಲಿಯನೇರ್ ಎಂದನಿಸಿಕೊಳ್ಳುತ್ತಾರೆ. ರುಪಾಯಿ ಲೆಕ್ಕದಲ್ಲಿ ಒಂದು ಬಿಲಿಯನ್ ಡಾಲರ್ ಎಂದರೆ ಈಗಿನ ಬೆಲೆಯಲ್ಲಿ 8,350 ಕೋಟಿ ರೂ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ