Paytm: ಪೇಟಿಎಂ ಮೂರನೇ ತ್ರೈಮಾಸಿಕ ನಷ್ಟ 778 ಕೋಟಿ ರೂಪಾಯಿಗಳಿಗೆ ವಿಸ್ತರಣೆ

| Updated By: Srinivas Mata

Updated on: Feb 05, 2022 | 8:24 AM

ಫಿನ್​ಟೆಕ್​ ಕಂಪೆನಿಯಾದ ಪೇಟಿಎಂ 2021-22ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಷ್ಟ ಪ್ರಮಾಣವು ರೂ. 778 ಕೋಟಿಗೆ ವಿಸ್ತರಣೆ ಆಗಿದೆ.

Paytm: ಪೇಟಿಎಂ ಮೂರನೇ ತ್ರೈಮಾಸಿಕ ನಷ್ಟ 778 ಕೋಟಿ ರೂಪಾಯಿಗಳಿಗೆ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us on

ಪ್ರಮುಖ ಫಿನ್​ಟೆಕ್​ ಕಂಪೆನಿಯಾದ ಪೇಟಿಎಂ (Paytm) ಡಿಸೆಂಬರ್ 31, 2021ಕ್ಕೆ ಕೊನೆಯಾದ ಮೂರನೇ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ನಷ್ಟವನ್ನು 778 ಕೋಟಿ ರೂಪಾಯಿಗಳಿಗೆ ವಿಸ್ತರಣೆ ಮಾಡಿದೆ. ಕಂಪೆನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 482 ಕೋಟಿ ರೂಪಾಯಿ ನಷ್ಟ ಕಂಡಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್) ಪೇಟಿಎಂ ಕಂಪೆನಿಯು ರೂ. 532 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಇದಕ್ಕೂ ಮಂಚೆ ಫೆಬ್ರವರಿ 5ರ ಶುಕ್ರವಾರದಂದು ಪೇಟಿಎಂ ಷೇರು ಎನ್​ಎಸ್​ಇಯಲ್ಲಿ ಶೇ 0.89ರಷ್ಟು ಏರಿಕೆಯಾಗಿ, ರೂ. 952.90ಕ್ಕೆ ತಲುಪಿದವು. ಈ ಮಧ್ಯೆ, ಎಮ್‌ಡಿಆರ್ ಬೇರಿಂಗ್ ಉಪಕರಣಗಳು ಹೊಸ ಸಾಧನದ ಚಂದಾದಾರಿಕೆಗಳು ಮತ್ತು ಸಾಲ ವಿತರಣೆಗಳ ಮೂಲಕ ವ್ಯಾಪಾರಿ ಪಾವತಿಗಳಲ್ಲಿನ ಬೆಳವಣಿಗೆಯಿಂದಾಗಿ ಪರಿಶೀಲನೆಯಲ್ಲಿ ಇರುವ ತ್ರೈಮಾಸಿಕದಲ್ಲಿ ಆಪರೇಟಿಂಗ್ ಆದಾಯವು ಶೇ 89ರಷ್ಟು ಜಿಗಿದು, ರೂ. 1,456 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 772 ಕೋಟಿ ಇತ್ತು. ಶುಕ್ರವಾರ ತಡವಾದ ಗಳಿಕೆಗಳ ಅಪ್‌ಡೇಟ್‌ನಲ್ಲಿ 2021ರ ಡಿಸೆಂಬರ್​ನಲ್ಲಿ ನಿವ್ವಳ ನಗದು, ನಗದು ಸಮಾನವಾದದ್ದು ಮತ್ತು 10,215 ಕೋಟಿ ಹೂಡಿಕೆ ಮಾಡಬಹುದಾದ ಬ್ಯಾಲೆನ್ಸ್‌ನೊಂದಿಗೆ ಉತ್ತಮ ಹಣವನ್ನು ಹೊಂದಿದೆ ಎಂದು ಪೇಟಿಎಂ ಹೇಳಿದೆ.

ಆನ್‌ಲೈನ್ ಮತ್ತು ಆಫ್‌ಲೈನ್ ಮರ್ಚೆಂಟ್ ಬೇಸ್‌ನಲ್ಲಿನ ಬೆಳವಣಿಗೆ, ಬಳಕೆದಾರರ ತೊಡಗಿಸಿಕೊಳ್ಳುವಿಕೆಯಲ್ಲಿನ ಹೆಚ್ಚಳ ಮತ್ತು ಹಬ್ಬದ ಋತುವಿನ ಪ್ರಭಾವದಿಂದಾಗಿ ಮೂರನೇ ತ್ರೈಮಾಸಿಕದಲ್ಲಿ ಒಟ್ಟು ವ್ಯಾಪಾರದ ಮೌಲ್ಯವು (Gross Mercantile Value) ವರ್ಷದಿಂದ ವರ್ಷಕ್ಕೆ ಶೇ 123ರಷ್ಟು ಹೆಚ್ಚಳವಾಗಿ 2.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಜಿಎಂವಿ ಎಂಬುದು ಫಿನ್‌ಟೆಕ್ ಕಂಪೆನಿಗಳಿಗೆ ಪ್ರಮುಖ ಮೆಟ್ರಿಕ್. ಇದು ಒಂದು ಕಾಲಾವಧಿಯಲ್ಲಿ ಪೇಟಿಎಂನ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ವಹಿವಾಟುಗಳ ಮೂಲಕ ವ್ಯಾಪಾರಿಗಳಿಗೆ ಮಾಡಿದ ಒಟ್ಟು ಪಾವತಿಗಳ ರೂಪಾಯಿ ಮೌಲ್ಯವಾಗಿದೆ. ಇದು ಹಣ ವರ್ಗಾವಣೆಯಂತಹ ಯಾವುದೇ ಗ್ರಾಹಕ-ಗ್ರಾಹಕ ಪಾವತಿ ಸೇವೆಯನ್ನು ಒಳಗೊಂಡಿರುವುದಿಲ್ಲ. ಆದಾಯದ ಶೇಕಡಾವಾರು ಕೊಡುಗೆ ಲಾಭವು ಮೂರನೇ ತ್ರೈಮಾಸಿಕದಲ್ಲಿ ಆದಾಯದ ಶೇ 31.2ಕ್ಕೆ ಸುಧಾರಿಸಿದ್ದು, ಇದು ವರ್ಷದ ಹಿಂದೆ ಶೇ 8.9 ಆಗಿತ್ತು.

ಈ ಮಧ್ಯೆ, ಮೂರನೇ ತ್ರೈಮಾಸಿಕದ ನೈಜ ಕೊಡುಗೆ ಲಾಭವು ವರ್ಷದಿಂದ ವರ್ಷಕ್ಕೆ ಶೇ 560ರಷ್ಟು ಬೃಹತ್ ಬೆಳವಣಿಗೆಯನ್ನು ಕಂಡಿದ್ದು, 454 ಕೋಟಿ ಆಗಿದೆ ಎಂದು ಪೇಟಿಎಂ ಹೇಳಿದೆ. ಸರಾಸರಿ MTU (ಮಾಸಿಕ ವಹಿವಾಟು ಬಳಕೆದಾರರು), ಒಂದು ತಿಂಗಳಲ್ಲಿ ಕನಿಷ್ಠ ಒಂದು ಯಶಸ್ವಿ ಪಾವತಿ ವಹಿವಾಟು ಹೊಂದಿರುವ ಯೂನಿಕ್ ಬಳಕೆದಾರರ ಸಂಖ್ಯೆ, ವರದಿ ಮಾಡುವ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 37ರಷ್ಟು ಹೆಚ್ಚಳವಾಗಿ, 64.4 ಮಿಲಿಯನ್‌ಗೆ ಬೆಳೆದಿದೆ. ನವೆಂಬರ್ ಮಧ್ಯದಲ್ಲಿ ಸ್ಟಾಕ್ ಮಾರುಕಟ್ಟೆಗಳಲ್ಲಿ ನಿರಾಶಾದಾಯಕ ಪ್ರವೇಶ ಮಾಡಿದ ಪೇಟಿಎಂ, ವಿಶ್ಲೇಷಕರು ಮೌಲ್ಯಮಾಪನದ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ ಮೇಲೆ ಇಶ್ಯೂ ಬೆಲೆಯಿಂದ ಅದರ ಷೇರಿನ ಬೆಲೆ ಅರ್ಧಕ್ಕಿಂತ ಹೆಚ್ಚು ಇಳಿಕೆ ಕಂಡಿದೆ.

ವಿಭಾಗವಾರು, ಗ್ರಾಹಕರಿಗೆ ಪಾವತಿ ಸೇವೆಗಳಿಂದ ಆದಾಯವು ವರ್ಷದಿಂದ ವರ್ಷಕ್ಕೆ ಶೇ 60ರಷ್ಟು ಏರಿಕೆಯಾಗಿದ್ದು, 406 ಕೋಟಿಗೆ ತಲುಪಿದೆ. ಪೇಟಿಎಂ ಪಾವತಿ ಉಪಕರಣಗಳ ವಹಿವಾಟಿನ ವಾಲ್ಯೂಮ್ ಬೆಳವಣಿಗೆ ಮತ್ತು ಹೊಸ ಬಳಕೆ ಪ್ರಕರಣಗಳ ಪರಿಚಯದಿಂದ ಪ್ರೇರಿತವಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಬಳಕೆ ಪ್ರಕರಣಗಳ ಹೆಚ್ಚಿದ ಅಳವಡಿಕೆಯಿಂದಾಗಿ ತ್ರೈಮಾಸಿಕದಿಂದ ತ್ರೈಮಾಸಿಕ ಬೆಳವಣಿಗೆಯು ಪ್ರಾಥಮಿಕವಾಗಿ ಶೇ 15 ಆಗಿತ್ತು. ಹಣಕಾಸು ಸೇವೆಗಳು ಮತ್ತು ಇತರ ಮೂಲದಿಂದ ಆದಾಯವು ವರ್ಷದಿಂದ ವರ್ಷಕ್ಕೆ ಶೇ 201ರಷ್ಟು ಏರಿಕೆಯಾಗಿದ್ದು, FY22 Q3ರಲ್ಲಿ 125 ಕೋಟಿ ರೂಪಾಯಿಗಳಿಗೆ ತಲುಪಿದೆ. ವಿತರಿಸಲಾದ ಸಾಲಗಳ ಮೌಲ್ಯದಲ್ಲಿ ಶೇ 366ರಷ್ಟು ಏರಿಕೆಯಿಂದ ಬೆಳವಣಿಗೆಯು ಪ್ರಾಥಮಿಕವಾಗಿ ನಡೆದಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ರೂ. 2,181 ಕೋಟಿ ಮೌಲ್ಯದ ಸಾಲಗಳನ್ನು ಪೇಟಿಎಂ ಮೂಲಕ ವಿತರಿಸಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ 366 ಮತ್ತು ತ್ರೈಮಾಸಿಕದಲ್ಲಿ ಶೇ 73 ಹಾಗೂ ಸಾಲಗಳ ಸಂಖ್ಯೆ 4.4 ಮಿಲಿಯನ್‌ಗೆ ಏರಿದೆ. ವೆಚ್ಚಗಳ ಕಡೆ ಗಮನಿಸಿದರೆ ಪೇಟಿಎಂನ ಮಾರ್ಕೆಟಿಂಗ್ ಮತ್ತು ಪ್ರಚಾರದ ವೆಚ್ಚಗಳು ಹಿಂದಿನ ವರ್ಷದ ಅವಧಿಯಲ್ಲಿ ರೂ. 211 ಕೋಟಿಗೆ ಹೋಲಿಸಿದರೆ ರೂ. 283 ಕೋಟಿಗೆ ಏರಿದೆ. ಆದರೆ ಈ ವರದಿಯ ಅವಧಿಯಲ್ಲಿ ಕಂಪೆನಿಯ ಒಟ್ಟು ವೆಚ್ಚಗಳು ಶೇ 72ರಷ್ಟು ಏರಿಕೆಯಾಗಿ, 2,317 ಕೋಟಿ ರೂಪಾಯಿಗೆ ತಲುಪಿದೆ.

ಇದನ್ನೂ ಓದಿ: ಒಂದೇ ದಿನಕ್ಕೆ ಹೂಡಿಕೆದಾರರು ಬರುವುದಿಲ್ಲ: ಷೇರುಪೇಟೆಯಲ್ಲಿ ಕುಸಿತದ ನಂತರ ಪೇಟಿಎಂ ಕಾರ್ಯತಂತ್ರ ವಿವರಿಸಿದ ಸಿಇಒ ವಿಜಯ್ ಶೇಖರ್ ಶರ್ಮಾ