Adani Row: ಕ್ವಾಂಟ್ ಮ್ಯೂಚುವಲ್ ಫಂಡ್​​ಗಳಲ್ಲಿ​​ ಭಾರೀ ಕುಸಿತ; ಹೂಡಿಕೆ ಮಾಡಿದ್ದರೆ ಈಗೇನು ಮಾಡಬಹುದು?

ಕ್ವಾಂಟ್ ಅಬ್ಸಲ್ಯೂಟ್ ಫಂಡ್, ಕ್ವಾಂಟ್ ಆ್ಯಕ್ಟೀವ್ ಫಂಡ್ ಸೇರಿದಂತೆ ಅನೇಕ ಫಂಡ್​ಗಳು ಅದಾನಿ ಪೋರ್ಟ್ಸ್​ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅಂಬುಜಾ ಸಿಮೆಂಟ್ಸ್ ಸೇರಿದಂತೆ ಅದಾನಿ ಸಮೂಹದ ಅನೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿವೆ.

Adani Row: ಕ್ವಾಂಟ್ ಮ್ಯೂಚುವಲ್ ಫಂಡ್​​ಗಳಲ್ಲಿ​​ ಭಾರೀ ಕುಸಿತ; ಹೂಡಿಕೆ ಮಾಡಿದ್ದರೆ ಈಗೇನು ಮಾಡಬಹುದು?
ಎಸ್​ಐಪಿ ಹೂಡಿಕೆ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on: Feb 06, 2023 | 3:55 PM

ಮುಂಬೈ: ಅದಾನಿ ಸಮೂಹದ (Adani Group) ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾದ ಬೆನ್ನಲ್ಲೇ ಕ್ವಾಂಟ್ ಮ್ಯೂಚುವಲ್ ಫಂಡ್(Quant Mutual Fund) ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಿದ್ದವರಿಗೂ ತಲೆನೋವು ಆರಂಭವಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಕ್ವಾಂಟ್ ಮ್ಯೂಚುವಲ್ ಫಂಡ್​​ನ ಯೋಜನೆಗಳಲ್ಲಿ ಶೇ 2.50 ಯಿಂದ ಶೇ -6.28ರ ವರೆಗೆ ಕುಸಿತವಾಗಿದೆ. ಈ ಮ್ಯೂಚುವಲ್ ಫಂಡ್ ಯೋಜನೆಗಳು ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದೇ ಈ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಉಳಿದಂತೆ ಹೆಚ್ಚಿನ ಮ್ಯೂಚುವಲ್ ಫಂಡ್ ಕಂಪನಿಗಳು ಅದಾನಿ ಸಮೂಹದಲ್ಲಿ ನೇರ ಹೂಡಿಕೆ ಮಾಡಿಲ್ಲ. ಅವುಗಳ ಇಂಡೆಕ್ಸ್ ಸ್ಕೀಮ್​ಗಳು ಮತ್ತು ಇಟಿಎಫ್​​ಗಳು ಮಾತ್ರ ಅದಾನಿ ಷೇರುಗಳೊಂದಿಗೆ ಲಿಂಕ್ ಹೊಂದಿವೆ ಎಂದು ವರದಿಯೊಂದು ತಿಳಿಸಿದೆ.

ಕ್ವಾಂಟ್ ಅಬ್ಸಲ್ಯೂಟ್ ಫಂಡ್, ಕ್ವಾಂಟ್ ಆ್ಯಕ್ಟೀವ್ ಫಂಡ್ ಸೇರಿದಂತೆ ಅನೇಕ ಫಂಡ್​ಗಳು ಅದಾನಿ ಪೋರ್ಟ್ಸ್​ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅಂಬುಜಾ ಸಿಮೆಂಟ್ಸ್ ಸೇರಿದಂತೆ ಅದಾನಿ ಸಮೂಹದ ಅನೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿವೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಮಾಡಿರುವ ಆರೋಪ ಕಂಪನಿಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಗಿದೆ. ಇದು ದೇಶದ ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Multibagger Stock: 1 ಲಕ್ಷ ಹೂಡಿಕೆಗೆ ಮೂರೇ ವರ್ಷಗಳಲ್ಲಿ 2.4 ಕೋಟಿ ಗಳಿಸಿಕೊಟ್ಟಿದೆ ಈ ಮಲ್ಟಿಬ್ಯಾಗರ್ ಸ್ಟಾಕ್!

ಜನವರಿ 25ರಿಂದ ಫೆಬ್ರವರಿ 1ರ ನಡುವೆ ಕ್ವಾಂಟ್ ಮ್ಯೂಚುವಲ್ ಫಂಡ್​ಗಳ ಪೈಕಿ ಕ್ವಾಂಟ್ ಇನ್​ಫ್ರಾಸ್ಟ್ರಕ್ಚರ್ ಮ್ಯೂಚುವಲ್ ಫಂಡ್ ಶೇ -6.28, ಕ್ವಾಂಟ್ ಟ್ಯಾಕ್ಸ್ ಪ್ಲಾನ ಶೇ -5.19, ಕ್ವಾಂಟ್ ಆ್ಯಕ್ಟೀವ್ ಫಂಡ್ ಶೇ -5.14, ಕ್ವಾಂಟ್ ಲಾರ್ಜ್ ಕ್ಯಾಪ್ ಫಂಡ್ ಶೇ -4.30 ಕುಸಿತ ದಾಖಲಿಸಿವೆ. ಇವುಗಳು ಮಾತ್ರವಲ್ಲದೆ ಕ್ವಾಂಟ್ ಮ್ಯೂಚುವಲ್ ಫಂಡ್​ನ ಇನ್ನೂ ಹಲವು ಯೋಜನೆಗಳು ಕುಸಿತ ದಾಖಲಿಸಿವೆ.

ಕ್ವಾಂಟ್ ಮ್ಯೂಚುವಲ್ ಫಂಡ್ ಹೂಡಿಕೆದಾರರು ಏನು ಮಾಡಬೇಕು?

ಕ್ವಾಂಟ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದವರಿಗೆ ಸಹಜವಾಗಿಯೇ ಈಗ ಭೀತಿ ಶುರುವಾಗಿದೆ. ಆದರೆ, ಹೂಡಿಕೆದಾರರು ಆತಂಕಕ್ಕೊಳಗಾಗಿ ಫಂಡ್​​ ವಾಪಸ್ ಕೈಗೊಳ್ಳುವ ನಿರ್ಧಾರ ಮಾಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೂಡಿಕೆದಾರರು ಈಗ ಕಾದುನೋಡುವ ತಂತ್ರ ಅನುಸರಿಸಬೇಕು. ಎಸ್​​ಐಪಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಗಮನಿಸಬೇಕು. ಫಂಡ್​ಗಳು ಮತ್ತೆ ಸುಧಾರಿಸಿಕೊಂಡು ಗಳಿಕೆಯ ಹಾದಿಗೆ ಮರಳಬಹುದು ಎಂದು ಪ್ರಕಾಲ ವೆಲ್ತ್​​​ ಮ್ಯಾನೇಜ್​​ಮೆಂಟ್ ಸ್ಥಾಪಕ ಚೊಕ್ಕಲಿಂಗಂ ಪಳನಿಯಪ್ಪನ್ ಸಲಹೆ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ. 6 ತಿಂಗಳ ನಂತರ ಹೂಡಿಕೆದಾರರು ನಿರ್ಧಾರ ಕೈಗೊಳ್ಳಬಹುದು. ಫಂಡ್​ಗಳಲ್ಲಿ ಶೇ 5ರ ವರೆಗೆ ಕುಸಿತವಾಗುವುದೆಲ್ಲ ಸಾಮಾನ್ಯ. ಈಕ್ವಿಡಿ ಫಂಡ್​​ಗಳಲ್ಲಿ ಏರಿಳಿತ ಸಾಮಾನ್ಯ. ಈಗ ಕುಸಿದಿರುವ ಫಂಡ್​​ಗಳು ಮುಂದೆ ಚೇತರಿಸಬಹುದು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ