ನವದೆಹಲಿ, ಆಗಸ್ಟ್ 9: ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ 2024 ಅನ್ನು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಂಡನೆ ಮಾಡಲಿದೆ. ಬ್ಯಾಂಕ್ ಖಾತೆಗೆ ಹೆಚ್ಚು ನಾಮಿನಿಗಳನ್ನು ಹೆಸರಿಸುವುದರಿಂದ ಹಿಡಿದು ಆಡಿಟರ್ಗಳಿಗೆ ಸಂಭಾವನೆ ನಿಗದಿ ಮಾಡುವ ಸ್ವಾತಂತ್ರ್ಯದವರೆಗೆ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಎರಡು ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗಿಕರಣಗೊಳಿಸುವ ಪ್ರಸ್ತಾಪವನ್ನು ತಿದ್ದುಪಡಿ ಮಸೂದೆಯಲ್ಲಿ ಒಳಗೊಂಡಿಲ್ಲ. ಸಹಕಾರಿ ಬ್ಯಾಂಕುಗಳ ನಿಯಮಗಳಲ್ಲಿ ಕೆಲ ಬದಲಾವಣೆ ತರಲಾಗಿರುವುದು ತಿಳಿದುಬಂದಿದೆ.
ಒಂದು ಬ್ಯಾಂಕ್ ಖಾತೆಗೆ ಒಬ್ಬರು ನಾಮಿನಿಯನ್ನಷ್ಟೇ ಹೆಸರಿಸಲು ಸದ್ಯಕ್ಕೆ ಇರುವ ಅವಕಾಶ. ತಿದ್ದುಪಡಿ ಮಸೂದೆಯಲ್ಲಿ ಈ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸುವ ಪ್ರಸ್ತಾಪ ಇದೆ. ಅಂದರೆ, ನಿಮ್ಮ ಬ್ಯಾಂಕ್ ಖಾತೆಗೆ ನೀವು ನಾಲ್ವರು ವಾರಸುದಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಫೋನ್ನ ಬಯೋಮೆಟ್ರಿಕ್ ಅಥವಾ ಫೇಸ್ ಐಡಿ ಮೂಲಕ ಯುಪಿಐ ಪಾವತಿ; ಎನ್ಪಿಸಿಐ ಯೋಜನೆ
ಒಂದು ಕಂಪನಿಯಲ್ಲಿ ನಿರ್ದೇಶಕರು 5 ಲಕ್ಷ ರೂಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದರೆ ಅದನ್ನು ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ಎಂದು ಪರಿಗಣಿಸಲಾಗುತ್ತದೆ. ಇಂಥವರಿಗೆ ಸಾಲ ಕೊಡಲು ಮಂಡಳಿ ಅನುಮೋದನೆ ಪಡೆಯಬೇಕಿರುವುದು ಸೇರಿದ ಕೆಲ ನಿರ್ಬಂಧಗಳಿವೆ. ಈಗ ತಿದ್ದುಪಡಿ ಮಸೂದೆಯಲ್ಲಿರುವ ಹೊಸ ನಿಯಮದ ಪ್ರಕಾರ, ನಿರ್ದೇಶಕರದ್ದು ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ಎಂದು ಪರಿಗಣಿತವಾಗಬೇಕಾದರೆ ಎರಡು ಕೋಟಿ ರೂ ಮೊತ್ತದ ಷೇರುದಾರಿಕೆ ಅಥವಾ ಮಾಲಿಕತ್ವ ಇರಬೇಕು.
ಸರ್ಕಾರದಿಂದ ನೇಮಿಸಲಾದ ಆಡಿಟರ್ಗಳಿಗೆ ಬ್ಯಾಂಕುಗಳೇ ಸಂಭಾವನೆ ನೀಡಬೇಕು. ಎಷ್ಟು ಸಂಭಾವನೆ ನೀಡಬೇಕೆಂದು ಬ್ಯಾಂಕುಗಳೇ ನಿರ್ಧರಿಸುವ ಸ್ವಾತಂತ್ರ್ಯವನ್ನು ತಿದ್ದುಪಡಿ ಮಸೂದೆಯಲ್ಲಿ ಕಲ್ಪಿಸಲಾಗಿದೆ.
ಇದನ್ನೂ ಓದಿ: ಯೂನಿಯನ್ ಬ್ಯಾಂಕ್ನಲ್ಲಿ ಎಫ್ ಡಿ ದರ ಹೆಚ್ಚಳ; ಫಿಕ್ಸೆಡ್ ಇಟ್ಟರೆ ಶೇ. 8.15ರವರೆಗೆ ಬಡ್ಡಿ
ಇನ್ನು, ಬ್ಯಾಂಕುಗಳು ನಿಯಮಾವಳಿ ಅನುಸರಿಸಿರುವ ಬಗ್ಗೆ ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರಗಳಂದು ವರದಿ ಸಲ್ಲಿಸಬೇಕು. ತಿದ್ದುಪಡಿ ಮಾಡಲಾದ ನಿಯಮದ ಪ್ರಕಾರ ತಿಂಗಳ 15ನೇ ತಾರೀಖು ಮತ್ತು ಕೊನೆಯ ತಾರೀಖಿನಂದು ಈ ವರದಿ ಸಲ್ಲಿಕೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ