Disney Layoff: ವಾಲ್ಟ್ ಡಿಸ್ನಿಯಿಂದ 7000 ಉದ್ಯೋಗಿಗಳ ವಜಾ
ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರಿದಿದ್ದು, 7,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಅಮೆರಿಕದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿ ಘೋಷಿಸಿದೆ.
ಸ್ಯಾನ್ ಫ್ರಾನ್ಸಿಸ್ಕೊ: ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ (Layoff) ಪರ್ವ ಮುಂದುವರಿದಿದ್ದು, 7,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಅಮೆರಿಕದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿ (Walt Disney Co.) ಘೋಷಿಸಿದೆ. ಬಾಬ್ ಐಗರ್ (Bob Iger) ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ನಂತರ ಕೈಗೊಂಡ ಮಹತ್ವದ ಕ್ರಮ ಇದಾಗಿದೆ. ಅಮೆರಿಕದ ಅನೇಕ ತಂತ್ರಜ್ಞಾನ ಕಂಪನಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದೀಗ ಇತರ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಆರಂಭವಾಗಿದೆ. ಆರ್ಥಿಕ ಅನಿಶ್ಚಿತತೆ, ಲಾಭ ಕುಸಿತ ಮತ್ತಿತರ ಕಾರಣಗಳಿಂದ ಅಮೆರಿಕದ ಕಂಪನಿಗಳು ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳ ವಜಾ ಮೊರೆ ಹೋಗುತ್ತಿವೆ ಎಂದು ‘ಎಎಫ್ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಕೇವಲ ಲಘುವಾಗಿ ಈ ನಿರ್ಧಾರ ಕೈಗೊಂಡಿಲ್ಲ. ವಿಶ್ವದಾದ್ಯಂತ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪ್ರತಿಭೆ ಮತ್ತು ಅವರ ಸಮರ್ಪಣಾ ಮನೋಭಾವದ ಕೆಲಸದ ಬಗ್ಗೆ ಅಪಾರ ಗೌರವ ಇದೆ’ ಎಂದು ಇತ್ತೀಚೆಗೆ ತ್ರೈಮಾಸಿಕ ಫಲಿತಾಂಶ ಘೋಷಿಸುವ ಸಂದರ್ಭದಲ್ಲಿ ಬಾಬ್ ಐಗರ್ ಹೇಳಿದ್ದರು.
2021ರ ಅಕ್ಟೋಬರ್ನಲ್ಲಿ ಪ್ರಕಟವಾಗಿದ್ದ ವಾರ್ಷಿಕ ವರದಿಯ ಪ್ರಕಾರ ಡಿಸ್ನಿಯಲ್ಲಿ ಜಾಗತಿಕವಾಗಿ ಒಟ್ಟು 1,90,000 ಉದ್ಯೋಗಿಗಳಿದ್ದಾರೆ. ಈ ಪೈಕಿ ಶೇ 80ರಷ್ಟು ಮಂದಿ ಪೂರ್ಣಕಾಲಿಕ ಉದ್ಯೋಗಿಗಳಾಗಿದ್ದಾರೆ.
ಇದನ್ನೂ ಓದಿ: Layoff: ಇನ್ಫೋಸಿಸ್ನಿಂದ 600 ಮಂದಿ ಹೊಸ ಉದ್ಯೋಗಿಗಳ ವಜಾ; ವರದಿ
ಗ್ರಾಹಕರು ವೆಚ್ಚ ಕಡಿಮೆ ಮಾಡಿರುವುದು ಸ್ಟ್ರೀಮಿಂಗ್ ಚಂದಾದಾರಿಕೆ ಮೇಲೆ ಪರಿಣಾಮ ಬೀರಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಮೊದಲ ಬಾರಿಗೆ ಚಂದಾದಾರರ ಸಂಖ್ಯೆಯಲ್ಲಿ ಕಡಿತವಾಗಿದೆ ಎಂದು ಕಂಪನಿ ತಿಳಿಸಿದೆ. ಮೂರು ತಿಂಗಳ ಹಿಂದಿನ ಅಂಕಿಸಂಖ್ಯೆಗೆ ಹೋಲಿಸಿದರೆ ಡಿಸೆಂಬರ್ 31ರ ವೇಳೆಗೆ ಡಿಸ್ನಿ ಪ್ಲಸ್ ಚಂದಾದಾರರ ಸಂಖ್ಯೆ 168.1 ದಶಲಕ್ಷಕ್ಕೆ ಇಳಿಕೆಯಾಗಿತ್ತು. ಆದಾಗ್ಯೂ ಡಿಸ್ನಿಯ ಷೇರು ಮೌಲ್ಯ ಶೇ 8ರ ವೃದ್ಧಿಯೊಂದಿಗೆ ವಹಿವಾಟು ನಡೆಸುತ್ತಿದೆ.
ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಜನವರಿಯಲ್ಲಿ 12,000 ಉದ್ಯೋಗಿಗಳ ವಜಾ ಘೋಷಿಸಿತ್ತು. ಅಮೆಜಾನ್, ಮೆಟಾ, ಟ್ವಿಟರ್, ಪಿಂಟ್ರೆಸ್ಟ್, ಫಿಲಿಪ್ಸ್, ಐಬಿಎಂ ಸೇರಿದಂತೆ ಹತ್ತಾರು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಭಾರತದಲ್ಲೂ ವಿಪ್ರೋ, ಇನ್ಫೋಸಿಸ್, ಬೈಜೂಸ್ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಲಾಭದಲ್ಲಿ ಕುಸಿತ, ಸಂಭಾವ್ಯ ಆರ್ಥಿಕ ಹಿಂಜರಿತಕ್ಕೆ ಸಿದ್ಧರಾಗುವ ಪ್ರಕ್ರಿಯೆಯ ಭಾಗವಾಗಿ ಮತ್ತು ವೆಚ್ಚ ಕಡಿತದ ಉದ್ದೇಶದೊಂದಿಗೆ ಕಂಪನಿಗಳು ಉದ್ಯೋಗಿಗಳ ವಜಾಗೊಳಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Thu, 9 February 23