Global Recession: 2023ರ ಆರಂಭದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದ ಐಎಂಎಫ್​ ಮುಖ್ಯಸ್ಥೆ

| Updated By: Srinivas Mata

Updated on: Jul 07, 2022 | 12:46 PM

ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Global Recession: 2023ರ ಆರಂಭದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದ ಐಎಂಎಫ್​ ಮುಖ್ಯಸ್ಥೆ
ಕ್ರಿಸ್ಟಲಿನಾ ಜಾರ್ಜೀವಾ (ಸಂಗ್ರಹ ಚಿತ್ರ)
Follow us on

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮುಖ್ಯಸ್ಥೆ ಬುಧವಾರದಂದು ನೀಡಿರುವ ಹೇಳಿಕೆಯು ಈಗಾಗಲೇ ಇರುವ ಆತಂಕಕ್ಕೆ ಮತ್ತಷ್ಟು ಚಿಂತೆಯನ್ನು ಜತೆ ಮಾಡಿದೆ. ಏಪ್ರಿಲ್​ನಿಂದ ಈಚೆಗೆ ಜಾಗತಿಕ ಆರ್ಥಿಕತೆಯು “ಮಹತ್ತರ ಪ್ರಮಾಣದಲ್ಲಿ ಕತ್ತಲಲ್ಲಿದೆ” ಮತ್ತು ಆದ್ದರಿಂದ ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತದ (Recession) ಸಂಭವನೀಯತೆಯನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. ಐಎಂಎಫ್​ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲಿನಾ ಜಾರ್ಜೀವಾ ರಾಯಿಟರ್ಸ್ ಜತೆ ಮಾತನಾಡಿ, ಮುಂಬರುವ ವಾರಗಳಲ್ಲಿ 2022ರ ಜಾಗತಿಕ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಐಎಂಎಫ್​ನಿಂದ ಮೂರನೇ ಬಾರಿಗೆ ಶೇ 3.6ಕ್ಕೆ ಡೌನ್​ಗ್ರೇಡ್ ಮಾಡಲಿದೆ, ಐಎಂಎಫ್​ ಅರ್ಥಶಾಸ್ತ್ರಜ್ಞರು ಹೊಸ ಅಂಕಿ-ಅಂಶವನ್ನು ಇನ್ನೂ ಅಂತಿಮಗೊಳಿಸುತ್ತಿದ್ದರು ಎಂದು ಹೇಳಿದ್ದಾರೆ.

2022-23ನೇ ಸಾಲಿನ ಅಪ್​ಡೇಟೆಡ್​ ಅಂದಾಜು ಜುಲೈ ತಿಂಗಳಲ್ಲೇ ಐಎಂಎಫ್​ನಿಂದ ಬಿಡುಗಡೆ ಆಗಲಿದೆ. ಇದಕ್ಕೂ ಮುನ್ನ ಏಪ್ರಿಲ್​ನಲ್ಲಿ ಒಂದು ಪೂರ್ಣ ಪಾಯಿಂಟ್ ಕಡಿಮೆಗೊಳಿಸಿ, ಅಂದಾಜು ಮಾಡಲಾಗಿತ್ತು. 2021ರಲ್ಲಿ ಜಾಗತಿಕ ಆರ್ಥಿಕತೆ ಶೇ 6.1ರಷ್ಟು ವಿಸ್ತರಣೆ ಆಗಿತ್ತು. “ಏಪ್ರಿಲ್​ನಲ್ಲಿ ನಾವು ಕೊನೆಯದಾಗಿ ಬಾಹ್ಯ ಅಂದಾಜನ್ನು ಅಪ್​ಡೇಟ್​ ಮಾಡಿದ ನಂತರ ಭಾರೀ ಬದಲಾವಣೆ ಆಗಿದೆ,” ಎಂದು ಸಂದರ್ಶನದಲ್ಲಿ ರಾಯಿಟರ್ಸ್​ಗೆ ಅವರು ತಿಳಿಸಿದ್ದಾರೆ. ವಿಶ್ವದಾದ್ಯಂತ ಹಣದುಬ್ಬರ ವ್ಯಾಪಿಸಿದೆ, ಬಡ್ಡಿ ದರ ಏರಿಕೆ ಆಗಿದೆ, ಚೀನಾದ ಆರ್ಥಿಕ ಬೆಳವಣಿಗೆ ನಿಧಾನಗತಿಯಾಗಿದೆ ಮತ್ತು ರಷ್ಯಾವು ಉಕ್ರೇನ್​ನಲ್ಲಿ ನಡೆಸುತ್ತಿರುವ ಯುದ್ಧದಿಂದ ನಿರ್ಬಂಧಗಳು ಹೆಚ್ಚಾಗಿವೆ.

ಜಾಗತಿಕ ಆರ್ಥಿಕ ಹಿಂಜರಿತದ ಅಪಾಯ ಹೆಚ್ಚಿರುವುದರಿಂದ ಆ ಸಾಧ್ಯತೆಯನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈಚಿನ ಆರ್ಥಿಕ ಡೇಟಾದ ಪ್ರಕಾರ, ಚೀನಾ ಮತ್ತು ರಷ್ಯಾವು ಸೇರಿದಂತೆ ದೊಡ್ಡ ಆರ್ಥಿಕತೆಗಳಲ್ಲಿ ಎರಡನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಕಡಿಮೆಯಾಗಿದೆ. ಆದರೆ 2023ರಲ್ಲಿ ಅಪಾಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದಿದ್ದಾರೆ. 2022ನೇ ಇಸವಿ ಕಷ್ಟ ಆಗಬಹುದು, ಆದರೆ 2023ರಲ್ಲಿ ಅದಿನ್ನೂ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಆಗ ಆರ್ಥಿಕ ಹಿಂಜರಿತದ ಅಪಾಯ ಮತ್ತೂ ಹೆಚ್ಚು ಎಂದು ಅವರು ಹೇಳಿದ್ದಾರೆ.

ಯುಎಸ್ (ಅಮೆರಿಕ) ಟ್ರೆಷರಿ ಯೀಲ್ಡ್​ನಲ್ಲಿನ ಈಚಿನ ಬೆಳವಣಿಗೆಯು ಆರ್ಥಿಕ ಹಿಂಜರಿತವು ಸನಿಹದಲ್ಲಿದೆ ಎಂಬುದಕ್ಕೆ ಸೂಚನೆಯನ್ನು ನೀಡುವಂತಿದೆ. ಜಾರ್ಜೀವಾ ಮಾತನಾಡಿ, ಹಣಕಾಸು ಸನ್ನಿವೇಶವನ್ನು ಮತ್ತಷ್ಟು ಬಿಗಿ ಮಾಡುವುದರಿಂದ ಜಾಗತಿಕ ಆರ್ಥಿಕ ಬಾಹ್ಯ ನೋಟ ಇನ್ನಷ್ಟು ಜಟಿಲ ಆಗುತ್ತದೆ. ಆದರೆ ಏರುತ್ತಿರುವ ಬೆಲೆಗಳನ್ನು ಹತೋಟಿಯಲ್ಲಿ ಇಡುವುದಕ್ಕೆ ಇದು ಬಹಳ ಮುಖ್ಯವಾದದ್ದು ಎಂದಿದ್ದಾರೆ. ಎರಡು ವರ್ಷದ ಹಿಂದೆ ಇದ್ದ ಜಾಗತಿಕ ಆರ್ಥಿಕ ಬಾಹ್ಯ ನೋಟ ಈ ಅವಧಿಯಲ್ಲಿ ಬಹಳ ಬದಲಾವಣೆ ಕಂಡಿದೆ. ದರ ಸ್ಥಿರತೆ ತರುವುದಕ್ಕೆ ಹೆಚ್ಚು ಒತ್ತು ನೀಡುವುದಾದಲ್ಲಿ ಮತ್ತು ಅತ್ತ ತುರ್ತು ಗಮನ ನೀಡಿದರೆ ಆರ್ಥಿಕತೆಯ ನಿಧಾನಗತಿ ಎಂಬ ಬೆಲೆ ತೆರೆಬೇಕಾಗುತ್ತದೆ.

ಆರ್ಥಿಕ ಹಿಂಜರಿತ ಅಂದರೇನು?

ತಾಂತ್ರಿಕವಾಗಿ ಹೇಳಬೇಕು ಅಂದರೆ, ಎರಡು ತ್ರೈಮಾಸಿಕಗಳು ಸತತವಾಗಿ ವಾಸ್ತವ ಜಿಡಿಪಿ (ರಿಯಲ್ ಜಿಡಿಪಿ) ನಕಾರಾತ್ಮಕ ಬೆಳವಣಿಗೆ ಕಾಣುವುದು. ಇದನ್ನು ಮಾಧ್ಯಮಗಳಲ್ಲಿ ಹಾಗೂ ಶೈಕ್ಷಣಿಕವಾಗಿ ಬಳಸಲಾಗುತ್ತದೆ. ನಾಲ್ಕು ಬಗೆಯ ಆರ್ಥಿಕ ಹಿಂಜರಿತಗಳಿವೆ.

ವಿವಿಧ ಬಗೆಯ ಆರ್ಥಿಕ ಹಿಂಜರಿತ

– ಬೂಮ್ ಅಂಡ್ ಬಸ್ಟ್ (ಏರಿಕೆ ಕಂಡು ಸ್ಪೋಟಿಸುವ) ಆರ್ಥಿಕ ಹಿಂಜರಿತ (1991/92ರಲ್ಲಿ ಯು.ಕೆ.ನಲ್ಲಿ ಆದದ್ದು ಇದಕ್ಕೆ ಒಂದು ಉದಾಹರಣೆ)

– ಬ್ಯಾಲೆನ್ಸ್​ ಶೀಟ್ ಆರ್ಥಿಕ ಹಿಂಜರಿತ (ಉದಾಹರಣೆ: 2008- 09ರಲ್ಲಿ ಸಾಲದ ಕೊರತೆ ಆಗಿ ಕಾಣಿಸಿಕೊಂಡ ಮೇಲೆ ಆದದ್ದು)

– ಆರ್ಥಿಕ ಮಹಾ ಕುಸಿತ (ಉದಾಹರಣೆ: 1930ರಲ್ಲಿ ಜಿಡಿಪಿ ಇಳಿಕೆಯಿಂದ ಆದದ್ದು)

– ಪೂರೈಕೆ ಬದಿ ಘಾತ (ಉದಾಹರಣೆ: ಹೆಚ್ಚಿನ ತೈಲ ಬೆಲೆಯಿಂದ 1970ರ ದಶಕದಲ್ಲಿ ಆದದ್ದು)

ಇದನ್ನೂ ಓದಿ: GDP: ಜಿಡಿಪಿ ಅಂದರೇನು ಎಂಬುದರಿಂದ ಮೊದಲುಗೊಂಡು ದೇಶದ ಹಲವು ಆರ್ಥಿಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ