India-US: ಕೆಲವೇ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲಿದೆ: ಜೆಫ್ರೀ ಸ್ಯಾಕ್ಸ್ ಶಾಕಿಂಗ್ ಹೇಳಿಕೆ
Jeffrey Sachs predicts India to overtake US economy in 10-15 years: ಭಾರತದ ಆರ್ಥಿಕತೆಯು ಮುಂದಿನ 10-15 ವರ್ಷದಲ್ಲಿ ಅಮೆರಿಕದ್ದನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿಡೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಕೊಲಂಬಿಯಾ ಯೂನಿರ್ಸಿಟಿ ಪ್ರೊಫೆಸರ್ ಜೆಫ್ರಿ ಡಿ ಸ್ಯಾಕ್ಸ್ ಹೇಳಿದ್ದಾರೆ. ಅಮೆರಿಕವು ಚೀನಾವನ್ನು ಹಣಿಯಲು ಭಾರತವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ಭಾರತ ಯಾವ ಮೈತ್ರಿಗೂ ಒಳಗಾಗಬಾರದು ಎಂದು ಸ್ಯಾಕ್ಸ್ ಸಲಹೆ ನೀಡಿದ್ದಾರೆ.

ನವದೆಹಲಿ, ಏಪ್ರಿಲ್ 15: ಕೆಲವೇ ವರ್ಷದಲ್ಲಿ ಭಾರತವು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗುತ್ತದೆ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಆದರೆ, ಮೊದಲೆರಡು ಸ್ಥಾನದಲ್ಲಿರುವ ಅಮೆರಿಕ ಮತ್ತು ಚೀನಾವನ್ನು ಭಾರತ ಹಿಂದಿಕ್ಕಬಲ್ಲುದಾ ಎಂಬುದು ದೂರದ ಮಾತಂತಿದೆ. ಆದರೆ, ಕೊಲಂಬಿಯಾ ಯೂನಿವರ್ಸಿಟಿ ಪ್ರೊಫೆಸರ್ ಜೆಫ್ರಿ ಸ್ಯಾಕ್ಸ್ (Jeffrey Sachs) ಅವರು ಅಚ್ಚರಿಯ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಅಮೆರಿಕವನ್ನು ಭಾರತ ಹಿಂದಿಕ್ಕಲಿದೆ ಎಂದಿದ್ದಾರೆ. ಖಾಸಗಿ ಭಾರತೀಯ ವಾಹಿನಿಯೊಂದರಲ್ಲಿ ನಡೆಸಲಾದ ‘ರೈಸಿಂಗ್ ಭಾರತ್’ ಸಮಿಟ್ನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅಮೆರಿಕವನ್ನು ಭಾರತ ಓವರ್ಟೇಕ್ ಮಾಡುವ ಸಾಧ್ಯತೆಯನ್ನು ವಿವರಿಸಿದ್ದಾರೆ.
‘ಇನ್ನು 10-15 ವರ್ಷದಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ’ ಎಂದು ಅಮೆರಿಕನ್ ಆರ್ಥಿಕ ತಜ್ಞರೂ ಆದ ಜೆಫ್ರಿ ಸ್ಯಾಕ್ಸ್ ಭವಿಷ್ಯ ನುಡಿದಿದ್ದಾರೆ. 30 ಟ್ರಿಲಿಯನ್ ಡಾಲರ್ಗೂ ಅಧಿಕ ಜಿಡಿಪಿ ಇರುವ ಅಮೆರಿಕವನ್ನು 4 ಟ್ರಿಲಿಯನ್ ಡಾಲರ್ ಜಿಡಿಪಿಯ ಭಾರತವು ಹಿಂದಿಕ್ಕಲು ಸಾಮಾನ್ಯ ಸಂದರ್ಭದಲ್ಲಂತೂ ಅಸಾಧ್ಯ. ಜೆಫ್ರೀಸ್ ಮಾತು ನಿಜವಾಗಬೇಕಾದರೆ ಅಮೆರಿಕ ಆರ್ಥಿಕತೆ ನಿರಂತರವಾಗಿ ಕುಸಿಯುತ್ತಾ ಹೋಗಬೇಕು. ಭಾರತದ ಆರ್ಥಿಕತೆ ಬೆಳವಣಿಗೆ ಮತ್ತಷ್ಟು ವೇಗದಲ್ಲಿ ಹೆಚ್ಚುತ್ತಾ ಹೋಗಬೇಕು.
ಭಾರತದ ರೀತಿಯ ಸುಪ್ರೀಂಕೋರ್ಟ್ ಅಮೆರಿಕಕ್ಕೆ ಇದ್ದಿದ್ದರೆ ಎಷ್ಟು ಚೆಂದ..!
ಜೆಫ್ರೀ ಡಿ ಸ್ಯಾಕ್ಸ್ ಅವರು ಅಮೆರಿಕದ ಸುಂಕ ಹೇರಿಕೆ ನೀತಿಯನ್ನು ಕಟುವಾಗಿ ವಿರೋಧಿಸಿದ್ದಾರೆ. ಇದು ಅಮೆರಿಕದ ಜನರಿಗೆ ತಾಕಿರುವ ಶಾಪ ಎಂದು ಹೇಳಿರುವ ಅವರು, ಸರ್ಕಾರವನ್ನು ಕಟ್ಟಿಹಾಕಲು ಅಮೆರಿಕದ ಸುಪ್ರೀಂಕೋರ್ಟ್ ಮುಂದೆ ಬರಲಿ ಎಂದೂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್ಬಿಐ ಎಂಪಿಸಿ ಸದಸ್ಯರ ವರದಿ
‘ಭಾರತದ ಸುಪ್ರೀಂಕೋರ್ಟ್ ನಮಗೆ ಇದ್ದಿದ್ದರೆ, ಈ ಆಲೋಚನೆಯೇ ಇರುತ್ತಿರಲಿಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯವು ಬಹಳ ಒಳ್ಳೆಯ ಆ್ಯಕ್ಟಿವಿಸ್ಟ್. ಅಧ್ಯಕ್ಷರು ಎಲ್ಲೆ ಮೀರಿದರೆ ಅದನ್ನು ತಡೆದು ನಿಲ್ಲಿಸುತ್ತಿತ್ತು. ಆದರೆ, ನಮ್ಮ ಸುಪ್ರೀಂಕೋರ್ಟ್ ಬಗ್ಗೆ ಹಾಗೆ ವಿಶ್ವಾಸದಿಂದ ಹೇಳಲು ಆಗಲ್ಲ,’ ಎಂದು ರೈಸಿಂಗ್ ಭಾರತ್ ಸಮಿಟ್ನಲ್ಲಿ ಅವರು ಹೇಳಿದ್ದಾರೆ.
ಟ್ರಂಪ್ ವಿರುದ್ಧ ಕೆಂಡಕಾರಿದ ಜೆಫ್ರೀ
‘ಅಮೆರಿಕ ಅಧ್ಯಕ್ಷರ ಕೈಯಲ್ಲಿ ಎಲ್ಲಾ ಅಧಿಕಾರ ಸೇರುತ್ತಿದೆ. ಏಕ ವ್ಯಕ್ತಿ ಆಡಳಿತಕ್ಕೆ ದೇಶ ಜಾರುತ್ತಿದೆ. ಮನಬಂದದ್ದಕ್ಕೆಲ್ಲಾ ಎಮರ್ಜೆನ್ಸಿ ಎನ್ನುತ್ತಿದ್ದಾರೆ. ಅವರಿಗೆ ಟ್ರೇಡ್ ಡೆಫಿಸಿಟ್ ಇರುವುದು ಎಮರ್ಜೆನ್ಸಿಯಂತೆ. 20 ವರ್ಷಗಳಿಂದಲೂ ಟ್ರೇಡ್ ಡೆಫಿಸಿಟ್ ಇದೆ. ಬಹಳ ಆಳವಾದ ಆರ್ಥಿಕ ಪರಿಣಾಮಗಳು ಇದರ ಹಿಂದಿವೆ. ಒಬ್ಬ ವ್ಯಕ್ತಿ ಬಂದು ಎಮರ್ಜೆನ್ಸಿ ಎಂದು ಹೇಳಿ ಕಾನೂನುಗಳನ್ನು ಹತ್ತಿಕ್ಕಲು ಆಗಲ್ಲ’ ಎಂದು ಜೆಫ್ರೀ ಡಿ ಸ್ಯಾಕ್ಸ್ ಅಭಿಪ್ರಾಯಪಟ್ಟಿದ್ದಾರೆ.
‘ಅಮೆರಿಕದ ಸಂವಿಧಾನದ ಆರ್ಟಿಕಲ್ 1, ಸೆಕ್ಷನ್ 8 ಎಂಬುದಿದೆ. ಆಮದು ಸುಂಕವನ್ನು ವಿಧಿಸುವ ಹಕ್ಕು ಅಧ್ಯಕ್ಷರಿಗಲ್ಲ, ಕಾಂಗ್ರೆಸ್ಸಿಗೆ (ಸಂಸತ್ತು) ಇದೆ ಎಂದು ಅದರಲ್ಲಿ ಸ್ಪಷ್ಟವಾಗಿ ಬರೆದಿದೆ. ಟ್ರಂಪ್ ಅವರ ಅಕ್ರಮಗಳನ್ನು ಕೋರ್ಟ್ ಅಸಿಂಧುಗೊಳಿಸಬಲ್ಲುವಾ ಖಂಡಿತ ಗೊತ್ತಿಲ್ಲ’ ಎಂದು ಕೊಲಂಬಿಯಾ ವಿವಿ ಪ್ರೊಫೆಸರ್ ತಿಳಿಸಿದ್ದಾರೆ.
ಅಮೆರಿಕ ಸಾವಾಸ ಮಾಡಿ ಕೆಟ್ಟವರೇ ಹೆಚ್ಚು
ಅಮೆರಿಕದ ಆಟಕ್ಕೆ ಭಾರತ ಸಿಲುಕಬಾರದು ಎಂದು ಈ ವೇಳೆ ಜೆಫ್ರಿ ಸ್ಯಾಕ್ಸ್ ಕರೆ ನೀಡಿದ್ದಾರೆ. ಅಮೆರಿಕದ ಸ್ನೇಹ ಮಾಡಿದವರು ನಾಶಗೊಂಡಿದ್ದಾರೆ ಎಂದು ಅವರು ನೇರಾನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ
‘ಭಾರತ ಬಹಳ ಹುಷಾರಾಗಿರಬೇಕು. ಯಾವ ಮೈತ್ರಿಯನ್ನೂ ಮಾಡಿಕೊಳ್ಳಬಾರದು. ಅತಿಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಭಾರತವು ತನ್ನ ಸಂಬಂಧಗಳನ್ನು ಹುಷಾರಾಗಿ ಜೋಡಿಸಬೇಕು’ ಎಂದು ಸ್ಯಾಕ್ಸ್ ಅವರು ಭಾರತಕ್ಕೆ ಸಲಹೆ ನೀಡಿದ್ದಾರೆ.
‘ಚೀನಾ ಜೊತೆ ಭಾರತದ ಸಂಬಂಧ ಸೌಹಾರ್ದಯುತವಾಗಿರಲಿ’
‘ಕ್ವಾಡ್ ಮೂಲಕ ಚೀನಾವನ್ನು ಕಟ್ಟಿಹಾಕಲು ಭಾರತವನ್ನು ಬಳಸಿಕೊಳ್ಳಲು ಅಮೆರಿಕ ಯತ್ನಿಸುತ್ತದೆ. ಈ ಅಮೆರಿಕದ ಆಟಕ್ಕೆ ನೀವು ಸಿಲುಕಬೇಡಿ. ವಿಶ್ವದ ಪ್ರತಿಯೊಂದು ದೇಶದ ಜೊತೆಗೂ ಅಮೆರಿಕವು ಡಿವೈಡ್ ಅಂಡ್ ರೂಲ್ (ಒಡೆದು ಆಳುವ ನೀತಿ) ಪಾಲಿಸಿ ಇಟ್ಟುಕೊಂಡಿದೆ. ಅಮೆರಿಕದ ಈ ಆಟಕ್ಕೆ ಒಳಗಾಗುವಷ್ಟು ಸಣ್ಣ ದೇಶವಲ್ಲ ಭಾರತ’ ಎಂದು ಜೆಫ್ರೀ ಸ್ಯಾಕ್ಸ್ ರೈಸಿಂಗ್ ಭಾರತ್ ಸಮಿಟ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
‘ಭಾರತ ಮತ್ತು ಚೀನಾ ಮಧ್ಯೆ ಸಮಸ್ಯೆಗಳಿವೆ. ಆದರೆ, ಎರಡೂ ದೇಶಗಳು ವಿಶ್ವದ ಶೇ. 40ರಷ್ಟು ಜನಸಂಖ್ಯೆ ಹೊಂದಿವೆ. ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಎರಡೂ ದೇಶಗಳು ಒಟ್ಟಿಗೆ ಉತ್ತಮ ಜಗತ್ತನ್ನು ನಿರ್ಮಿಸಬಹುದು’ ಎಂದು ಆರ್ಥಿಕ ತಜ್ಞ ಹಾಗು ಕೊಲಂಬಿಯಾ ಯೂನಿವರ್ಸಿಟಿ ಪ್ರೊಫೆಸರ್ ಜೆಫ್ರಿ ಡಿ ಸ್ಯಾಕ್ಸ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Tue, 15 April 25