Vehicle Insurance: ಸುರಕ್ಷಿತ ಚಾಲನೆಗೆ ರಿವಾರ್ಡ್​ ನೀಡುತ್ತದೆ ಈ ಇನ್ಶೂರೆನ್ಸ್; ಏನಿದು ಬಳಕೆ ಆಧಾರಿತ ವಿಮೆ?

ಬಳಕೆ ಆಧಾರಿತ ವಿಮೆ ಎಂದರೇನು? ಈ ವಿಧಾನದ ವಿಮೆಯಿಂದ ಪ್ರಯೋಜನ ಇದೆಯೇ? ಸುರಕ್ಷಿತ ಚಾಲನೆಯ ಮಾನದಂಡಗಳಾವುವು? ಇಲ್ಲಿದೆ ಮಾಹಿತಿ.

Vehicle Insurance: ಸುರಕ್ಷಿತ ಚಾಲನೆಗೆ ರಿವಾರ್ಡ್​ ನೀಡುತ್ತದೆ ಈ ಇನ್ಶೂರೆನ್ಸ್; ಏನಿದು ಬಳಕೆ ಆಧಾರಿತ ವಿಮೆ?
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 07, 2023 | 11:58 AM

ನಾವು ಸುರಕ್ಷಿತವಾಗಿ ವಾಹನ ಚಾಲನೆ ಮಾಡುತ್ತೇವೆ ಎಂಬ ಖಾತರಿ ಇದ್ದರೆ ಈಗ ಬಳಕೆ ಆಧಾರಿತ ವಿಮೆ ಅಥವಾ ಯೂಸೇಜ್ ಬೇಸ್ಡ್ ಇನ್ಶೂರೆನ್ಸ್ (UBI) ಮಾಡಿಸಿಕೊಳ್ಳಲೂ ಅವಕಾಶವಿದೆ. ಈ ವಿಮೆಗೆ ಸುರಕ್ಷಿತ ಚಾಲನೆ (Safe Driving) ಮತ್ತು ಚಾಲನಾ ಅಂಕ (Driving score) ಮುಖ್ಯ ಮಾನದಂಡ ಎಂಬುದನ್ನು ಸಮೀಕ್ಷಾ ವರದಿಯೊಂದು ತಿಳಿಸಿದೆ. ಝುನೋ ಜನರಲ್ ಇನ್ಶೂರೆನ್ಸ್ ಸಮೀಕ್ಷೆ ನಡೆಸಿದ್ದು, ‘ಯೂಸೇಜ್ ಬೇಸ್ಡ್ ಇನ್ಶೂರೆನ್ಸ್: ಡಿಕೋಡಿಂಗ್ ಅವಾರ್​​ನೆಸ್​​, ಪರ್ಸೆಪ್ಷನ್ ಆ್ಯಂಡ್ ಬಿಹೇವಿಯರ್’ ಎಂಬ ವರದಿ ಬಿಡುಗಡೆ ಮಾಡಿದೆ. ಬಳಕೆ ಆಧಾರಿತ ವಿಮೆ ಎಂಬ ಪರಿಕಲ್ಪನೆ ಬಗ್ಗೆ ದೇಶದಲ್ಲಿ ಸಾಕಷ್ಟು ಅರಿವು ಮೂಡಬೇಕಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಈ ಮಧ್ಯೆ, ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 65ರಷ್ಟು ಮಂದಿ ಭಾರತದ ಚಾಲಕರು ಸುರಕ್ಷಿತವಾಗಿ ಚಾಲನೆ ಮಾಡುವವರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 90ರಷ್ಟು ಮಂದಿ ಚಾಲನಾ ಅಂಕ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶೇ 58ರಷ್ಟು ಮಂದಿ ಬಳಕೆ ಆಧಾರಿತ ವಿಮೆ ಬಗ್ಗೆ ಅರಿವು ಇದೆ ಎಂದು ಹೇಳಿದ್ದರೆ, ಶೇ 70ರಷ್ಟು ಮಂದಿ ಬಳಕೆ ಆಧಾರಿತ ವಿಮೆ ಮಾಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಚಾಲನಾ ಅಂಕವು ಚಾಲನೆ ಕೌಶಲ ವೃದ್ಧಿಗೆ ನೆರವಾಗಲಿದೆ ಎಂದು ಶೇ 76 ಮಂದಿ ಅಭಿಪ್ರಾಯಪಟ್ಟಿದ್ದರೆ, ಚಾಲನಾ ಅಭ್ಯಾಸದ ಮೇಲೆ ಸಕಾರಾತ್ಮಕ ಪರಿಣಾಮ ಆಗಲಿದೆ ಎಂದು ಶೇ 95ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಬಳಕೆ ಆಧಾರಿತ ವಿಮೆ ಅಥವಾ ಯೂಸೇಜ್ ಬೇಸ್ಡ್ ಇನ್ಶೂರೆನ್ಸ್ ಎಂದರೇನು?

ಸರಳವಾಗಿ ಹೇಳುವುದಾದರೆ ಕಾರು ಅಥವಾ ವಾಹನವನ್ನು ಹೇಗೆ ಬಳಸುತ್ತಾರೆ ಎಂಬುದರ ಆಧಾರದಲ್ಲಿ ನೀಡುವುದೇ ಬಳಕೆ ಆಧಾರಿತ ವಿಮೆ. ಸಾಂಪ್ರದಾಯಿಕ ವಿಮೆ ಪದ್ಧತಿಯಲ್ಲಾದರೆ ವಾಹನದ ಮೌಲ್ಯ ಲೆಕ್ಕಾಚಾರ ಹಾಕಿ ಪ್ರೀಮಿಯಂ ನಿಗದಿಪಡಿಸಿ ಅದರ ಆಧಾರದಲ್ಲಿ ವಿಮೆ ಸೌಲಭ್ಯ ನೀಡಲಾಗುತ್ತದೆ. ಆದರೆ, ಬಳಕೆ ಆಧಾರಿತ ವಿಮೆಯನ್ನು ನೀಡಲು ಬೇರೆಯದೇ ಆದ ಲೆಕ್ಕಾಚಾರ ಹಾಕಲಾಗುತ್ತದೆ. ವಾಹನವನ್ನು ಎಷ್ಟು ದೂರ ಅಥವಾ ಎಷ್ಟು ಸಮಯ ಚಾಲನೆ ಮಾಡಲಾಗುತ್ತದೆ, ಚಾಲಕನ ಚಾಲನಾ ಅಭ್ಯಾಸ ಹೇಗಿದೆ ಎಂಬ ಎರಡು ಅಂಶಗಳ ಆಧಾರದಲ್ಲಿ ವಿಮೆಯ ಪ್ರೀಮಿಯಂ ನಿಗದಿಪಡಿಸಲಾಗುತ್ತದೆ. ಈ ವಿಧಾನದ ವಿಮೆಯಲ್ಲಿ ಕಡಿಮೆ ಚಾಲನೆಗೆ ಕಡಿಮೆ ಪ್ರೀಮಿಯಂ ಪಾವತಿ ಮಾಡಿದರೆ ಸಾಕಾಗುತ್ತದೆ.

ಇದನ್ನೂ ಓದಿ: Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ

ಚಾಲನೆಯ ವೇಗ, ಅಕ್ಸಲರೇಷನ್ ರೇಟ್, ಸಡನ್ ಬ್ರೇಕಿಂಗ್, ಡಿಸ್ಟ್ರಾಕ್ಟೆಡ್ ಡ್ರೈವಿಂಗ್, ಚಾಲನೆ ಮಾಡುವಾಗ ಚಾಲಕ ಫೋನ್​​ನಲ್ಲಿ ಮಾತನಾಡುತ್ತಾನೆಯೇ ಇತ್ಯಾದಿ ಅಂಶಗಳನ್ನು ಪರಿಗಣಿಸುವ ವಿಮಾ ಕಂಪನಿ ಚಾಲನಾ ಅಂಕ ನೀಡುತ್ತದೆ. ಇದರ ಆಧಾರದಲ್ಲಿ ಪ್ರೀಮಿಯಂ ನಿಗದಿಪಡಿಸಲಾಗುತ್ತದೆ.

ದತ್ತಾಂಶ ಕಲೆಹಾಕುವುದು ಹೇಗೆ?

ಕಾರಿನಲ್ಲಿ ಅಳವಡಿಸಿರುವ ಸಾಧನ ಅಥವಾ ಮೊಬೈಲ್​ ಫೋನ್​​ನಲ್ಲಿ ಆ್ಯಪ್​ ಇನ್​ಸ್ಟಾಲ್ ಮಾಡುವ ಮೂಲಕ ದತ್ತಾಂಶಗಳನ್ನು ವಿಮಾ ಕಂಪನಿ ಕಲೆಹಾಕುತ್ತದೆ. ನಂತರ ಇದರ ಆಧಾರದಲ್ಲಿ ಚಾಲನಾ ಅಂಕ ನಿಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ