ಅಮೆರಿಕಕ್ಕೆ ಹೋಗಲು ಎಚ್​1ಬಿ ಸೇರಿ ಹಲವು ವಿಧದ ವೀಸಾಗಳು; ಇಲ್ಲಿದೆ ಸಂಪೂರ್ಣ ಮಾಹಿತಿ

Various types of US Visas: ಅಮೆರಿಕವು ಎರಡು ರೀತಿಯ ವೀಸಾ ನೀಡುತ್ತದೆ. ತಾತ್ಕಾಲಿಕವಾಗಿ ಬರುವಂಥವರಿಗೆ ಮತ್ತು ಖಾಯಂ ನಿವಾಸ ಬಯಸುವವರಿಗೆ ಎಂದು ವೀಸಾ ಇರುತ್ತದೆ. ಪ್ರವಾಸ, ಉದ್ಯೋಗ, ಶಿಕ್ಷಣ, ರಾಜತಾಂತ್ರಿಕ ಕಾರ್ಯಗಳಿಗೆ ಬರುವವರಿಗೆ ತಾತ್ಕಾಲಿಕವಾದ ವೀಸಾ ಸಿಗುತ್ತದೆ. ಎಚ್1ಬಿ ವೀಸಾ ಈ ವಿಭಾಗಕ್ಕೆ ಬರುವಂಥದ್ದು. ಹಾಗೆಯೇ, ನಿರಾಶ್ರಿತರು, ದೊಡ್ಡ ಹೂಡಿಕೆದಾರರು, ಟಾಪ್ ಎಕ್ಸಿಕ್ಯೂಟಿವ್ ಮೊದಲಾದ ವಿಶೇಷ ವರ್ಗದವರಿಗೆ ಖಾಯಂ ವೀಸಾ ನೀಡಲಾಗುತ್ತದೆ.

ಅಮೆರಿಕಕ್ಕೆ ಹೋಗಲು ಎಚ್​1ಬಿ ಸೇರಿ ಹಲವು ವಿಧದ ವೀಸಾಗಳು; ಇಲ್ಲಿದೆ ಸಂಪೂರ್ಣ ಮಾಹಿತಿ
ಅಮೆರಿಕದ ವೀಸಾ

Updated on: Sep 22, 2025 | 12:36 PM

ಅಮೆರಿಕಕ್ಕೆ ವೀಸಾ ಎಂದರೆ ಈಗಂತೂ ತಲೆಗೆ ಬರುವುದು ಎಚ್1ಬಿ ವೀಸಾ (H-1B visa). ಅಮೆರಿಕ ಸರ್ಕಾರ ಎಚ್1ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿದೆ. ಇದರ ಸುತ್ತ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಎಚ್1ಬಿ ವೀಸಾ ಟ್ರೆಂಡಿಂಗ್​ನಲ್ಲಿದೆ. ಆದರೆ, ಅಮೆರಿಕಕ್ಕೆ ಹೋಗಲು ಎಚ್1ಬಿ ವೀಸಾವೊಂದೇ ಅಲ್ಲ, ಇನ್ನೂ ಹಲವಾರು ರೀತಿಯ ವೀಸಾಗಳಿವೆ. ವಿದ್ಯಾಭ್ಯಾಸದಿಂದ ಹಿಡಿದು ವಲಸಿಗರಿಗವರೆಗೆ ನಾನಾ ರೀತಿಯ ವೀಸಾಗಳಿವೆ. ಒಟ್ಟಾರೆ ಅಮೆರಿಕದಲ್ಲಿ ಅಮೂಲಾಗ್ರವಾಗಿ ಎರಡು ರೀತಿಯಲ್ಲಿ ವೀಸಾ ವಿಭಾಗಿಸಬಹುದು. ಒಂದು, ತಾತ್ಕಾಲಿಕ ವೀಸಾ ಅಥವಾ ವಲಸಿಗರಲ್ಲದವರಿಗೆ (non-immigrant visa) ಕೊಡುವ ವೀಸಾ. ಮತ್ತೊಂದು, ವಲಸಿಗರಾಗಲು ಬಯಸುವವರಿಗೆ (immigrants) ನೀಡುವ ವೀಸಾ. ಇವುಗಳಲ್ಲೇ ಬೇರೆ ಬೇರೆ ರೀತಿಯ ವೀಸಾಗಳಿದ್ದು, ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಮೆರಿಕಕ್ಕೆ ತಾತ್ಕಾಲಿಕ ವೀಸಾಗಳು

  1. ಪ್ರವಾಸ ವೀಸಾ
  2. ವರ್ಕ್ ವೀಸಾ
  3. ಸ್ಟುಡೆಂಟ್ ವೀಸಾ
  4. ರಾಜತಾಂತ್ರಿಕ ವೀಸಾ
  5. ಇತರ ವಿಶೇಷ ಉದ್ದೇಶಗಳ ವೀಸಾ

ಖಾಯಂ ನಿವಾಸ ಬಯಸುವ ವಲಸಿಗ ವೀಸಾಗಳು

  1. ಕುಟುಂಬ ಪ್ರಾಯೋಜಿತ ವೀಸಾ
  2. ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್
  3. ಡೈವರ್ಸಿಟಿ ವೀಸಾ
  4. ನಿರಾಶ್ರಿತರ ವೀಸಾ

ಇಲ್ಲಿ ಮೇಲೆ ಹೇಳಿದ ವಿಧದ ವೀಸಾಗಳಲ್ಲೇ ಬೇರೆ ಬೇರೆ ರೀತಿಯ ವೀಸಾಗಳಿವೆ. ತಾತ್ಕಾಲಿಕವಾಗಿ ದೇಶದೊಳಗೆ ಉಳಿಯಲು ನೀಡಲಾಗುವ ವೀಸಾಗಳ ಬಗ್ಗೆ ಮುಂದಿದೆ ಮಾಹಿತಿ.

ಇದನ್ನೂ ಓದಿ: ಎಚ್​​-1 ಬಿ ವೀಸಾ ಶುಲ್ಕ ಹೆಚ್ಚಳ ಗೊಂದಲ, ಯಾರ್ಯಾರಿಗೆ ಅನ್ವಯ? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಟ್ರಂಪ್

ಪ್ರವಾಸ ವೀಸಾ

  • ಬಿ-1 ವೀಸಾ: ಅಮೆರಿಕದಲ್ಲಿ ನಡೆಯುವ ಬ್ಯುಸಿನೆಸ್ ಮೀಟಿಂಗ್, ಕಾನ್ಫರೆನ್ಸ್, ಸಂಧಾನ ಇತ್ಯಾದಿ ಕಾರ್ಯಗಳಲ್ಲಿ ಭಾಗವಹಿಸಲು ಬರುವ ವಿದೇಶಿಗರಿಗೆ ಬಿ1 ವೀಸಾ ನೀಡಲಾಗುತ್ತದೆ.
  • ಬಿ2 ವೀಸಾ: ಪ್ರವಾಸ, ಕುಟುಂಬ ಭೇಟಿ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ ಉದ್ದೇಶಕ್ಕೆ ಬರುವವರಿಗೆ ಬಿ2 ವೀಸಾ ನೀಡಲಾಗುತ್ತದೆ.

ವರ್ಕ್ ವೀಸಾ

ಇದು ಕೌಶಲ್ಯವಂತ ಕಾರ್ಮಿಕರು, ವೃತ್ತಿಪರರು, ವಿಶೇಷ ಉದ್ಯೋಗಿಗಳಿಗೆ ನೀಡಲಾಗುವ ವೀಸಾ. ಇದರಲ್ಲೇ ವಿವಿಧ ರೀತಿಯ ವೀಸಾಗಳಿವೆ. ಅವುಗಳಲ್ಲಿ ಎಚ್1ಬಿ ವೀಸಾ ಕೂಡ ಒಂದು. ವರ್ಕ್ ವೀಸಾ ವಿಭಾಗದಲ್ಲಿ ಬರುವ ವಿವಿಧ ವೀಸಾಗಳ ಪಟ್ಟಿ ಇಲ್ಲಿ ಕೆಳಕಂಡಂತಿದೆ:

  • ಎಚ್1ಬಿ ವೀಸಾ: ಐಟಿ, ಎಂಜಿನಿಯರಿಂಗ್ ಇತ್ಯಾದಿ ವಿಶೇಷ ಉದ್ಯೋಗಗಳಿಗೆ ನೀಡುವ ವೀಸಾ.
  • ಎಚ್2ಎ ವೀಸಾ: ಕೃಷಿ ಕಾರ್ಮಿಕರಿಗೆ ತಾತ್ಕಾಲಿಕವಾಗಿ ನೀಡುವ ವೀಸಾ.
  • ಎಚ್2ಬಿ ವೀಸಾ: ಹೋಟೆಲ್, ಕಟ್ಟಡ ನಿರ್ಮಾಣ ಇತ್ಯಾದಿ ಕೃಷಿಯೇತರ ಕಾರ್ಮಿಕರಿಗೆ ತಾತ್ಕಾಲಿಕವಾಗಿ ನೀಡುವ ವೀಸಾ.
  • ಎಚ್3 ವೀಸಾ: ವೈದ್ಯಕೀಯೇತರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನೀಡುವ ವೀಸಾ.
  • ಎಲ್1 ವೀಸಾ: ಬೇರೆ ದೇಶಗಳಲ್ಲಿರುವ ಕಂಪನಿಗಳು ತಮ್ಮ ಮ್ಯಾನೇಜರ್, ಎಕ್ಸಿಕ್ಯೂಟಿವ್ ಅಥವಾ ತಜ್ಞರನ್ನು ಅಮೆರಿಕದಲ್ಲಿರುವ ತನ್ನ ಬೇರೆ ವಿಭಾಗಕ್ಕೆ ಆಂತರಿಕವಾಗಿ ವರ್ಗಾವಣೆ ಮಾಡುವಾಗ ಈ ವೀಸಾ ನೀಡಲಾಗುತ್ತದೆ.
  • ಒ1 ವೀಸಾ: ಕಲೆ, ವಿಜ್ಞಾನ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಮರ್ಥ್ಯ ಇರುವ ವ್ಯಕ್ತಿಗಳಿಗೆ ಈ ವೀಸಾ ನೀಡಲಾಗುತ್ತದೆ.
  • ಪಿ1 ವೀಸಾ: ಅಮೆರಿಕದಲ್ಲಿ ಕ್ರೀಡಾಕೂಟ, ಮ್ಯೂಸಿಕ್ ಶೋ ಇತ್ಯಾದಿಯಲ್ಲಿ ಭಾಗವಹಿಸಲು ಅಥ್ಲೀಟ್​ಗಳು, ಕಲಾವಿದರು ಮತ್ತಿತರರಿಗೆ ನೀಡಲಾಗುವ ವೀಸಾಲ.
  • ಆರ್1 ವೀಸಾ: ಪೂಜಾರಿಗಳು, ಮಿಷನರಿಗಳು ಮೊದಲಾದ ಧಾರ್ಮಿಕ ಕೆಲಸದವರಿಗೆ ನೀಡಲಾಗುವ ವೀಸಾ.

ವಿದ್ಯಾರ್ಥಿ ವೀಸಾ

  • ಎಫ್1 ವೀಸಾ: ಅಮೆರಿಕದಲ್ಲಿ ಓದಲು ಹೋಗುವವರಿಗೆ ನೀಡುವ ವೀಸಾ ಇದು.
  • ಎಂ1 ವೀಸಾ: ಕೌಶಲ್ಯ ಹೆಚ್ಚಿಸುವಂತಹ ಕಿರು ತರಬೇತಿ ಉದ್ದೇಶಕ್ಕೆ ನೀಡುವ ವೀಸಾ.
  • ಜೆ1 ವೀಸಾ: ಸಂಶೋಧಕರು, ಟ್ರೈನಿಗಳು, ಎಕ್ಸ್​ಚೇಂಜ್ ವಿಸಿಟರ್ಸ್ ಇತ್ಯಾದಿ ಮಂದಿಗೆ ನೀಡುವ ವೀಸಾ.

ಇದನ್ನೂ ಓದಿ: ಈ ವಿದೇಶೀ ಕಂಪನಿಗಳಿಗೆ ಭಾರತ ಕೊಡೋ ದುಡ್ಡು ಅದರ ಡಿಫೆನ್ಸ್ ಬಜೆಟ್​ಗೆ ಸಮ?

ರಾಜತಾಂತ್ರಿಕ ಮತ್ತು ಅಧಿಕೃತ ಭೇಟಿಗೆ ನೀಡುವ ವೀಸಾಗಳು

  • ಎ1 ಮತ್ತು ಎ2 ವೀಸಾಗಳು: ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನೀಡುವ ವೀಸಾ.
  • ಜಿ1, ಜಿ2, ಜಿ3, ಜಿ4, ಜಿ5 ವೀಸಾಗಳು: ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಇತ್ಯಾದಿ ಅಂತಾರಾಷ್ಟ್ರೀಯ ಸಂಘಟನೆಗಳ ಉದ್ಯೋಗಿಗಳಿಗೆ ನೀಡುವ ವೀಸಾಗಳಿವು.
  • ನ್ಯಾಟೋ ವೀಸಾ: ಅಮೆರಿಕದ ಮಿಲಿಟರಿ ಒಕ್ಕೂಟವಾದ ನ್ಯಾಟೋದ (NATO) ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ನೀಡುವ ವೀಸಾಗಳಿವು.

ಇತರ ವಿಶೇಷ ಉದ್ದೇಶದ ವೀಸಾಗಳು

  • ಕೆ1 ವೀಸಾ: ಅಮೆರಿಕದ ಪ್ರಜೆಯನ್ನು ಅಮೆರಿಕದಲ್ಲಿ ಮದುವೆಯಾಗಲಿರುವ ವ್ಯಕ್ತಿಗೆ ನೀಡುವ ವೀಸಾ ಇದು.
  • ಕೆ3 ವೀಸಾ: ಗ್ರೀನ್ ಕಾರ್ಡ್ ಅನುಮೋದನೆಗೆ ಕಾದಿರುವ ಅಮೆರಿಕ ಪ್ರಜೆಯ ಸಂಗಾತಿಗೆ ನೀಡುವ ವೀಸಾ ಇದು.
  • ಸಿ1 ವೀಸಾ: ವಿಮಾನದಲ್ಲಿ ಅಮೆರಿಕ ಮೂಲಕ ಹಾದು ಹೋಗುವವರಿಗೆ ನೀಡುವ ವೀಸಾ ಇದು.
  • ಡಿ1, ಡಿ2 ವೀಸಾ: ಹಡಗು ಅಥವಾ ಏರ್​ಲೈನ್ಸ್ ಇತ್ಯಾದಿಯ ಸಿಬ್ಬಂದಿಗೆ ನೀಡುವ ವೀಸಾ.
  • ಐ ವೀಸಾ: ಪತ್ರಕರ್ತರು ಅಥವಾ ಮಾಧ್ಯಮ ಪ್ರತಿನಿಧಿಗಳಿಗೆ ನೀಡುವ ತಾತ್ಕಾಲಿಕ ವೀಸಾ ಇದು.

ಇಲ್ಲಿ ಮೇಲೆ ತಿಳಿಸಿದ ವೀಸಾಗಳೆಲ್ಲವೂ ತಾತ್ಕಾಲಿಕ ಅವಧಿಗೆ ನೀಡಲಾಗುವಂತಹವು. ಮುಂದೆ, ಖಾಯಂ ಆಗಿ ನೀಡಲಾಗುವ ವಿವಿಧ ವೀಸಾಗಳ ಪರಿಚಯ ಇದೆ.

ಕುಟುಂಬ ಪ್ರಾಯೋಜಿತ ವೀಸಾಗಳು

  • ಐಆರ್1 ವೀಸಾ: ಅಮೆರಿಕ ಪ್ರಜೆಯ ಸಂಗಾತಿಗೆ ನೀಡುವ ವೀಸಾ
  • ಐಆರ್2 ವೀಸಾ: ಅಮೆರಿಕ ಪ್​ರಜೆಯ 21 ವರ್ಷದೊಳಗಿನ ವಯಸ್ಸಿನ ಅವಿವಾಹಿತ ಮಕ್ಕಳಿಗೆ ನೀಡಲಾಗುವ ವೀಸಾ ಇದು.
  • ಐಆರ್5 ವೀಸಾ: ಅಮೆರಿಕ ಪ್ರಜೆಯ ಪೋಷಕರಿಗೆ ನೀಡುವ ವೀಸಾ.
  • ಎಫ್1, ಎಫ್2, ಎಫ್3, ಎಫ್4 ವೀಸಾಗಳು: ಅಮೆರಿಕ ಪ್ರಜೆಯ ಸೋದರ, ಸೋದರಿಯರು, ವಿವಾಹಿತ ಮಕ್ಕಳಿಗೆ ನೀಡುವ ವೀಸಾಗಳಿವು.

ಇದನ್ನೂ ಓದಿ: ಜಿಎಸ್​ಟಿ ಬಗ್ಗೆ ಹೇಳುವಾಗ ಪ್ರಧಾನಿ ಮೋದಿ ಬೆಂಗಳೂರನ್ನು ಪ್ರಸ್ತಾಪಿಸಿದ್ದು ಯಾಕೆ? ಇಲ್ಲಿದೆ ಅದರ ಹಿನ್ನೆಲೆ

ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್​ಗಳು

  • ಇಬಿ1, ಇಬಿ2, ಇಬಿ3 ವೀಸಾಗಳು: ಅಸಾಧಾರಣ ಸಾಮರ್ಥ್ಯದ ಮತ್ತು ಕೌಶಲ್ಯದ ಕೆಲಸಗಾರರು, ಅಗ್ರಮಾನ್ಯ ಎಕ್ಸಿಕ್ಯೂಟಿವ್​ಗಳು, ಉನ್ನತ ಶಿಕ್ಷಣ ಪಡೆದ ವೃತ್ತಿಪರರು ಮೊದಲಾದ ಆದ್ಯತಾ ಉದ್ಯೋಗಿಗಳಿಗೆ ನೀಡಲಾಗುವ ವೀಸಾಗಳು ಇವು.
  • ಇಬಿ4 ವೀಸಾ: ಅಮೆರಿಕ ಶಸ್ತ್ರಪಡೆಗಳ ಸದಸ್ಯರು, ಧಾರ್ಮಿಕ ಕೆಲಸಗಾರರು ಇತ್ಯಾದಿ ವಿಶೇಷ ವಲಸಿಗರಿಗೆ ಈ ವೀಸಾ ನೀಡಲಾಗುತ್ತದೆ.
  • ಇಬಿ5 ವೀಸಾ: ಎಂಟು ಲಕ್ಷ ಡಾಲರ್​ಗೂ ಅಧಿಕ ಮೊತ್ತದ ಹೂಡಿಕೆ ಹಾಗೂ ಸಾಕಷ್ಟು ಉದ್ಯೋಗ ಸೃಷ್ಟಿಸಬಲ್ಲಂತಹ ಹೂಡಿಕೆದಾರರಿಗೆ ಈ ವೀಸಾ ನೀಡಲಾಗುತ್ತದೆ.

ಡೈವರ್ಸಿಟಿ ವೀಸಾ (Diversity Visa Lottery)

ಅಮೆರಿಕಕ್ಕೆ ಬಹಳ ಕಡಿಮೆ ವಲಸೆ ಬರುವಂತಹ ಪ್ರದೇಶಗಳಲ್ಲಿನ ಜನರಿಗೆ, ಅಮೆರಿಕಕ್ಕೆ ಬರಲು ಉತ್ತೇಜಿಸಲು ಲಾಟರಿ ಮೂಲಕ ಈ ವೀಸಾ ನೀಡಲಾಗುತ್ತದೆ.

ನಿರಾಶ್ರಿತರ ವೀಸಾ

ಯುದ್ಧ ಅಥವಾ ಹಿಂಸಾಚಾರಗಳಿಂದ ತಮ್ಮ ದೇಶ ಬಿಟ್ಟು ಆಶ್ರಯ ಕೋರಿ ಬರುವಂತಹ ವ್ಯಕ್ತಿಗಳಿಗೆ ಈ ವೀಸಾ ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ