AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

House Rent in Bengaluru: ಬೆಂಗಳೂರಿನಲ್ಲಿ ಮನೆ ಹುಡುಕಲು ಪ್ಯಾಕೇಜ್ ಟೂರ್; ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

Package Tour for House Hunting: ಬೆಂಗಳೂರಿನಲ್ಲಿ ಮನೆ ಬಾಡಿಗೆ ಬಹಳ ದುಬಾರಿಯಾಗಿದೆ. ಬಾಡಿಗೆಗೆ ಮನೆ ಸಿಗುವುದು ದುಸ್ತರವಾಗಿದೆ. ಸ್ವಂತವಾಗಿ ಬಾಡಿಗೆ ಮನೆ ಹುಡುಕುವ ಕೆಲಸ ಹಲವರಿಗೆ ಕಬ್ಬಿಣದ ಕಡಲೆಯಂತಾಗಿದೆ. ಈ ಸ್ಥಿತಿಯಲ್ಲಿ ನಗರದ ಕೆಲ ಬ್ರೋಕರ್​ಗಳು ಗ್ರಾಹಕರಿಗಾಗಿ ಪ್ಯಾಕೇಜ್ ಟೂರ್ ಆಯೋಜಿಸುತ್ತಿದ್ದಾರೆ.

House Rent in Bengaluru: ಬೆಂಗಳೂರಿನಲ್ಲಿ ಮನೆ ಹುಡುಕಲು ಪ್ಯಾಕೇಜ್ ಟೂರ್; ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
ಬೆಂಗಳೂರಿನಲ್ಲಿ ಬಾಡಿಗೆ ಮನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 28, 2023 | 4:12 PM

ಬೆಂಗಳೂರು, ಜುಲೈ 28: ವರ್ಕ್ ಫ್ರಂ ಹೋಂಗೆ ನಿರ್ಬಂಧಗಳು ಹೆಚ್ಚಾದಂತೆ ಊರು ಪಾರು ಸೇರಿಕೊಂಡಿದ್ದ ಉದ್ಯೋಗಿಗಳೆಲ್ಲಾ ಅನಿವಾರ್ಯವಾಗಿ ಕಚೇರಿಗಳಿಗೆ (Work From Office) ಬರತೊಡಗಿದ್ದಾರೆ. ಇದರ ಪರಿಣಾಮವಾಗಿ ನಗರಗಳಲ್ಲಿ ಮನೆಗಳಿಗೆ ಬೇಡಿಕೆ ಶುರುವಾಗಿದೆ. ಇದು ಬೆಂಗಳೂರಿನ ವಿಚಾರದಲ್ಲಿ ನೂರಕ್ಕೆ ನೂರು ನಿಜ. ಸಿಲಿಕಾನ್ ಸಿಟಿಯಲ್ಲಿ ಬಾಡಿಗೆಗೆ ಮನೆ (House Rentals) ಸಿಗುವುದೇ ಕಷ್ಟವಾಗಿದೆ. ಅದರಲ್ಲೂ ಒಳ್ಳೆಯ ಸೌಲಭ್ಯ ಇರುವ ಮನೆಗಳಿಗೆ ಭರ್ಜರಿ ಡಿಮ್ಯಾಂಡ್ ಇದೆ. ಬ್ರೋಕರ್​ಗಳಿಗಂತೂ ಈಗ ಕೈತುಂಬಾ ಕೆಲಸ ಸಿಕ್ಕಿದೆ. ಅದರಲ್ಲೂ ಕೋರಮಂಗಲ, ವೈಟ್​ಫೀಲ್ಡ್ ಇತ್ಯಾದಿ ಕಡೆ ಬಾಡಿಗೆ ಮನೆಗಳು ಸಿಗುವುದೇ ದುಸ್ತರವಾಗಿದೆಯಂತೆ. ಇಂಥ ಸಂದರ್ಭದಲ್ಲಿ ಬ್ರೋಕರ್​ಗಳು ಪ್ಯಾಕೇಜ್ ಟೂರ್​ಗಳ ರೀತಿಯಲ್ಲಿ ಬಾಡಿಗೆ ಮನೆ ಆಕಾಂಕ್ಷಿಗಳನ್ನು ಹೌಸ್ ಹಂಟ್​ಗೆ ಕರೆದೊಯ್ಯುತ್ತಿರುವ ಟ್ರೆಂಡ್ ಬೆಂಗಳೂರಿನಲ್ಲಿ ಶುರುವಾಗಿದೆ.

ಮೊದಲಿದ್ದ ಮನೆ ಖಾಲಿ ಮಾಡಿದ ಹೋದ ಜನರು ಮತ್ತೆ ಬೆಂಗಳೂರಿಗೆ ಬರಬೇಕೆಂದರೆ ಮುಂಚಿತವಾಗಿ ಮನೆ ಹುಡುಕುವುದು ಕಷ್ಟ. ನೆಂಟರ ಮನೆಯಲ್ಲೋ, ಸ್ನೇಹಿತರ ಜೊತೆಯಲ್ಲೋ ಕೆಲ ಕಾಲ ಇದ್ದು ಮನೆ ಹುಡುಕಿ ಹೋಗುವ ಇರಾದೆಯಲ್ಲಿರುತ್ತಾರೆ. ಸ್ವಂತವಾಗಿ ಈ ಮನೆ ಹುಡುಕುವುದು ಬಹಳ ಕಷ್ಟ. ಈ ವೇಳೆ ಬ್ರೋಕರ್​ಗಳನ್ನು ಸಂಪರ್ಕಿಸುವುದು ಅನಿವಾರ್ಯ. ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ಈ ಬಗ್ಗೆ ವಿಶೇಷ ವರದಿಯೊಂದು ಪ್ರಕಟವಾಗಿದ್ದು, ಅದರ ಪ್ರಕಾರ ಬೆಂಗಳೂರಿನಲ್ಲಿ ಬ್ರೋಕರ್​ಗಳು ಪ್ಯಾಕೇಜ್ ಟೂರ್ ನಡೆಸುತ್ತಿದ್ದಾರಂತೆ.

ಇದನ್ನೂ ಓದಿ: AMD: ಬೆಂಗಳೂರಿನಲ್ಲಿ ಅಮೆರಿಕದ ಎಎಂಡಿಯಿಂದ ಅತಿದೊಡ್ಡ ಡಿಸೈನ್ ಸೆಂಟರ್; 5 ಲಕ್ಷ ಚದರಡಿಯಲ್ಲಿ ಕಟ್ಟಡ; 400 ಮಿಲಿಯನ್ ಡಾಲರ್ ಹೂಡಿಕೆ

ಒಂದು ರೈಡ್​ನಲ್ಲಿ ಐದಾರು ಮನೆಗಳಿಗೆ ಕರೆದೊಯ್ಯಲಾಗುತ್ತದೆ. ಇದಕ್ಕೆ 1,000 ರೂನಿಂದ 2,000 ರೂವರೆಗೂ ಹಣ ಪಡೆಯುತ್ತಾರೆ ಎಂದು ಕೀರ್ತಿ ಗೌಡ ಎಂಬಾಕೆ ಹೇಳುತ್ತಾರೆಂದು ಮನಿಕಂಟ್ರೋಲ್ ವರದಿ ಮಾಡಿದೆ.

ಇನ್ನು, ಬೆಂಗಳೂರಿನ ರಿಯಾಲ್ಟಿ ಕಾರ್ಪ್ಸ್ ಎಂಬ ಸಂಸ್ಥೆಯಂತೂ ಬಾಡಿಗೆದಾರರಿಗೆಂದು ಓರಿಯಂಟೇಶನ್ ಪ್ರೋಗ್ರಾಮ್ ನಡೆಸುತ್ತದೆ. ಇದಕ್ಕೆ ಶುಲ್ಕ ಬರೋಬ್ಬರಿ 10,000 ರೂನಿಂದ ಆರಂಭವಾಗುತ್ತದೆ. ಇದು ಒಂದು ರೀತಿಯಲ್ಲಿ ಪ್ಯಾಕೇಜ್ ಆಗಿದ್ದು, ಬಾಡಿಗೆ ಮನೆ ಆಕಾಂಕ್ಷಿಗಳಿಗೆ ಒಂದಷ್ಟು ಜಾಗೃತಿ ನೀಡಲಾಗುತ್ತದೆ. ಜೊತೆಗೆ ಐದರಿಂದ ಆರು ಫ್ಲಾಟ್ ಅಥವಾ ಅಪಾರ್ಟ್ಮೆಂಟ್​ಗಳಿಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡಲಾಗುತ್ತದೆ. ಮಾಲ್, ರೆಸ್ಟೋರೆಂಟ್, ಶಾಲೆ ಇತ್ಯಾದಿ ಇತರ ಕೌಟುಂಬಿಕ ಅಗತ್ಯತೆಯ ಸ್ಥಳಗಳನ್ನೂ ತೋರಿಸಲಾಗುತ್ತದೆ.

ಇದನ್ನೂ ಓದಿ: Brij Singh: ‘ಸಾಕಪ್ಪಾ ಸಾಕು ಭಾರತದ ಸಾವಾಸ, ಅಮೆರಿಕಕ್ಕೆ ವಾಪಸ್ ಹೋಗ್ತೀನಿ’- ಬೆಂಗಳೂರಲ್ಲಿ ಕಂಪನಿ ನೊಂದಾಯಿಸಲು ಹೆಣಗಾಡಿದ ಬ್ರಿಜ್ ಸಿಂಗ್

ಬ್ರೋಕರ್​ಗಳ ಬಳಿ ಫೀಲ್ಡ್ ಏಜೆಂಟ್ಸ್

ಬೆಂಗಳೂರಿನಲ್ಲಿ ಬ್ರೋಕರ್​​ಗಳಿಗೆ ಕೆಲಸ ಹೆಚ್ಚಾಗಿದೆ. ಖಾಲಿ ಮನೆಗಳನ್ನು ಹುಡುಕುವುದು ಬ್ರೋಕರ್​ಗಳಿಗೂ ಕಷ್ಟದ ಕೆಲಸವಾಗಿದೆ. ಅದಕ್ಕಾಗಿ ಫೀಲ್ಡ್ ಏಜೆಂಟ್​ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ನಿರ್ದಿಷ್ಟ ರಸ್ತೆ ಅಥವಾ ಪ್ರದೇಶಗಳಲ್ಲಿ ಖಾಲಿ ಇರುವ ಮನೆಗಳ ವಿವರ ಪಡೆದು ಪಟ್ಟಿ ಮಾಡುವುದು ಈ ಫೀಲ್ಡ್ ಏಜೆಂಟ್​ಗಳ ಕೆಲಸ. ಬಳಿಕ ಈ ಖಾಲಿ ಇರುವ ಮನೆಗಳನ್ನು ಗ್ರಾಹಕರಿಗೆ ತೋರಿಸಲು ಪ್ಯಾಕೇಜ್ ಟೂರ್ ನಿಗದಿ ಮಾಡಲಾಗುತ್ತದೆ.

ಬೆಂಗಳೂರಿನಲ್ಲಿ ಗಗನಕ್ಕೇರಿದ ಮನೆ ಬಾಡಿಗೆ ದರ

ಬೆಂಗಳೂರಿನಲ್ಲಿ ಈಗ ಪ್ರಮುಖ ವಸತಿ ಪ್ರದೇಶಗಳಲ್ಲಿ ಮನೆ ಬಾಡಿಗೆ ಬಹಳ ಹೆಚ್ಚಾಗಿದೆ. ಕೆಲ ಕಡೆ ಶೇ. 40ರಷ್ಟು ಬೆಲೆ ಹೆಚ್ಚಾಗಿದೆ. ಕೋರಮಂಗಲದಲ್ಲಿ ಹಿಂದೆ 14,000 ರೂಗೆ ಸಿಗುತ್ತಿದ್ದ ಸಿಂಗಲ್ ಬೆಡ್​ರೂಮ್​ನ ಮನೆ ಬಾಡಿಗೆ ಈಗ 20,000 ರೂಗೂ ಹೆಚ್ಚು ಆಗಿಹೋಗಿದೆ.

ಇದನ್ನೂ ಓದಿ: Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್​ಬಿಐ ಸ್ಪಷ್ಟನೆ

ವೈಟ್​ಫೀಲ್ಡ್​ನಲ್ಲಿ ಸಿಂಗಲ್ ಬ್ಯುಲ್ಡಿಂಗ್​ನಲ್ಲಿರುವ ಡಬಲ್ ಬೆಡ್​ರೂಮ್ ಮನೆ ಬಾಡಿಗೆ 25,000 ರೂ ಇದ್ದದ್ದು ಈಗ 38,000 ರೂವರೆಗೂ ಹೋಗಿದೆ. ಇಲ್ಲಿಯ ಕೆಲ ಅಪಾರ್ಟ್​ಮೆಂಟ್​ಗಳಲ್ಲಿ ಮನೆಬಾಡಿಗೆ ಕನಿಷ್ಠ 50,000 ರೂ ಇದೆ. ಇನ್ನು ಸರ್ಜಾಪುರದಂಥ ಪ್ರದೇಶಗಳಲ್ಲಿ ಟ್ರಿಪಲ್ ಬೆಡ್​ರೂಮ್​ನ ಮನೆ ಬಾಡಿಗೆ 80,000 ರೂಗೂ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Fri, 28 July 23