Semicon India: ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಬೇಕೆಂದರೆ ಗಂಡೆದೆ ಬೇಕು: ಭಾರತವನ್ನು ಶ್ಲಾಘಿಸಿದ ಫಾಕ್ಸ್​ಕಾನ್

|

Updated on: Jul 28, 2023 | 2:30 PM

Foxconn Praises India: ಗುಜರಾತ್​ನ ಗಾಂಧಿನಗರದಲ್ಲಿ ಜುಲೈ 28ರಂದು 3 ದಿನಗಳ ಸೆಮಿಕಾನ್ ಇಂಡಿಯಾ 2023 ಕಾರ್ಯಕ್ರಮದ ಉದ್ಘಾಟನೆ ಆಗಿದೆ. ಈ ಸಮಾವೇಶದಲ್ಲಿ ಫಾಕ್ಸ್​ಕಾನ್ ಸೇರಿದಂತೆ ಈ ಉದ್ಯಮದ ಹಲವು ಕಂಪನಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ.

Semicon India: ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಬೇಕೆಂದರೆ ಗಂಡೆದೆ ಬೇಕು: ಭಾರತವನ್ನು ಶ್ಲಾಘಿಸಿದ ಫಾಕ್ಸ್​ಕಾನ್
ಸೆಮಿಕಾನ್ ಇಂಡಿಯಾ 2023
Follow us on

ಗಾಂಧಿನಗರ, ಜುಲೈ 28: ಚೀನಾ ಪ್ರಾಬಲ್ಯ ಇರುವ ಸೆಮಿಕಂಡಕ್ಟರ್ ಉದ್ಯಮವನ್ನು (Semiconductor Industry) ಭಾರತದಲ್ಲೂ ಕಟ್ಟಿ ಬೆಳೆಸುವ ಪ್ರಯತ್ನ ನಡೆದಿದೆ. ಭಾರತದ ಈ ಸಾಹಸವನ್ನು ತೈವಾನ್ ಮೂಲದ ಫಾಕ್ಸ್​ಕಾನ್ ಸಂಸ್ಥೆ ಶ್ಲಾಘಿಸಿದೆ. ಭಾರತದ ಸೆಮಿಕಂಡಕ್ಟರ್ ಉದ್ಯಮದ ಹಾದಿ ಬಗ್ಗೆ ಭರವಸೆ ವ್ಯಕ್ತಪಡಿಸಿದ ಫಾಕ್ಸ್​ಕಾನ್ ಸಂಸ್ಥೆ, ಭಾರತದ ಈ ಸಾಹಸಕ್ಕೆ ತೈವಾನ್ ನಂಬಿಕಸ್ಥ ಜೊತೆಗಾರನಾಗಿರುತ್ತದೆ ಎಂದು ಹೇಳಿದೆ.

ಗುಜರಾತ್​ನ ಗಾಂಧಿನಗರದಲ್ಲಿ ಜುಲೈ 28ರಂದು ನಡೆದ ‘ಸೆಮಿಕಾನ್ ಇಂಡಿಯಾ 2023’ ಕಾರ್ಯಕ್ರಮವನ್ನು (Semicon India 2023 Conference) ಉದ್ದೇಶಿಸಿ ಮಾತನಾಡಿದ ಫಾಕ್ಸ್​ಕಾನ್ ಛೇರ್ಮನ್ ಯಂಗ್ ಲಿಯು, ಭಾರತದ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಯ ಕೈಂಕರ್ಯವನ್ನು ಪ್ರಶಂಸಿಸಿದರು.

ಭಾರತದಲ್ಲಿ ಚಿಪ್​ಗಳಿಗೆ ಇಕೋಸಿಸ್ಟಂ ಕಟ್ಟುವ ಕೆಲಸಕ್ಕೆ ಗಂಡೆದೆ ಬೇಕು. ಆದರೆ, ಮನಸಿದ್ದರೆ ಮಾರ್ಗ ಉಂಟು. ಈ ಕೆಲಸದಲ್ಲಿ ತೈವಾನ್ ನಿಮ್ಮ ಅತ್ಯಂತ ವಿಶ್ವಾಸಾರ್ಹ ಮತ್ತು ನಂಬಿಕಸ್ಥ ಜೊತೆಗಾರನಾಗಿರುತ್ತದೆ. ನಾವು ಒಟ್ಟಿಗೆ ಈ ಕೆಲಸ ಮಾಡೋಣ ಎಂದು ಫಾಕ್ಸ್​ಕಾನ್ ಮುಖ್ಯಸ್ಥರು ಕರೆನೀಡಿದರು.

ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನಡೆಸಿದ ಈ ಕಾರ್ಯಕ್ರಮದಲ್ಲಿ ಸೆಮಿಕಂಡಕ್ಟರ್ ಚಿಪ್ ಉದ್ಯಮದ ಗಣ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್​ಇಎಂಐ ಸಂಸ್ಥೆಯ ಸಿಇಒ ಅಜಿತ್ ಮನೋಜಾ, ಸೆಮಿಕಂಡಕ್ಟರ್ ಉದ್ಯಮದಲ್ಲಿ ಏಷ್ಯಾದಲ್ಲಿ ಭಾರತವೇ ಮುಂದಿನ ಶಕ್ತಿಕೇಂದ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Foxconn: ಸೆಮಿಕಂಡಕ್ಟರ್ ಯೋಜನೆ: ವೇದಾಂತ ಬಿಟ್ಟ ಫಾಕ್ಸ್​ಕಾನ್ ಈಗ ಹೊಸ ಜೊತೆಗಾರಿಕೆಗೆ ಟಿಎಸ್​ಎಂಸಿ, ಟಿಎಂಎಚ್ ಜೊತೆ ಮಾತುಕತೆ

‘ಭಾರತವೂ ಕೂಡ ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಭಾಗವಾಗಲು ಸಾಧ್ಯವಾ ಎಂದು ನನ್ನ ವೃತ್ತಿಜೀವನದಾದ್ಯಂತ ಪ್ರಶ್ನೆ ಕೇಳಲಾಗುತ್ತಿತ್ತು. ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಶುರುವಾಗಿದೆ ಎಂದು ಇವತ್ತು ಹೇಳಲು ಬಯಸುತ್ತೇನೆ. ಇದೇ ಮೊದಲ ಬಾರಿಗೆ ಜಾಗತಿಕ ರಾಜಕೀಯ, ದೇಶೀಯ ನೀತಿ ಮತ್ತು ಖಾಸಗಿ ವಲಯದ ಶಕ್ತಿ ಎಲ್ಲವೂ ಮೇಳೈಸಿ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಪೂರಕವಾಗಿವೆ’ ಎಂದು ಅಜಿತ್ ಮನೋಚಾ ಹೇಳಿದರು.

ವಿಶ್ವದ ಚಿಪ್ ದೈತ್ಯ ಎಎಂಡಿ ಸಂಸ್ಥೆಯ ಸಿಟಿಒ ಮಾರ್ಕ್ ಪೇಪರ್​ಮಾಸ್ಟರ್, ಅಪ್ಲೈಡ್ ಮೆಟೀರಿಯಲ್ಸ್​ನ ಸೆಮಿಕಂಡಕ್ಟರ್ ಪ್ರಾಡಕ್ಟ್ಸ್ ಕ್ರೂಪ್​ನ ಅಧ್ಯಕ್ಷ ಪ್ರಭುರಾಜ, ಮೈಕ್ರಾನ್ ಟೆಕ್ನಾಲಜಿಯ ಸಿಇಒ ಸಂಜಯ್ ಮೆಹ್ರೋತ್ರಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ: China Action: ವಿಶ್ವ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗಲು ಹೊರಟ ಭಾರತಕ್ಕೆ ಚೀನಾ ಅಡೆತಡೆ; ಗ್ಯಾಲಿಯಂ, ಜರ್ಮೇನಿಯಂ ರಫ್ತಿಗೆ ನಿರ್ಬಂಧ

ಪ್ರಧಾನಿ ಮೋದಿ ಉದ್ಘಾಟಿಸಿದ ಈ ಸೆಮಿಕಾನ್ ಇಂಡಿಯಾ 2023 ಸಮಾವೇಶವು ಮೂರು ದಿನಗಳ ಕಾಲ ನಡೆಯಲಿದ್ದು ಜುಲೈ 30ಕ್ಕೆ ಸಮಾಪನಗೊಳ್ಳುತ್ತದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿರುವ ಫಾಕ್ಸ್​ಕಾನ್, ಮೈಕ್ರಾನ್, ಎಎಂಡಿ, ಐಬಿಎಂ, ಮಾರ್ವೆಲ್, ವೇದಾಂತ, ಎಲ್​ಎಎಂ ರೀಸರ್ಚ್, ಎನ್​ಎಕ್ಸ್​ಪಿ ಸೆಮಿಕಂಡಕ್ಟರ್ಸ್, ಎಸ್​ಟಿ ಮೈಕ್ರೋ ಎಲೆಕ್ಟ್ರಾನಿಕ್ಸ್, ಗ್ರಾಂಟ್​ವುಡ್ ಟೆಕ್ನಾಲಜೀಸ್, ಇನ್ಫಿನಿಯನ್ ಟೆಕ್ನಾಲಜೀಸ್, ಅಪ್ಲೈಡ್ ಮೆಟೀರಿಯಲ್ಸ್ ಮತ್ತಿತರ ಪ್ರಮುಖ ಸಂಸ್ಥೆಗಳು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ