ನವದೆಹಲಿ, ಜನವರಿ 1: ಹಲವು ಸವಾಲುಗಳ ನಡುವೆಯೂ ತಮ್ಮ ಸಂಸ್ಥೆ 2023ರ ವರ್ಷದಲ್ಲಿ ಹಿಂದೆಂದಿಗಿಂತಲೂ ಬಲಯುತಗೊಂಡಿದೆ ಎಂದು ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ (Gautam Adani) ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಉದ್ಯೋಗಿಗಳಿಗೆ ವಿಡಿಯೋ ಸಂದೇಶದ ಮೂಲಕ ಹುರಿದುಂಬಿಸಿರುವ ಅದಾನಿ, ಕಳೆದ 12 ತಿಂಗಳ ಅವಧಿಯ ಘಟನಾವಳಿಗಳು ಮತ್ತವುಗಳ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ಅದಾನಿ ಸಂಸ್ಥೆಯ ಹಿತಾಸಕ್ತಿ ವಿರುದ್ಧ ನಿಂತ ಒಂದು ಶಾರ್ಟ್ಸೆಲ್ಲರ್ ಹಾಗೂ ವಿವಿಧ ಗುಂಪುಗಳ ದಾಳಿ ಇತ್ಯಾದಿ ಕಂಡ 2023 ತಮ್ಮ ಸಂಸ್ಥೆಗೆ ತೀರಾ ವೈರುದ್ಧ್ಯಗಳ ವರ್ಷವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.
‘12 ತಿಂಗಳ ಹಿಂದೆ ಅಂತಾರಾಷ್ಟ್ರೀಯ ಶಾರ್ಟ್ಸೆಲ್ಲರ್ ಸಂಸ್ಥೆಯೊಂದು ಮಾಡಿದ ದಾಳಿ ನಮ್ಮ ಶಕ್ತಿಯ ಪರೀಕ್ಷೆ ಮಾಡಿತು. ಅದಾನಿ ಹಿತಾಸಕ್ತಿಗೆ ವಿರುದ್ಧವಾದ ವಿವಿಧ ಗುಂಪುಗಳು ಈ ಶಾರ್ಟ್ಸೆಲ್ಲರ್ನ ಆರೋಪಗಳನ್ನು ತಮ್ಮ ಗುರಿಸಾಧನೆಗೆ ಬಳಸಿಕೊಂಡು, ಸಂಸ್ಥೆಯ ಆಡಳಿತ ನಿರ್ವಹಣೆ ಬಗ್ಗೆ ಶಂಕೆ ವ್ಯಕ್ತಪಡಿಸಿ, ಘನತೆಗೆ ಕುಂದು ತರುವ ಪ್ರಯತ್ನ ಮಾಡಿದವು,’ ಎಂದು ಗೌತಮ್ ಅದಾನಿ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Rs 2000 Notes: ಎರಡು ಸಾವಿರ ಮುಖಬೆಲೆಯ ನೋಟು; ಇನ್ನೂ ಮರಳಿಬಂದಿಲ್ಲ 9,330 ಕೋಟಿ ರೂ ಮೊತ್ತದ ನೋಟುಗಳು
ಸುಪ್ರೀಂಕೋರ್ಟ್ ನೇಮಕ ಮಾಡಿದ ಸಮಿತಿಯು ಅದಾನಿ ಗ್ರೂಪ್ನ ಆಡಳಿತವನ್ನು ಸಂಪೂರ್ಣ ಪರಿಶೀಲನೆ ಮಾಡಿದೆ. ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಗ್ರೂಪ್ ವಿರುದ್ಧದ ಆರೋಪಗಳಿಗೆ ಬಲವಾದ ಆಧಾರ ಇಲ್ಲ ಎಂದು ಈ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಸತ್ಯವು ತಮ್ಮೊಂದಿಗೆ ಇದೆ ಎಂದು ಅದಾನಿ ಗ್ರೂಪ್ ಮುಖ್ಯಸ್ಥರು ಹೇಳಿದ್ದಾರೆ.
‘ಭವಿಷ್ಯದಲ್ಲಿ ಇಂಥ ಸಮಸ್ಯೆಗಳನ್ನು ತಪ್ಪಿಸುವುದು ಹೇಗೆಂದು ಕಲಿಯಬೇಕಾಗುತ್ತದೆ. ಆದರೆ, ಶಾರ್ಟ್ಸೆಲ್ಲರ್ ಸಂಸ್ಥೆಯ ದಾಳಿಗೆ ಪ್ರತಿಯಾಗಿ ನಮ್ಮ ಗ್ರೂಪ್ ಸ್ಪಂದಿಸಿದ ರೀತಿ ನಿಜಕ್ಕೂ ಅಸಾಧಾರಣವಾಗಿತ್ತು. ನಾವು ತಿರುಗಿನಿಂತಿದ್ದು ಮಾತ್ರವಲ್ಲ, ದಾಖಲೆಯ ಫಲಿತಾಂಶಗಳನ್ನು ನೀಡಿದೆವು. ತೀವ್ರ ಸವಾಲಿನ ವರ್ಷವನ್ನು ಇನ್ನಷ್ಟು ಬಲಯುತವಾಗಿ ದಾಟಿ ಬಂದೆವು’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ
2023ರ ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ಹಲವು ಆರೋಪಗಳಿರುವ ವರದಿ ಬಿಡುಗಡೆ ಮಾಡಿತ್ತು. ಅದಾದ ಬಳಿಕ ಗ್ರೂಪ್ನ ಹಲವು ಲಿಸ್ಟೆಡ್ ಸಂಸ್ಥೆಗಳ ಷೇರುಗಳು ಪ್ರಪಾತಕ್ಕೆ ಬಿದ್ದವು. ಇದೆಲ್ಲದರ ಮಧ್ಯೆ ಅದಾನಿ ಗ್ರೂಪ್ನ ವ್ಯಾವಹಾರಿಕ ಚಟುವಟಿಕೆ ಕಡಿಮೆ ಆಗಲಿಲ್ಲ. ಅದರ ಸಂಸ್ಥೆಗಳು ಲಾಭ ತೋರಿಸಿವೆ. ಇತ್ತೀಚೆಗೆ ಅದರ ಷೇರುಗಳು ಮತ್ತೆ ಸಹಜ ಬೆಲೆಗೆ ಮರಳುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ