Cooking Oil Price: ಅಗ್ಗವಾಗಲಿದೆ ಅಡುಗೆ ಎಣ್ಣೆ; 1 ವಾರದೊಳಗೆ ಬೆಲೆ ಇಳಿಸಲು ಸರ್ಕಾರ ಸೂಚನೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ, ಏಕರೂಪದ ಬೆಲೆಯನ್ನು ಕಾಯ್ದುಕೊಳ್ಳಲು ಸೂಚಿಸಿದೆ.
ನವದೆಹಲಿ: ಅಡುಗೆ ಎಣ್ಣೆಯ ಬೆಲೆಯನ್ನು 1 ಲೀಟರ್‌ಗೆ 10 ರೂ. ಇಳಿಸಲು ಅಡುಗೆ ಎಣ್ಣೆ (Cooking Oil) ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 1 ವಾರದೊಳಗೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಿದೆ. ತಾಳೆ, ಸೂರ್ಯಕಾಂತಿ, ಸೋಯಾಬಿನ್ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ, ಏಕರೂಪದ ಬೆಲೆಯನ್ನು ಕಾಯ್ದುಕೊಳ್ಳಲು ಸೂಚಿಸಿದೆ.
ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಗಳ ಬೆಲೆಯನ್ನು (MRP) ಲೀಟರ್‌ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಖಾದ್ಯ ತೈಲ ತಯಾರಿಕಾ ಮತ್ತು ಮಾರುಕಟ್ಟೆ ಕಂಪನಿಗಳನ್ನು ಸೂಚನೆ ನೀಡಿದೆ. ಒಂದು ವಾರದೊಳಗೆ ಬೆಲೆ ಬದಲಾವಣೆಯನ್ನು ಜಾರಿಗೆ ತರುವಂತೆ ಕಂಪನಿಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.
ಕಳೆದ ಕೆಲವು ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಗಣನೀಯವಾಗಿ ಇಳಿಕೆಯಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬೇಡಿಕೆಯ ಸುಮಾರು ಶೇ. 56ರಷ್ಟು ಆಮದುಗಳಿಂದ ಪೂರೈಕೆಯಾಗುತ್ತದೆ. ಹಾಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯ ಕುಸಿತವು ಸ್ಥಳೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಏರಿಕೆಯಾಗುತ್ತಲೇ ಇದೆ ಅಡುಗೆ ಎಣ್ಣೆ ದರ! ಪ್ರಮುಖ ಕಾರಣ ಇದೇ ನೋಡಿ
ಕಳೆದ ಒಂದು ವಾರದಲ್ಲಿ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಶೇ.10ರಷ್ಟು ಕಡಿಮೆಯಾಗಿದೆ ಎಂದು ಅವರಿಗೆ ತಿಳಿಸಿದ್ದೇವೆ. ಇದನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು ನಾವು ಕಂಪನಿಗಳಿಗೆ ಸೂಚಿಸಿದ್ದೇವೆ ಎಂದು ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಅದಾನಿ ವಿಲ್ಮಾರ್ ಮತ್ತು ರುಚಿ ಸೋಯಾ ಸೇರಿದಂತೆ ಖಾದ್ಯ ತೈಲಗಳ ಎಲ್ಲಾ ಪ್ರಮುಖ ಉತ್ಪಾದಕರು ಮುಂದಿನ 7ರಿಂದ 10 ದಿನಗಳಲ್ಲಿ ಚಿಲ್ಲರೆ ಬೆಲೆಗಳನ್ನು ಪರಿಷ್ಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದೇಶಾದ್ಯಂತ ಒಂದೇ ಬ್ರಾಂಡ್ ಖಾದ್ಯ ತೈಲಕ್ಕೆ ಎಂಆರ್‌ಪಿಯ ಏಕರೂಪತೆಯನ್ನು ಕಾಯ್ದುಕೊಳ್ಳುವಂತೆ ಕೇಂದ್ರವು ಕಂಪನಿಗಳಿಗೆ ಸೂಚಿಸಿದೆ. ಸದ್ಯಕ್ಕೆ ವಿವಿಧ ವಲಯಗಳಲ್ಲಿ ಮಾರಾಟವಾಗುವ ಅದೇ ಬ್ರಾಂಡ್‌ಗಳ ಎಂಆರ್‌ಪಿಯಲ್ಲಿ ಪ್ರತಿ ಲೀಟರ್‌ಗೆ 3ರಿಂದ 5 ರೂ. ವ್ಯತ್ಯಾಸವಿದೆ. ಈ ಬೆಲೆಯನ್ನು ಏಕೂಪಕ್ಕೆ ತರಲು ಸೂಚಿಸಲಾಗಿದೆ.
ಇದನ್ನೂ ಓದಿ: ದೇಶದ ವಿವಿಧೆಡೆ ಅಡುಗೆ ಎಣ್ಣೆ ದರ 20 ರೂಪಾಯಿಯಷ್ಟು ಇಳಿಕೆ: ಕೇಂದ್ರ ಆಹಾರ ಇಲಾಖೆ ಮಾಹಿತಿ
ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳಾದ ಸಾಸಿವೆ, ಸೂರ್ಯಕಾಂತಿ, ಸೋಯಾಬೀನ್ ಮತ್ತು ತಾಳೆ ಎಣ್ಣೆಯ ಬೆಲೆ ಜೂನ್ 1ರಿಂದ ದೇಶದಲ್ಲಿ ಶೇ. 5ರಿಂದ 11ರಷ್ಟು ಕಡಿಮೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ. ಕೇಂದ್ರ ಸರ್ಕಾರ ಪ್ರತಿ ದಿನವೂ ಖಾದ್ಯ ತೈಲಗಳ ಬೆಲೆಗಳ ಮೇಲೆ ನಿಗಾ ಇಡುತ್ತಿದೆ ಮತ್ತು ದರಗಳ ಮೇಲೆ ನಿಯಂತ್ರಣವನ್ನು ಇರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೇ ತಿಂಗಳಲ್ಲಿ ಪ್ರತಿ ವರ್ಷಕ್ಕೆ 20 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಆಮದಿನ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಸರ್ಕಾರ ರದ್ದುಗೊಳಿಸಿತ್ತು.
Published On - 11:24 am, Thu, 7 July 22