Forex: ಜೂನ್ 6ಕ್ಕೆ ಫಾರೆಕ್ಸ್ ರಿಸರ್ವ್ಸ್ 696.656 ಬಿಲಿಯನ್ ಡಾಲರ್​​ಗೆ ಏರಿಕೆ; ಈ ಮೀಸಲು ನಿಧಿ ಮುಖ್ಯ ಯಾಕೆ?

India's forex reserves nearing record level: ಫಾರೀನ್ ಎಕ್ಸ್​​ಚೇಂಜ್ ರಿಸರ್ವ್ಸ್ 2025ರ ಜೂನ್ 6ರ ವಾರದಲ್ಲಿ 5.17 ಬಿಲಿಯನ್ ಡಾಲರ್​​ನಷ್ಟು ಏರಿಕೆ ಆಗಿದೆ. 700 ಬಿಲಿಯನ್ ಡಾಲರ್ ಗಡಿ ಸಮೀಪ ಹೋಗಿದೆ. ಒಟ್ಟು ಫಾರೆಕ್ಸ್ ರಿಸರ್ವ್ಸ್ 696.656 ಬಿಲಿಯನ್ ಡಾಲರ್ ತಲುಪಿದೆ. ಈ ಬಾರಿ ಏರಿಕೆಯಾದ ಫಾರೆಕ್ಸ್ ರಿಸರ್ವ್ಸ್​​ನಲ್ಲಿ ವಿದೇಶೀ ಕರೆನ್ಸಿ ಆಸ್ತಿ ಮತ್ತು ಚಿನ್ನದ ಸಂಗ್ರಹ ಗಣನೀಯವಾಗಿ ಹೆಚ್ಚಿದೆ.

Forex: ಜೂನ್ 6ಕ್ಕೆ ಫಾರೆಕ್ಸ್ ರಿಸರ್ವ್ಸ್ 696.656 ಬಿಲಿಯನ್ ಡಾಲರ್​​ಗೆ ಏರಿಕೆ; ಈ ಮೀಸಲು ನಿಧಿ ಮುಖ್ಯ ಯಾಕೆ?
ಫಾರೆಕ್ಸ್ ರಿಸರ್ವ್ಸ್

Updated on: Jun 13, 2025 | 7:05 PM

ನವದೆಹಲಿ, ಜೂನ್ 13: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex reserves) ಜೂನ್ 6ಕ್ಕೆ ಅಂತ್ಯಗೊಂಡ ವಾರದಲ್ಲಿ 5.17 ಬಿಲಿಯನ್ ಡಾಲರ್​​ನಷ್ಟು ಏರಿಕೆ ಆಗಿದೆ. ಇದರೊಂದಿಗೆ ಒಟ್ಟು ಫಾರೆಕ್ಸ್ ರಿಸರ್ವ್ಸ್ 696.656 ಬಿಲಿಯನ್ ಡಾಲರ್​​ಗೆ ಏರಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಶೇ. 1.2ರಷ್ಟು ಕೊರತೆ ಇದೆ. 2024ರ ಸೆಪ್ಟೆಂಬರ್​ನಲ್ಲಿ ಫಾರೆಕ್ಸ್ ರಿಸರ್ವ್ಸ್ 704.89 ಬಿಲಿಯನ್ ಡಾಲರ್ ಮುಟ್ಟಿತ್ತು. ಅದು ಇಲ್ಲಿಯವರೆಗಿನ ಗರಿಷ್ಠ ಮಟ್ಟ ಎನಿಸಿದೆ. ಈ ದಾಖಲೆ ಮುರಿಯಲು ಇನ್ನು 8.24 ಬಿಲಿಯನ್ ಡಾಲರ್​ನಷ್ಟು ಏರಿಕೆ ಆದರೆ ಸಾಕಾಗಬಹುದು.

ಆರ್​​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜೂನ್ 6ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿಯಲ್ಲಿ ಹೆಚ್ಚಳವಾದ 5.17 ಬಿಲಿಯನ್ ಡಾಲರ್​​ನಲ್ಲಿ ಫಾರೀನ್ ಕರೆನ್ಸಿ ಮತ್ತು ಚಿನ್ನದ ಪಾಲು ಹೆಚ್ಚಿದೆ.

ವಿದೇಶೀ ಕರೆನ್ಸಿಗಳು 3.472 ಬಿಲಿಯನ್ ಡಾಲರ್​ನಷ್ಟು ಏರಿವೆ. ಗೋಲ್ಡ್ ರಿಸರ್ವ್ಸ್ 1.583 ಬಿಲಿಯನರ್ ಡಾಲರ್​ನಷ್ಟು ಏರಿದೆ.

ಎಸ್​​ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಸಂಗ್ರಹ 102 ಮಿಲಿಯನ್ ಡಾಲರ್​ನಷ್ಟು ಹೆಚ್ಚಿದೆ. ಐಎಂಎಫ್ ಜೊತೆಗಿನ ರಿಸರ್ವ್ ಪೊಸಿಶನ್ ಕೂಡ 14 ಬಿಲಿಯನ್ ಡಾಲರ್​​ನಷ್ಟು ಏರಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಚೀನಾದಲ್ಲಿ ಐಫೋನ್ ಮತ್ತೆ ನಂ. 1; ವಿವೋ, ಶವೋಮಿ, ಓಪ್ಪೋವನ್ನು ಹಿಂದಿಕ್ಕಿದ ಆ್ಯಪಲ್

ಭಾರತದ ಫಾರೆಕ್ಸ್ ರಿಸರ್ವ್ಸ್ ಜೂನ್ 6ಕ್ಕೆ

ಒಟ್ಟು ಫಾರೆಕ್ಸ್ ರಿಸರ್ವ್ಸ್: 696.66 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಆಸ್ತಿ: 587.69 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 85.88 ಬಿಲಿಯನ್ ಡಾಲರ್
  • ಎಸ್​ಡಿಆರ್: 18.67 ಬಿಲಿಯನ್ ಡಾಲರ್
  • ಐಎಂಎಫ್ ರಿಸರ್ವ್: 4.4 ಬಿಲಿಯನ್ ಡಾಲರ್

ಕಳೆದ ನಾಲ್ಕೈದು ವರ್ಷದಿಂದ ಆರ್​​ಬಿಐ ತನ್ನ ಚಿನ್ನದ ಸಂಗ್ರಹ ಹೆಚ್ಚಿಸುತ್ತಿದೆ. 2021ರಿಂದೀಚೆ ಫಾರೆಕ್ಸ್ ರಿಸರ್ವ್ಸ್​​ನಲ್ಲಿ ಚಿನ್ನದ ಸಂಗ್ರಹ ಎರಡು ಪಟ್ಟು ಹೆಚ್ಚಾಗಿದೆ.

ಐಎಂಎಫ್​ನೊಂದಿಗಿನ ರಿಸರ್ವ್ ಪೊಸಿಶನ್ ಎಂದರೇನು?

ರಿಸರ್ವ್ ಪೊಸಿಶನ್ ಎಂದರೆ ಐಎಂಎಫ್​​ನಲ್ಲಿ ಇಟ್ಟಿರುವ ಠೇವಣಿ ಎಂದು ಸರಳವಾಗಿ ಹೇಳಬಹುದು. ಇದು ಬ್ಯಾಂಕ್ ಖಾತೆಯಲ್ಲಿ ಗ್ರಾಹಕರು ಇಡುವ ಠೇವಣಿಯಂತೆ. ಅಗತ್ಯ ಬಿದ್ದಾಗ ಇದನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ: ವಿರಳ ಭೂಖನಿಜಗಳ ರಫ್ತು: ಜಪಾನ್ ಜೊತೆಗೆ ಒಪ್ಪಂದ ರದ್ದುಗೊಳಿಸಲು ಭಾರತ ಮುಂದು; ಕಾರಣ ಏನು?

ಫಾರೆಕ್ಸ್ ರಿಸರ್ವ್ಸ್ ಯಾಕೆ ಮುಖ್ಯ?

ಅಂತಾರಾಷ್ಟ್ರೀಯ ವಹಿವಾಟು ನಡೆಸುವ ದೇಶವೊಂದು ಉತ್ತಮ ಫಾರೆಕ್ಸ್ ರಿಸರ್ವ್ಸ್ ಹೊಂದಿರುವುದು ಅವಶ್ಯಕ. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವಾಗ ವಿದೇಶೀ ಕರೆನ್ಸಿಗಳಲ್ಲಿ ಪಾವತಿ ಮಾಡಬೇಕಾಗುತ್ತದೆ. ಆಗ ಈ ಕರೆನ್ಸಿಗಳ ಸಂಗ್ರಹ ಸಾಕಷ್ಟು ಇರಬೇಕಾಗುತ್ತದೆ.

ರುಪಾಯಿ ಕರೆನ್ಸಿ ದುರ್ಬಲಗೊಂಡಾಗ ಡಾಲರ್ ಕರೆನ್ಸಿ ಮಾರಿ, ರುಪಾಯಿ ಕರೆನ್ಸಿ ಖರೀದಿಸಿ, ಆ ಮೂಲಕ ಅದರ ಕುಸಿತವನ್ನು ತಡೆಯಬಹುದು. ವಿದೇಶದ ಸಾಲ ಪಾವತಿ ಇದ್ದಾಗ ಫಾರೆಕ್ಸ್ ರಿಸರ್ವ್ಸ್ ಬಳಸಿ ಸುಲಭವಾಗಿ ಪಾವತಿಸಬಹುದು. ಹಾಗೆಯೇ, ಉತ್ತಮ ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶವು ಆರ್ಥಿಕವಾಗಿ ಸ್ಥಿರವಾಗಿರುತ್ತದೆ. ಅಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎನಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ