GDP: ಈ ಹಣಕಾಸು ವರ್ಷ ಜಿಡಿಪಿ ದರ ಶೇ. 8ಕ್ಕೆ ಸಮೀಪ: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು
RBI Governor Shaktikanta Das on India GDP growth: ಭಾರತದ ಜಿಡಿಪಿ 2023-24ರ ಹಣಕಾಸು ವರ್ಷದಲ್ಲಿ ಶೇ. 8ರ ಸಮೀಪದಷ್ಟು ಪ್ರಮಾಣದಲ್ಲಿ ಹೆಚ್ಚಾಗಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು ಮಾಡಿದ್ದಾರೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.4ರಷ್ಟು ವೃದ್ಧಿ ಕಂಡ ಹಿನ್ನೆಲೆಯಲ್ಲಿ ಆರ್ಬಿಐ ಸೇರಿದಂತೆ ಬಹುತೇಕ ಎಲ್ಲಾ ಸಂಸ್ಥೆಗಳೂ ಆರ್ಥಿಕತೆಯ ಬೆಳವಣಿಗೆ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.
ನವದೆಹಲಿ, ಮಾರ್ಚ್ 7: ಭಾರತದ ಆರ್ಥಿಕತೆ ಈ ಹಣಕಾಸು ವರ್ಷ ಶೇ 8ಕ್ಕೆ ಸಮೀಪದಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅಂದಾಜು ಮಾಡಿದ್ದಾರೆ. ಸರ್ಕಾರದ ಅಂದಾಜಿಗಿಂತಲೂ ಇದು ತುಸು ಮೇಲಿದೆ. 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.4ರಷ್ಟು ಅಮೋಘ ಹೆಚ್ಚಳ ಕಂಡಿತ್ತು. ಅದರ ಬೆನ್ನಲ್ಲೇ ಸರ್ಕಾರ 2024ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ತನ್ನ ನಿರೀಕ್ಷೆಯನ್ನು ಶೇ. 7.3ರಿಂದ ಶೇ. 7.6ಕ್ಕೆ ಹೆಚ್ಚಿಸಿತ್ತು. ಈಗ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇದಕ್ಕೂ ಹೆಚ್ಚಿನ ಪ್ರಮಾಣದ ಬೆಳವಣಿಗೆಯ ಸಾಧ್ಯತೆಯನ್ನು ಅಂದಾಜಿಸಿದ್ದಾರೆ.
‘ಆರ್ಥಿಕ ಚಟುವಟಿಕೆಯ ವಿವಿಧ ಸೂಚಕ ಮತ್ತು ಗತಿಗಳನ್ನು ಗಮನಿಸಿದಾಗ ನಾಲ್ಕನೇ ಕ್ವಾರ್ಟರ್ನಲ್ಲಿ (ಜನವರಿಯಿಂದ ಮಾರ್ಚ್) ಶೇ. 5.9ರಷ್ಟಾದರೂ ವೃದ್ಧಿ ಆಗಬಹುದು. ಹೀಗಾಗಿ, ಇಡೀ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ಶೇ. 7.6ಕ್ಕಿಂತಲೂ ಹೆಚ್ಚೇ ಆಗುತ್ತದೆ. ಜಿಡಿಪಿ ಬೆಳವಣಿಗೆ ಶೇ. 8ಕ್ಕೆ ಬಹಳ ಸಮೀಪವಂತೂ ಇರಬಹುದು,’ ಎಂದು ಶಕ್ತಿಕಾಂತ್ ದಾಸ್ ಇಟಿ ನೌ ವಾಹಿನಿಯ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್‌ಗಳ ವಿತರಣೆ, ಬಳಕೆಗೆ RBIನಿಂದ ಹೊಸ ಮಾರ್ಗಸೂಚಿ, ಇದು ಯಾರಿಗೆಲ್ಲ ಅನ್ವಯ
‘ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿ ಬೇಡಿಕೆ ಬಹಳ ಉತ್ತಮವಾಗಿದೆ. ನಗರದಲ್ಲಿಯೂ ಬೇಡಿಕೆ ಉತ್ತಮವಾಗಿದೆ. ಹೂಡಿಕೆ ಚಟುವಟಿಕೆ ಪ್ರಬಲವಾಗಿದೆ. ಸರ್ಕಾರ ಮತ್ತು ಖಾಸಗಿ ಎರಡೂ ಕಡೆಯಿಂದಲೂ ಬಂಡವಾಳ ವೆಚ್ಚ ಹರಿದುಬರುತ್ತಿದೆ. ಅದರಲ್ಲೂ ಉಕ್ಕು ಇತ್ಯಾದಿ ಪ್ರಮುಖ ಕ್ಷೇತ್ರಗಳಲ್ಲಿ ಬಂಡವಾಳ ಸಿಗುತ್ತಿದೆ. ಕಟ್ಟಡ ನಿರ್ಮಾನ, ಜವಳಿ, ರಾಸಾಯನಿಕಕ್ಕೆ ಸಂಬಂಧಿಸಿದ ಕೆಲ ವಲಯಗಳಲ್ಲೂ ಬಂಡವಾಳ ವೆಚ್ಚ ಹೆಚ್ಚಾಗುತ್ತಿದೆ,’ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಆರ್ಬಿಐ ಅಂದಾಜು ಪ್ರಕಾರ ಜಿಡಿಪಿ ದರ 2023-24ರ ಹಣಕಾಸು ವರ್ಷದಲ್ಲಿ ಶೇ. 8ಕ್ಕೆ ಸಮೀಪ ಇರಬಹುದು. 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು ಎಂದು ಅದು ನಿರೀಕ್ಷಿಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಅದೇ ನಿರೀಕ್ಷೆ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಎನ್ಎಲ್ಸಿ ಇಂಡಿಯಾದ ಶೇ. 7ರಷ್ಟು ಪಾಲನ್ನು ಮಾರುತ್ತಿರುವ ಸರ್ಕಾರ; ಎರಡು ಸಾವಿರ ಕೋಟಿ ರೂ ಆದಾಯ ಗಳಿಕೆ ನಿರೀಕ್ಷೆ
ಹಾಗೆಯೇ, ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವ ಗುರಿಯತ್ತ ಆರ್ಬಿಐನ ಎಂಪಿಸಿ ಗಮನ ನೆಟ್ಟಿರುತ್ತದೆ. ಯಾವ ರೀತಿಯಲ್ಲೂ ನಿರಾಳರಾಗಿರಲು ಅವಕಾಶ ಇರದು. ಹಣಕಾಸು ಸ್ಥಿರತೆ ಸಾಧಿಸುವ ಗುರಿಗೆ ನಾವು ಬದ್ಧರಾಗಿರುತ್ತೇವೆ ಎಂದು ದಾಸ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Thu, 7 March 24