ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ 1,100 ಕೋಟಿ ರೂ. ಬಾಕಿ ಪಾವತಿಸುವ ವಿಚಾರದಲ್ಲಿ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ಗೆ (Flipkart) ಕರ್ನಾಟಕ ಹೈಕೋರ್ಟ್ನಿಂದ (Karnataka High Court) ಬುಧವಾರ ರಿಲೀಫ್ ದೊರೆತಿದೆ. ಬಾಕಿ ಮೊತ್ತ ಪಾವತಿ ವಿಚಾರವಾಗಿ ಜನವರಿ 31ರಂದು ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲಿಯವರೆಗೂ ಫ್ಲಿಪ್ಕಾರ್ಟ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚಿಸಿದೆ. 2016-17 ಹಾಗೂ 2018-19ನೇ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪಿನ ವಿರುದ್ಧ ಫ್ಲಿಪ್ಕಾರ್ಟ್ ಕರ್ನಾಟಕ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. 2016-17 ಹಾಗೂ 2018-19ನೇ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಕ್ರಮವಾಗಿ 4,500 ಕೋಟಿ ರೂ. ಮತ್ತು 180 ಕೋಟಿ ರೂ. ಮೊತ್ತದಲ್ಲಿ ಎಂಪ್ಲಾಯೀಸ್ ಸ್ಟಾಕ್ ಓನರ್ಶಿಪ್ ಪ್ಲಾನ್ (ESOP) ಗೆ ಅನುಮತಿಸದಿರುವುದನ್ನು ಮತ್ತು ಅಮೂರ್ತ ವಸ್ತುಗಳ ಬಂಡವಾಳೀಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ತೀರ್ಪು ನೀಡಿದ್ದನ್ನು ಪ್ರಶ್ನಿಸಿ ಕಂಪನಿ ರಿಟ್ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: Repo Rate: ಆರ್ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ
ಅಮೂರ್ತ ವಸ್ತುಗಳ ಬಂಡವಾಳೀಕರಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಆಯುಕ್ತರು ಇಲಾಖೆಯ ಪರವಹಿಸಿ ನಿರ್ಧಾರ ಕೈಗೊಂಡಿದ್ದಾರೆ. ಜತೆಗೆ ಎಂಪ್ಲಾಯೀಸ್ ಸ್ಟಾಕ್ ಓನರ್ಶಿಪ್ ಪ್ಲಾನ್ ವಿಚಾರದಲ್ಲಿ ಮದ್ರಾಸ್ ಮತ್ತು ದೆಹಲಿ ಹೈಕೋರ್ಟ್ಗಳು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಕಡೆಗಣಿಸಿದ್ದಾರೆ ಎಂದು ಫ್ಲಿಪ್ಕಾರ್ಟ್ ಆರೋಪಿಸಿತ್ತು.
ಬಾಕಿ ಪಾವತಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿಲ್ಲ. ಬಾಕಿ ಪಾವತಿಗೆ ಕೇವಲ ನಾಲ್ಕು ದಿನಗಳ ಕಾಲಾವಕಾಶ ನೀಡಿರುವುದಕ್ಕೆ ಯಾವುದೇ ಸಮರ್ಥನೆಗಳಿಲ್ಲ. ಇದರಿಂದಾಗಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದಕ್ಕೂ ನಿರ್ಬಂಧ ವಿಧಿಸಿದಂತಾಗಿತ್ತು ಎಂದು ಫ್ಲಿಪ್ಕಾರ್ಟ್ ಹೇಳಿತ್ತು.
Published On - 6:02 pm, Wed, 8 February 23