ಕಂಪನಿ ದುಡ್ಡಲ್ಲಿ ಶೋಕಿ; ಜೆನ್ಸಾಲ್, ಬ್ಲೂಸ್ಮಾರ್ಟ್ ಮುಖ್ಯಸ್ಥರಿಗೆ ಸೆಬಿ ತಪರಾಕಿ; ಏನಿದು ವಿವಾದ?
Anmol Singh Jaggi, Puneet Singh Jaggi controversy: ಜೆನ್ಸಾಲ್ ಎಂಜಿನಿಯರಿಂಗ್ ಮತ್ತು ಬ್ಲೂಸ್ಮಾರ್ಟ್ ಕಂಪನಿಗೆ ಸೇರಿದ ಹಣವನ್ನು ಅದರ ಮುಖ್ಯಸ್ಥರು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿರುವುದು ಬೆಳಕಿಗೆ ಬಂದಿದೆ. ಇದರ ಪರಿಣಾಮವಾಗಿ ಜೆನ್ಸಾಲ್ನ ಸಂಸ್ಥಾಪಕರನ್ನು ಕಂಪನಿಯ ಹುದ್ದೆ ಹೊಂದದಂತೆ ನಿರ್ಬಂಧಿಸಲಾಗಿದೆ. ಜೆನ್ಸಾಲ್ ಒಂದು ಲಿಸ್ಟೆಡ್ ಕಂಪನಿಯಾದ್ದರಿಂದ ಸೆಬಿ ಈ ಕ್ರಮ ಕೈಗೊಂಡಿದೆ.

ನವದೆಹಲಿ, ಏಪ್ರಿಲ್ 16: ಸೌರಶಕ್ತಿ ತಂತ್ರಜ್ಞಾನ, ಇವಿ ತಯಾರಿಕೆ ಇತ್ಯಾದಿ ಕ್ಷೇತ್ರದ ಜೆನ್ಸಾಲ್ ಎಂಜಿನಿಯರಿಂಗ್ (Gensol Engineering) ಮತ್ತು ಇವಿ ರೈಡ್ ಬುಕಿಂಗ್ ಸ್ಟಾರ್ಟಪ್ ಆದ ಬ್ಲೂಸ್ಮಾರ್ಟ್ (BluSmart) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿವೆ. ಬ್ಲುಸ್ಮಾರ್ಟ್ ಬೆಂಗಳೂರು ಹಾಗು ದೆಹಲಿ ಎನ್ಸಿಆರ್ನಲ್ಲಿ ರೈಡ್ ಬುಕಿಂಗ್ ಅನ್ನು ಇವತ್ತು ನಿಲ್ಲಿಸಿರುವುದು ತಿಳಿದುಬಂದಿದೆ. ಇದೇ ವೇಳೆ, ಜೆನ್ಸಾಲ್ ಎಂಜಿನಿಯರಿಂಗ್ನ ಷೇರುಬೆಲೆ ಸತತ ಇಳಿಕೆ ಮುಂದುವರಿದಿದ್ದು, ಇವತ್ತು ಲೋಯರ್ ಸರ್ಕ್ಯುಟ್ ತಲುಪಿತು. ಈ ಎರಡೂ ಬೆಳವಣಿಗೆಗೂ ಒಂದೇ ಲಿಂಕ್ ಇದೆ. ಜೆನ್ಸಾಲ್ ಎಂಜಿನಿಯರಿಂಗ್ ಸಂಸ್ಥಾಪಕರ ಕರ್ಮಕಾಂಡದ ಲಿಂಕ್ ಅದು.
ಜೆನ್ಸಾಲ್ ಎಂಜಿನಿಯರಿಂಗ್ನ ಸ್ಥಾಪಕರು ಅನ್ಮೋಲ್ ಸಿಂಗ್ ಜಗ್ಗಿ ಹಾಗೂ ಪುನೀತ್ ಸಿಂಗ್ ಜಗ್ಗಿ. ಇದೇ ಅನ್ಮೋಲ್ ಸಿಂಗ್ ಜಗ್ಗಿ ಅವರು ಬ್ಲೂಸ್ಮಾರ್ಟ್ನ ಸಹಸಂಸ್ಥಾಪಕರು. ಅನ್ಮೋಲ್ ಸಿಂಗ್ ಜಗ್ಗಿ ಹಾಗೂ ಪುನೀತ್ ಸಿಂಗ್ ಜಗ್ಗಿ ಅವರನ್ನು ಜೆನ್ಸೋಲ್ ಇಂಜಿನಿಯರಿಂಗ್ನಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಳ್ಳದಂತೆ ಸೆಬಿ ನಿರ್ಬಂಧಿಸಿದೆ. ತಮ್ಮ ಕಂಪನಿಗಳ ಫಂಡ್ಗಳನ್ನು ವೈಯಕ್ತಿಕ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿರುವ ಆರೋಪ ಈ ಇಬ್ಬರು ಸಹೋದರರ ಮೇಲಿದೆ. ಹಾಗೆಯೇ, ಇವಿ ವಾಹನಗಳ ಖರೀದಿಗೆ ಸಂಬಂಧಿಸಿದ ಸಾಲದ ಮರುಪಾವತಿ ಮಾಡದೇ ಇರುವ ಆರೋಪವೂ ಇದೆ.
ಇದನ್ನೂ ಓದಿ: ಅಮೆರಿಕದ ಬೋಯಿಂಗ್ ವಿಮಾನಕ್ಕೆ ಚೀನಾ ಕತ್ತರಿ ಹಾಕಿದ್ದು ಭಾರತಕ್ಕೆ ಅನುಕೂಲವಾಯ್ತಾ?
ಅನ್ಮೋಲ್ ಐಷಾರಾಮಿ ಜೀವನ… ದುಬಾರಿ ಫ್ಲ್ಯಾಟ್, ಗೋಲ್ಫ್ ಗೇರ್, ಸ್ಪಾ
ಸೆಬಿ ಮಾಡಿರುವ ಆರೋಪದ ಪ್ರಕಾರ ಜೆನ್ಸಾಲ್ ಎಂಜಿನಿಯರಿಂಗ್ ಹಾಗೂ ಬ್ಲೂಸ್ಮಾರ್ಟ್ ಕಂಪನಿಗಳಿಗೆ ಸೇರಿದ ಫಂಡ್ಗಳನ್ನು ಅನ್ಮೋಲ್ ಸಿಂಗ್ ಜಗ್ಗಿ ತಮ್ಮ ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ. ಜೆನ್ಸೋಲ್ ಪಡೆದ 42.94 ಕೋಟಿ ರೂ ಸಾಲದ ಹಣವನ್ನು ಅನ್ಮೋಲ್ ಸಿಂಗ್ ಜಗ್ಗಿ ದುರುಪಯೋಗಿಸಿಕೊಂಡಿದ್ದಾರೆ. ಗುರುಗ್ರಾಮ್ನಲ್ಲಿ ಪ್ರತಿಷ್ಠಿತ ಡಿಎಲ್ಎಫ್ ಕ್ಯಾಮೆಲಿಯಾಸ್ ಅಪಾರ್ಟ್ಮೆಂಟ್ ಖರೀದಿಗೆ 5 ಕೋಟಿ ರೂ ಹಣ ಪಾವತಿಸಲು ಇದೇ ಫಂಡ್ ಬಳಸಿದ್ದಾರೆ. ಅದಕ್ಕಾಗಿ ತಮ್ಮದೇ ಆದ ಕ್ಯಾಪ್ಬ್ರಿಡ್ಜ್ ವೆಂಚರ್ಸ್ ಎನ್ನುವ ಕಂಪನಿಯ ಮೂಲಕ ಹಣ ಡೈವರ್ಟ್ ಮಾಡಿರುವುದು ಸೆಬಿ ತನಿಖೆಯಲ್ಲಿ ಗೊತ್ತಾಗಿದೆ.
ಬ್ಲೂಸ್ಮಾರ್ಟ್ ಫಂಡ್ಗಳನ್ನು ಹೇಗೆ ದುರುಪಯೋಗಿಸಲಾಯಿತು ನೋಡಿ…
ಬ್ಲುಸ್ಮಾರ್ಟ್ ಕಂಪನಿಗೆ ಸೇರಿದ 25.76 ಕೋಟಿ ರೂ ಫಂಡ್ ಅನ್ನೂ ಅನ್ಮೋಲ್ ಸಿಂಗ್ ಜಗ್ಗಿ ದುರ್ಬಳಕೆ ಮಾಡಿರುವ ಆರೋಪ ಇದೆ. ಹೆಂಡತಿಗೆ 2.98 ಕೋಟಿ ರೂ, ತಾಯಿಗೆ 6.20 ಕೋಟಿ ರೂ ಕೊಟ್ಟಿದ್ದಾರೆ.
ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲಿದೆ: ಜೆಫ್ರೀ ಸ್ಯಾಕ್ಸ್ ಶಾಕಿಂಗ್ ಹೇಳಿಕೆ
ಐಸಿಐಸಿಐ ಸೆಕ್ಯೂರಿಟೀಸ್ನಲಿ 23 ಲಕ್ಷ ರೂ ಹೂಡಿಕೆ ಮಾಡಲು ಇದೇ ಕಂಪನಿ ಫಂಡ್ ಅನ್ನು ಬಳಸಿದ್ದಾರೆ. 26 ಲಕ್ಷ ರೂ ಬೆಲೆಬಾಳುವ ಗಾಲ್ಫ್ ಸೆಟ್, 17 ಲಕ್ಷ ರೂ ಬೆಲೆ ಬಾಳುವ ವಾಚುಗಳನ್ನು ಖರೀದಿಸಿದ್ದಾರೆ.
ಸ್ಪಾಗಳಿಗೆ 10 ಲಕ್ಷ ರೂ, ವೈಯಕ್ತಿಕ ಪ್ರವಾಸ ಬುಕಿಂಗ್ಗೆ 3 ಲಕ್ಷ ರೂ ವ್ಯಯಿಸಿದ್ದಾರೆ. ವೈಯಕ್ತಿಕ ಕ್ರೆಡಿಟ್ ಕಾರ್ಡ್ನ ಬಿಲ್ ಪಾವತಿಸಲೂ ಕಂಪನಿಯ ಫಂಡ್ಗಳನ್ನು ಅನ್ಮೋಲ್ ಬಳಸಿದ್ದಾರೆ ಎಂದು ಸೆಬಿ ಆರೋಪಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ