Foxconn: ದಕ್ಷಿಣ ಆಯ್ತು, ಉತ್ತರಕ್ಕೆ ಕಾಲಿಡುತ್ತಿರುವ ಐಫೋನ್ ಫ್ಯಾಕ್ಟರಿ; ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಿಸಲಿದೆ ಫಾಕ್ಸ್ಕಾನ್
300 acre iPhone manufacturing unit of Foxconn at Greater Noida: ಭಾರತದಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ತಮಿಳುನಾಡು, ಕರ್ನಾಟಕ, ತೆಲಂಗಾಣ ಬಳಿಕ ಉತ್ತರಪ್ರದೇಶದಲ್ಲೂ ಐಫೋನ್ ಫ್ಯಾಕ್ಟರಿ ಶುರುವಾಗುವ ಸಾಧ್ಯತೆ ಇದೆ. ಆ್ಯಪಲ್ಗೆ ಐಫೋನ್ ತಯಾರಿಸಿಕೊಡುವ ಫಾಕ್ಸ್ಕಾನ್ ಗ್ರೇಟರ್ ನೋಯ್ಡಾದಲ್ಲಿ ಘಟಕ ತಯಾರಿಸಲು 300 ಎಕರೆ ಜಾಗ ಹುಡುಕುತ್ತಿದೆ.

ನವದೆಹಲಿ, ಏಪ್ರಿಲ್ 14: ಆ್ಯಪಲ್ ಕಂಪನಿಯ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಫಾಕ್ಸ್ಕಾನ್ (Foxconn) ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯ (Manufacturing capacity) ಮತ್ತಷ್ಟು ಹೆಚ್ಚಿಸುತ್ತಿದೆ. ತಮಿಳುನಾಡಿನಲ್ಲಿ ಬೃಹತ್ ಫ್ಯಾಕ್ಟರಿ ಹೊಂದಿರುವ ಫಾಕ್ಸ್ಕಾನ್, ಕರ್ನಾಟಕ ಹಾಗೂ ತೆಲಂಗಾಣದಲ್ಲೂ ಘಟಕಗಳನ್ನು ತೆರೆಯುತ್ತಿದೆ. ಇದೇ ವೇಳೆ, ಮೊದಲ ಬಾರಿಗೆ ಉತ್ತರ ಭಾರತಕ್ಕೂ ಅದು ಅಡಿ ಇಡುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಗೆ ಸಮೀಪದಲ್ಲಿರುವ, ಉತ್ತರಪ್ರದೇಶದ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾದಲ್ಲಿ ಫಾಕ್ಸ್ಕಾನ್ ಒಂದು ಘಟಕ ಸ್ಥಾಪಿಸಲು ಪ್ರಯತ್ನಿಸುತ್ತಿದೆ.
ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಯಮುನಾ ಎಕ್ಸ್ಪ್ರೆಸ್ವೇ ಬಳಿ 300 ಎಕರೆಗಿಂತ ದೊಡ್ಡ ಜಾಗವನ್ನು ಫಾಕ್ಸ್ಕಾನ್ ಹುಡುಕುತ್ತಿದೆ. ಅಷ್ಟು ದೊಡ್ಡ ಎಕರೆ ಜಾಗ ಸಿಕ್ಕರೆ ಭಾರತದಲ್ಲಿ ಫಾಕ್ಸ್ಕಾನ್ನ ಅತಿದೊಡ್ಡ ಫ್ಯಾಕ್ಟರಿ ಸ್ಥಳ ಎನಿಸಲಿದೆ. ಚೆನ್ನೈ ಬಳಿ ಇರುವ ಅದರ ಫ್ಯಾಕ್ಟರಿ ದೊಡ್ಡದಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಜಮೀನನ್ನು ಫಾಕ್ಸ್ಕಾನ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಚೀನಾದಲ್ಲಿರುವ ತನ್ನ ಘಟಕ ಬಿಟ್ಟರೆ ಬೆಂಗಳೂರಿನದ್ದು ಸದ್ಯ ಫಾಕ್ಸ್ಕಾನ್ಗೆ ಅತಿದೊಡ್ಡ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಎನಿಸಿದೆ. ಈಗ ನೋಯ್ಡಾದಲ್ಲಿ ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಾಣವಾಗಬಹುದು.
ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ
ಫಾಕ್ಸ್ಕಾನ್ನ ಸೆಮಿಕಂಡಕ್ಟರ್ ಅಸೆಂಬ್ಲಿ ಘಟಕವೂ ಇಲ್ಲೇ
ಎಚ್ಸಿಎಲ್ ಮತ್ತು ಫಾಕ್ಸ್ಕಾನ್ ಸಂಸ್ಥೆಗಳು ಜಂಟಿಯಾಗಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಯುನಿಟ್ ಸ್ಥಾಪಿಸುತ್ತಿವೆ. ಇದಕ್ಕಾಗಿ ಇದೇ ಯಮುನಾ ಎಕ್ಸ್ಪ್ರೆಸ್ವೇ ವಲಯದಲ್ಲಿ 50 ಎಕರೆ ಜಾಗ ಪಡೆಯಲಾಗಿದೆ. ಈ ಸೆಮಿಕಂಡಕ್ಟರ್ ಯೋಜನೆಗೆ ಸದ್ಯ ಸರ್ಕಾರದಿಂದ ಅನುಮೋದನೆಯಷ್ಟೇ ಬಾಕಿ ಇದೆ.
ಈಗ ಅದೇ ವಲಯದಲ್ಲಿ ಐಫೋನ್ ಅಸೆಂಬ್ಲಿಂಗ್ ಯುನಿಟ್ ಅನ್ನು ಫಾಕ್ಸ್ಕಾನ್ ತೆರೆಯಲು ಹೊರಟಿದೆ. ಈ ಮೂಲಕ ಭಾರತದಲ್ಲಿ ಫಾಕ್ಸ್ಕಾನ್ನ ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.
ಇದನ್ನೂ ಓದಿ: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ
ಆ್ಯಪಲ್ ಕಂಪನಿಯ ಗುರಿ ಸಾಧನೆಯತ್ತ ಮತ್ತೊಂದು ಹೆಜ್ಜೆ
ಆ್ಯಪಲ್ ಕಂಪನಿ ತನ್ನ ಕಂಪನಿಯ ಉತ್ಪನ್ನಗಳನ್ನು ಭಾರತದಲ್ಲಿ ಹೆಚ್ಚೆಚ್ಚು ತಯಾರಿಸುವ ಗುರಿ ಹೊಂದಿದೆ. ಚೀನಾದಲ್ಲಿ ಈಗಲೂ ಕೂಡ ಅತಿಹೆಚ್ಚು ಐಫೋನ್ಗಳು ತಯಾರಾಗುತ್ತಿವೆಯಾದರೂ, ಭಾರತದಲ್ಲಿ ಶೇ. 20ರಷ್ಟು ಐಫೋನ್ಗಳು ತಯಾರಾಗುವ ಮಟ್ಟಕ್ಕೆ ಇಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ನೋಯ್ಡಾದಲ್ಲೂ ಫಾಕ್ಸ್ಕಾನ್ ಘಟಕ ಕಾರ್ಯನಿರ್ವಹಣೆ ಆರಂಭಗೊಂಡ ಬಳಿಕ ಭಾರತದಲ್ಲಿ ಐಫೋನ್ ತಯಾರಿಕೆ ಶೇ. 25ಕ್ಕೆ ಏರುವುದರಲ್ಲಿ ಅಚ್ಚರಿ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ