Layoff: ಇನ್ಫೋಸಿಸ್ನಿಂದ 600 ಮಂದಿ ಹೊಸ ಉದ್ಯೋಗಿಗಳ ವಜಾ; ವರದಿ
ತಂತ್ರಜ್ಞಾನ ಕಂಪನಿ ವಿಪ್ರೋ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದ ಕೆಲವೇ ದಿನಗಳಲ್ಲಿ ಇನ್ಫೋಸಿಸ್ ಕೂಡ 600 ಮಂದಿ ಹೊಸಬರನ್ನು ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು: ತಂತ್ರಜ್ಞಾನ ಕಂಪನಿ ವಿಪ್ರೋ (Wipro) ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದ ಕೆಲವೇ ದಿನಗಳಲ್ಲಿ ಇನ್ಫೋಸಿಸ್ (Infosys) ಕೂಡ 600 ಮಂದಿ ಹೊಸಬರನ್ನು ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ವರದಿಯಾಗಿದೆ. ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ತರಬೇತಿನಿರತ ಹೊಸ ಉದ್ಯೋಗಿಗಳನ್ನು ಇನ್ಫೋಸಿಸ್ ವಜಾಗೊಳಿಸಿದೆ ಎಂದು ಉದ್ಯೋಗಿಯೊಬ್ಬರ ಹೇಳಿಕೆ ಆಧರಿಸಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ. 2022ರ ಆಗಸ್ಟ್ನಲ್ಲಿ ಇನ್ಫೋಸಿಸ್ಗೆ ಸೇರಿದ್ದು, ಎಸ್ಎಪಿ ಎಬಿಎಪಿ ಸ್ಟ್ರೀಮ್ನಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ತಂಡದಲ್ಲಿದ್ದ 150 ಮಂದಿಗೆ ಆಂತರಿಕ ಪರೀಕ್ಷೆ ನಡೆಸಲಾಗಿದ್ದು, 60 ಮಂದಿ ಮಾತ್ರ ಪಾಸಾಗಿದ್ದಾರೆ. ಉಳಿದವರನ್ನೆಲ್ಲ ಎರಡು ವಾರಗಳ ಹಿಂದೆ ವಜಾಗೊಳಿಸಲಾಗಿದೆ. 150 ಮಂದಿಯ ಪೈಕಿ 85 ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ವಜಾಗೊಂಡ ಉದ್ಯೋಗಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಜತೆಗೆ, ಒಟ್ಟು 600 ಮಂದಿಯನ್ನು ವಜಾಗೊಳಿಸಿರುವ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತಿದೆ ಎಂದು ಹೇಳಿದೆ.
ಎಷ್ಟು ಮಂದಿಯನ್ನು ವಜಾಗೊಳಿಸಲಾಗಿದೆ ಎಂಬ ಬಗ್ಗೆ ಇನ್ಫೋಸಿಸ್ ಪ್ರತಿಕ್ರಿಯೆ ಕೋರಲಾಗಿದ್ದು, ಖಚಿತ ಉತ್ತರ ನೀಡಲು ಕಂಪನಿ ನಿರಾಕರಿಸಿದೆ. 2022ರ ಜುಲೈಗೂ ಮುನ್ನ ಸೇರ್ಪಡೆಯಾದವರನ್ನು ವಜಾಗೊಳಿಸಿಲ್ಲ ಎಂದು ವಜಾಗೊಂಡ ಉದ್ಯೋಗಿಗಳು ಹೇಳಿದ್ದಾರೆ. ಈ ಮಧ್ಯೆ, ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಯಾವಾಗಲೂ ವಜಾಕ್ಕೆ ಕಾರಣವಾಗುತ್ತದೆ ಎಂದು ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Wipro Layoff: ವಿಪ್ರೋದಿಂದ 450 ಮಂದಿ ಹೊಸ ಉದ್ಯೋಗಿಗಳ ವಜಾ; ವರದಿ
ಆಂತರಿಕ ಪರೀಕ್ಷೆ ನಡೆಸಿದ ಬಳಿಕ ಕಳಪೆ ಕಾರ್ಯಕ್ಷಮತೆಯ ಕಾರಣ ನೀಡಿ 450 ಮಂದಿ ಹೊಸ ಉದ್ಯೋಗಿಗಳನ್ನು ಜನವರಿ ಮಧ್ಯಭಾಗದಲ್ಲಿ ವಿಪ್ರೋ ಕೆಲಸದಿಂದ ತೆಗೆದುಹಾಕಿತ್ತು. ನಾವು ಅತ್ಯುನ್ನತ ಗುಣಮಟ್ಟವನ್ನು ಬಯಸುತ್ತೇವೆ. ನಾವು ನಿಗದಿಪಡಿಸಿರುವ ಗುರಿಯ ಮಾನದಂಡಗಳಿಗೆ ಅನುಗುಣವಾಗಿ, ಪ್ರತಿಯೊಬ್ಬ ಹೊಸ ಉದ್ಯೋಗಿ ಕೂಡ ಅವರಿಗೆ ನೀಡಲಾದ ಕೆಲಸದ ಕ್ಷೇತ್ರದಲ್ಲಿ ನಿರ್ದಿಷ್ಟ ಮಟ್ಟದ ಪ್ರಾವೀಣ್ಯತೆಯನ್ನು ಹೊಂದಿರಬೇಕೆಂದು ನಾವು ನಿರೀಕ್ಷಿಸುತ್ತೇವೆ. ಸಂಸ್ಥೆಯ ವ್ಯವಹಾರ ಉದ್ದೇಶಗಳು ಮತ್ತು ನಮ್ಮ ಗ್ರಾಹಕರ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಪ್ರಕ್ರಿಯೆ ರೂಪಿಸಲಾಗಿದೆ ಎಂದು ಕಂಪನಿ ತಿಳಿಸಿತ್ತು.
ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಹೆಚ್ಚಳ
23ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ವರ್ಷದ ಹಿಂದಿನ ಅದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇ 13.4ರಷ್ಟು ಏರಿಕೆಯಾಗಿತ್ತು. ನಿವ್ವಳ ಲಾಭವು 5,809 ಕೋಟಿ ರೂ.ನಿಂದ 6,586 ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಆದಾಯದಲ್ಲಿ ಶೇ 16-16.5ರ ವೃದ್ಧಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Tue, 7 February 23