BYJU’s Layoff: ಬೈಜೂಸ್ನಲ್ಲಿ ಮತ್ತೆ ಉದ್ಯೋಗ ಕಡಿತ; 1000 ಮಂದಿ ವಜಾ
2023ರಲ್ಲಿಯೂ ಉದ್ಯೋಗ ಕಡಿತ ಮುಂದುವರಿಸಿದ ಬೈಜೂಸ್, ಎಂಜಿನಿಯರಿಂಗ್ ತಂಡಗಳಿಂದ ಒಟ್ಟು ಶೇ 15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಬೆಂಗಳೂರು: ಎಜುಟೆಕ್ ಕಂಪನಿ ಬೈಜೂಸ್ (BYJU’s) ಮತ್ತೆ ಉದ್ಯೋಗ ಕಡಿತದ ಮೊರೆ ಹೋಗಿದ್ದು, ಎಂಜಿನಿಯರಿಂಗ್ ವಿಭಾಗದಿಂದ ಉದ್ಯೋಗಿಗಳನ್ನು ವಜಾಗೊಳಿಸಿದೆ (Layoff) ಎಂದು ವರದಿಯಾಗಿದೆ. ಪ್ರತಿಯೊಂದು ಟೆಕ್ ತಂಡದಿಂದಲೂ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಎಂಜಿನಿಯರಿಂಗ್ ತಂಡಗಳಿಂದ ಒಟ್ಟು ಶೇ 15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಉದ್ಯೋಗಿಯೊಬ್ಬರು ತಿಳಿಸಿರುವುದಾಗಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ. ಇದರೊಂದಿಗೆ ಈವರೆಗೆ ಬೈಜೂಸ್ನಲ್ಲಿ ಹೊಸದಾಗಿ ಒಟ್ಟು 1,000 ಉದ್ಯೋಗಿಗಳನ್ನು ವಜಾಗೊಳಿಸಿದಂತಾಗಿದೆ. ಹೊಸ ಸುತ್ತಿನ ಉದ್ಯೋಗ ಕಡಿತದಲ್ಲಿ ಬೈಜೂಸ್ ಎಲ್ಲ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎನ್ನಲಾಗಿದೆ.
2022ರ ಅಕ್ಟೋಬರ್ನಲ್ಲಿ ಎಂಜಿನಿಯರಿಂಗ್ ವಿಭಾಗದಿಂದ ಕಂಪನಿ ಶೇ 30ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು ಎಂಬುದಾಗಿ ಕಂಪನಿಯ ಹಾಲಿ ಉದ್ಯೋಗಿ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಈ ಬಾರಿ ಮತ್ತೆ ಶೇ 15ರಷ್ಟು ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಚಾರವಾಗಿ ಬೈಜೂಸ್ ಪ್ರತಿಕ್ರಿಯೆ ಕೋರಲಾಗಿದೆ. ಇನ್ನಷ್ಟೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಬೇಕಿದೆ ಎಂದು ವರದಿ ತಿಳಿಸಿದೆ.
ಒಟ್ಟಾರೆ 50,000 ಉದ್ಯೋಗಿಗಳನ್ನು ಹೊಂದಿದ್ದ ಬೈಜೂಸ್ 2022ರ ಅಕ್ಟೋಬರ್ನಲ್ಲಿ 2,500 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಉದ್ಯೋಗಿಗಳ ವಜಾವನ್ನು ಕಂಪನಿಯ ಸ್ಥಾಪಕ ಬೈಜು ರವೀಂದ್ರನ್ ಸಮರ್ಥಿಸಿಕೊಂಡಿದ್ದರು. ಕಂಪನಿಯನ್ನು ಲಾಭದಾಯಕವಾಗಿ ಪರಿವರ್ತಿಸಲು ಈ ಕ್ರಮ ಅನಿವಾರ್ಯ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Pinterest Layoff: ಪಿಂಟ್ರೆಸ್ಟ್ನಿಂದಲೂ ಉದ್ಯೋಗ ಕಡಿತ; 150 ಮಂದಿ ವಜಾ
21ನೇ ಹಣಕಾಸು ವರ್ಷದಲ್ಲಿ ಬೈಜೂಸ್ 4,589 ಕೋಟಿ ರೂ. ನಷ್ಟ ಅನುಭವಿಸಿತ್ತು. ಭಾರತದ ಸ್ಟಾರ್ಟಪ್ಗಳ ಪೈಕಿ ಅತಿಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿ ಗುರುತಿಸಿಕೊಂಡಿತ್ತು. ಕಂಪನಿಯ ಆದಾಯವೂ ಶೇ 3.3ರಷ್ಟು ಕುಸಿತವಾಗಿತ್ತು. ಸುಮಾರು 18 ತಿಂಗಳು ವಿಳಂಬವಾಗಿ ಕಂಪನಿಯ ಫಲಿತಾಂಶ ಪ್ರಕಟಿಸಲಾಗಿತ್ತು.
21ನೇ ಹಣಕಾಸು ವರ್ಷದಲ್ಲಿ ಬೈಜೂಸ್ ಜಾಹೀರಾತು ಮತ್ತು ಮಾರ್ಕೆಟಿಂಗ್ ವಿಭಾಗಕ್ಕಾಗಿ 2,500 ಕೋಟಿ ರೂ.ಗಿಂತಲೂ ಹೆಚ್ಚು ವ್ಯಯಿಸಿತ್ತು. ಫಿಫಾ ವಿಶ್ವಕಪ್ಗೆ ಸುಮಾರು 330 ಕೋಟಿ ರೂ. ನೀಡಿ ಅಧಿಕೃತ ಪ್ರಾಯೋಜಕತ್ವ ವಹಿಸಿಕೊಂಡಿತ್ತು. 2019ರಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನೂ ವಹಿಸಿಕೊಂಡಿತ್ತು.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಮಾಜಿಕ ಮಾಧ್ಯಮ ಮತ್ತು ಇಮೇಜ್ ಶೇರಿಂಗ್ ತಾಣ ಪಿಂಟ್ರೆಸ್ಟ್ ಒಟ್ಟು ಉದ್ಯೋಗಿಗಳ ಪೈಕಿ ಶೇ 5ರಷ್ಟು, ಅಂದರೆ 150 ಮಂದಿಯನ್ನು ವಜಾಗೊಳಿಸಿರುವ ಬಗ್ಗೆ ಇಂದು (ಫೆಬ್ರವರಿ 2) ಬೆಳಿಗ್ಗೆ ವರದಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ