EPFO: ಇಪಿಎಫ್ ಖಾತೆಗೆ ಆನ್ಲೈನ್ ಮೂಲಕ ಬ್ಯಾಂಕ್ ವಿವರಗಳನ್ನು ಅಪ್ಡೇಟ್ ಮಾಡಲು ಈ ವಿಧಾನ ಅನುಸರಿಸಿ
ಇಪಿಎಫ್ ಖಾತೆಗೆ ಬ್ಯಾಂಕ್ ವಿವರಗಳನ್ನು ಆನ್ಲೈನ್ ಮೂಲಕ ಅಪ್ಡೇಟ್ ಮಾಡುವ ವಿಧಾನದ ವಿವರ ಇಲ್ಲಿದೆ.
ಉದ್ಯೋಗಿಗಳ ಭವಿಷ್ಯ ನಿಧಿ (EPF) ಸದಸ್ಯರು ತಮ್ಮ ಬ್ಯಾಂಕ್ ಖಾತೆ ವಿವರ ಸರಿಯಾಗಿ ಇರುವಂತೆ ಮತ್ತು ಇಪಿಎಫ್ ಖಾತೆ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಚಂದಾದಾರರು ಈಗ ಆನ್ಲೈನ್ ಮೂಲಕವೇ ಬ್ಯಾಂಕ್ ವಿವರಗಳನ್ನು ಅಪ್ಡೇಟ್ ಮಾಡಬಹುದಾಗಿದೆ. ಈ ಸೇವೆಯನ್ನು ಬಳಸಿಕೊಳ್ಳಬೇಕಿದ್ದರೆ ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ (UAN) ಹೊಂದಿರಬೇಕಾಗುತ್ತದೆ. ಇಪಿಎಫ್ ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಒದಗಿಸುವ ನಿವೃತ್ತಿ ಯೋಜನೆಯಾಗಿದೆ. ಉದ್ಯೋಗಿಗಳು ತಮ್ಮ ವೇತನದ ಶೇ 12ರಷ್ಟು ಮೊತ್ತವನ್ನು ಪ್ರತಿ ತಿಂಗಳು ಇಪಿಎಫ್ನಲ್ಲಿ ಹೂಡಿಕೆ ಮಾಡಬೇಕಿದೆ. ಇಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರೂ ಇಪಿಎಫ್ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಯುಎಎನ್ ಸಂಖ್ಯೆಯನ್ನು ಇಪಿಎಫ್ಒ ಒದಗಿಸುತ್ತದೆ. ವ್ಯಕ್ತಿಯು ಉದ್ಯೋಗದ ಸಂಸ್ಥೆಯನ್ನು ಬದಲಿಸಿದಾಗ ಸಮಸ್ಯೆ ಆಗದಿರಲು ಯುಎಎನ್ ಸಹಕಾರಿಯಾಗಿದೆ.
ಇಪಿಎಫ್ ಖಾತೆಗೆ ಆನ್ಲೈನ್ ಮೂಲಕ ಬ್ಯಾಂಕ್ ವಿವರ ಅಪ್ಡೇಟ್ ಮಾಡುವುದು ಹೇಗೆ?
- ನಿಮ್ಮ ಯೂಸರ್ನೇಮ್ ಮತ್ತು ಪಾಸ್ವರ್ಡ್ ಬಳಸಿಕೊಂಡು ಇಪಿಎಫ್ಒ ಮೆಂಬರ್ ಪೋರ್ಟಲ್ಗೆ ಲಾಗಿನ್ ಆಗಿ.
- ಟಾಪ್ ಮೆನುವಿನಲ್ಲಿರುವ ‘ಮ್ಯಾನೇಜ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಂತರ ಡ್ರಾಪ್ಡೌನ್ ಮಾಡಿ ‘ಕೆವೈಸಿ’ ಆಯ್ಕೆಯನ್ನು ಆಯ್ದುಕೊಳ್ಳಿ.
- ದಾಖಲೆ ಅಪ್ಡೇಟ್ ಮಾಡಬೇಕಿರುವ ‘ಬ್ಯಾಂಕ್’ ಆಯ್ಕೆ ಮಾಡಿ.
- ಈಗ ನೀವು ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಇತ್ಯಾದಿ ವಿವರಗಳನ್ನು ಅಪ್ಡೇಟ್ ಮಾಡಬಹುದು. ನಂತರ ‘ಸೇವ್’ ಅನ್ನು ಕ್ಲಿಕ್ ಮಾಡಿ.
- ಒಮ್ಮೆ ನೀವು ಕೆವೈಸಿ ಅಪ್ಡೇಟ್ ಮಾಡಿ ಸೇವ್ ಮಾಡಿದರೆ, ‘ಕೆವೈಸಿ ಪೆಂಡಿಂಗ್ ಫಾರ್ ಅಪ್ರೂವಲ್’ ಎಂದು ಕಾಣಿಸುತ್ತದೆ.
- ನಂತರ ನಿಮ್ಮ ಉದ್ಯೋಗದಾತರಿಗೆ ದಾಖಲೆಗಳನ್ನು ಒದಗಿಸಿ.
- ಉದ್ಯೋಗದಾತರು ದಾಖಲೆಗಳನ್ನು ದೃಢೀಕರಿಸಿದ ಬಳಿಕ ‘ಡಿಜಿಟಲ್ ಅಪ್ರೂವ್ಡ್ ಕೆವೈಸಿ’ ಎಂಬ ಸಂದೇಶ ಪೋರ್ಟಲ್ನಲ್ಲಿ ಕಾಣಿಸುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕೂಡ ಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ