Oil Prices: ಕಚ್ಛಾ ತೈಲ ಬೆಲೆ ಏರಿಕೆ; ಅಮೆರಿಕ ಡಾಲರ್ ಕುಸಿತದ ಎಫೆಕ್ಟ್
US Fed Rate Hike Effect: ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು 25 ಮೂಲಾಂಕಗಳಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಕಚ್ಛಾ ತೈಲ ಬೆಲೆಗಳು ಗರಿಗೆದರಿವೆ. ಬಡ್ಡಿ ದರ ಹೆಚ್ಚಳದಿಂದ ಅಮೆರಿಕದ ಡಾಲರ್ ಕರೆನ್ಸಿ ಮೌಲ್ಯ ತುಸು ಕುರಿದ ಪರಿಣಾಮ ಇದು.
ನವದೆಹಲಿ: ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು (US Federal Bank Rates) 25 ಮೂಲಾಂಕಗಳಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಕಚ್ಛಾ ತೈಲ ಬೆಲೆಗಳು (Crude Oil Prices) ಗರಿಗೆದರಿವೆ. ಬಡ್ಡಿ ದರ ಹೆಚ್ಚಳದಿಂದ ಅಮೆರಿಕದ ಡಾಲರ್ ಕರೆನ್ಸಿ ಮೌಲ್ಯ ತುಸು ಕುರಿದ ಪರಿಣಾಮ ಇದು. ಜೊತೆಗೆ ತೈಲ ಉತ್ಪಾದಕ ದೇಶಗಳ ಓಪೆಕ್ ಸಭೆಯಲ್ಲಿ (OPEC+ Meeting) ತೈಲ ಉತ್ಪಾದನೆಯ ನೀತಿಯಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಿದ ಹಿನ್ನೆಲೆಯಲ್ಲೂ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಪುಷ್ಟಿ ಸಿಕ್ಕಿದೆ.
ಅಮೆರಿಕದಲ್ಲಿ ಹಣದುಬ್ಬರ (US Inflation) ನಿಯಂತ್ರಣಕ್ಕೆ ಬರುತ್ತಿದೆ. ಇದರಿಂದ ಫೆಡರಲ್ ಬ್ಯಾಂಕ್ನ ಬಡ್ಡಿ ದರ ಏರಿಕೆ ಟ್ರೆಂಡ್ ನಿಲ್ಲಬಹುದು ಎಂಬ ಅಂದಾಜಿನಲ್ಲಿ ಇತ್ತೀಚಿನ ಕೆಲ ದಿನಗಳಿಂದ ತೈಲ ಬೆಲೆಗಳು ಇಳಿದಿದ್ದವು. ಆದರೆ, ಫೆಡರಲ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್ಗಳಷ್ಟು ಬಡ್ಡಿ ಏರಿಕೆ ಮಾಡಿದ್ದಲ್ಲದೇ ಭವಿಷ್ಯದಲ್ಲೂ ಹಣದುಬ್ಬರ ಸಂಪೂರ್ಣ ಹತೋಟಿಗೆ ಬರುವವರೆಗೂ ಬಡ್ಡಿ ದರ ಏರಿಕೆ ಮಾಡುತ್ತದೆ ಎಂದು ಬಹಳ ಖಚಿತವಾದ ಸುಳಿವನ್ನು ನೀಡಿದೆ. ಇದರಿಂದ ಡಾಲರ್ ಕರೆನ್ಸಿ ಮೌಲ್ಯ ಕುಸಿತ ಹಾದಿ ಹಿಡಿದಿದೆ. ಇದು ಕಚ್ಛಾ ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಒಪೆಕ್ ಸಭೆಯ ಎಫೆಕ್ಟ್
ಇದೇ ವೇಳೆ, ಇಂದು ಗುರುವಾರ ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಒಪೆಕ್ ಪ್ಲಸ್ (OPEC+) ಕೂಟದ ಸಭೆಯಲ್ಲಿ ಉತ್ಪಾದನಾ ಪ್ರಮಾಣದ ನೀತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಮಾಮೂಲಿಗಿಂತ ಕಡಿಮೆ ಪ್ರಮಾಣದಲ್ಲಿ ತೈಲ ಉತ್ಪಾದನೆಯನ್ನು ಡಿಸೆಂಬರ್ ತಿಂಗಳವರೆಗೂ ಮುಂದುವರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ತೈಲ ಬೆಲೆಗೆ ಬೇಡಿಕೆ ಇಳಿಯಬಾರದು ಎಂಬುದು ಇದರ ಉದ್ದೇಶ.
ಇದನ್ನೂ ಓದಿ: Adani Group: ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ; ಬ್ಯಾಂಕುಗಳಿಂದ ವಿವರ ಕೇಳಿದ ಆರ್ಬಿಐ
ಯಾವುದಿದು ಒಪೆಕ್ ಗುಂಪು?
ಒಪೆಕ್ ಎಂಬುದು ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ (OPEC- Organisation of Petroleum Exporting Countries). 1960ರಲ್ಲಿ ಇರಾಕ್, ಇರಾನ್, ಕುವೇತ್, ಸೌದಿ ಅರೇಬಿಯಾ ಮತ್ತು ವೆನಿಜುವೆಲಾ ದೇಶಗಳು ಸೇರಿ ಮಾಡಿದ ಸಂಘಟನೆ. ಪೆಟ್ರೋಲಿಯಂ ಉತ್ಪಾದಕರಿಗೆ ಸೂಕ್ತ ಬೆಲೆ ಪ್ರಾಪ್ತವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ನಂತರ ಈ ಐದು ದೇಶಗಳ ಜೊತೆಗೆ ಇತರ ಕೆಲ ತೈಲ ಉತ್ಪಾದಕ ದೇಶಗಳಾದ ಆಲ್ಜೀರಿಯಾ, ಆಂಗೋಲಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಗ್ಯಾಬೋನ್, ಲಿಬಿಯಾ, ನೈಜೀರಿಯಾ ಮತ್ತು ಯುಎಇ ಸೇರಿ ಒಟ್ಟು 13 ದೇಶಗಳಿವೆ.
2016ರಲ್ಲಿ ಈ ಒಪೆಕ್ ಸಂಘಟನೆ ಜೊತೆಗೆ ರಷ್ಯಾ, ಕಜಕಸ್ತಾನ, ಅಜರ್ಬೈಜಾನ್, ಮೆಕ್ಸಿಕೋ, ಓಮನ್ ಸೇರಿ ಇತರ 10 ತೈಲ ಉತ್ಪಾದಕ ದೇಶಗಳು ಮೈತ್ರಿ ಮಾಡಿಕೊಂಡು ಒಪೆಕ್ ಪ್ಲಸ್ ಗುಂಪನ್ನು ರಚಿಸಲಾಗಿದೆ.
ಇದನ್ನೂ ಓದಿ: Budget 2023: ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ, ವಿದೇಶ ಪ್ರವಾಸ ಕೈಗೊಳ್ಳುವವರಿಗೂ ತಟ್ಟಲಿದೆ ತೆರಿಗೆ ಬಿಸಿ; ಇಲ್ಲಿದೆ ವಿವರ
ಮುಂದಿನ ದಿನಗಳಲ್ಲಿ ತೈಲ ಬೆಲೆ ಇನ್ನಷ್ಟು ಹೆಚ್ಚಳ?
ಕೋವಿಡ್ ಅಲೆ, ಲಾಕ್ ಡೌನ್ ಕಾರಣಗಳಿಂದಾಗಿ ಕುಸಿತಗೊಂಡಿದ್ದ ಚೀನಾದ ಆರ್ಥಿಕತೆ ಮುಂಬರುವ ದಿನಗಳಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ. ಹೀಗಾದಲ್ಲಿ ಪೆಟ್ರೋಲಿಯಂಗೆ ಬೇಡಿಕೆ ಬಹಳ ಹೆಚ್ಚುತ್ತದೆ. ಈಗ ತೈಲ ಉತ್ಪಾದಕ ಕಂಪನಿಗಳು ಸೀಮಿತ ಪ್ರಮಾಣದಲ್ಲಿ ಮಾತ್ರ ತೈಲ ಹೊರತರಲು ನಿರ್ಧರಿಸಿರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ತೈಲ ಬೆಲೆ ಹೆಚ್ಚಾಗುತ್ತಿದ್ದಲ್ಲಿ ಸ್ವಾಭಾವಿಕವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.