ಬೆಂಗಳೂರು, ಜೂನ್ 16: ಹಲವು ಸಾಧನೆ, ಹೆಸರು, ದಾಖಲೆ, ಮೈಲಿಗಲ್ಲುಗಳಿಗೆ ಹೆಸರುವಾಸಿಯಾದ ಬೆಂಗಳೂರು ನಗರ ಇತ್ತೀಚೆಗೆ ಸ್ಟಾರ್ಟಪ್ ನಗರಿ ಎಂದೂ ಖ್ಯಾತವಾಗಿದೆ. ಅತಿಹೆಚ್ಚು ಭಾರತೀಯ ಸ್ಟಾರ್ಟಪ್ಗಳು ಬೆಂಗಳೂರಿನಲ್ಲಿ ಇವೆ. ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ 2025 ವರದಿ (Global Startup Ecosystem Report 2025) ಪ್ರಕಾರ ಬೆಂಗಳೂರು ಒಂದು ವರ್ಷದಲ್ಲಿ ಜಾಗತಿಕವಾಗಿ ಏಳು ಸ್ಥಾನ ಮೇಲೇರಿ, 14ನೇ ಸ್ಥಾನ ಪಡೆದಿದೆ. ಹಿಂದಿನ ವರ್ಷದ ಇಂಡೆಕ್ಸ್ನಲ್ಲಿ ಅದು 21ನೇ ಸ್ಥಾನದಲ್ಲಿತ್ತು. ಭಾರತೀಯ ನಗರಗಳ ಪೈಕಿ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ನಗರಗಳನ್ನೂ ಹಿಂದಿಕ್ಕಿ ಬೆಂಗಳೂರು ನಂಬರ್ ಒನ್ ಎನಿಸಿದೆ.
ಪ್ಯಾರಿಸ್ನಲ್ಲಿ ನಡೆದ ವಾರ್ಷಿಕ ತಂತ್ರಜ್ಞಾನ ಸಮಾವೇಶದಲ್ಲಿ ಸ್ಟಾರ್ಟಪ್ ಜಿನೋಮ್ (Startup Genome) ಎನ್ನುವ ಕನ್ಸಲ್ಟೆಂಟ್ ಕಂಪನಿಯು ಈ ವರದಿಯನ್ನು ಬಿಡುಗಡೆ ಮಾಡಿದೆ. ವಿವಿಧ ಪ್ರದೇಶಗಳಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಫಂಡಿಂಗ್, ಮಾರುಕಟ್ಟೆ ಲಭ್ಯತೆ, ಪ್ರತಿಭೆ, ಅನುಭವ, ಜ್ಞಾನ, ಎಐ ಅಳವಡಿಕೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಮಿಲಿಯನೇರ್ಗಳ ಸಂಖ್ಯೆ 85,000 ಕ್ಕಿಂತ ಹೆಚ್ಚು; ಜಾಗತಿಕವಾಗಿ ಮೂರೇ ದೇಶಗಳು ಭಾರತಕ್ಕಿಂತ ಮುಂದು
ಬೆಂಗಳೂರಿನ ಗರಿಮೆ ಇಷ್ಟಕ್ಕೆ ಮುಗಿದಿಲ್ಲ. ವಿಶ್ವದ ಐದು ಅಗ್ರಮಾನ್ಯ ಎಐ ನಗರಗಳ ಸಾಲಿನಲ್ಲಿ ಬೆಂಗಳೂರು ಇದೆ. ಅಮೆರಿಕದ ಸಿಲಿಕಾನ್ ವ್ಯಾಲಿ, ನ್ಯೂಯಾರ್ಕ್ ನಗರ ಮತ್ತು ಬ್ರಿಟನ್ ರಾಜಧಾನಿ ಲಂಡನ್ ನಗರಗಳು ಮೊದಲ ಮೂರು ಸ್ಥಾನ ಪಡೆದರೆ ಬೆಂಗಳೂರು ಐದನೆ ಸ್ಥಾನ ಪಡೆದಿದೆ. ಸ್ಟಾರ್ಟಪ್ ಜಿನೋಮ್ ವಿಶ್ವದ ಟಾಪ್-50 ಎಐ ನಗರಗಳ ಪಟ್ಟಿ ಮಾಡಿದ್ದು ಅದರಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ.
ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ ವರದಿ ಪ್ರಕಾರ, ಬೆಂಗಳೂರಿನ ಯಶಸ್ಸು ಹಾಗೆ ಸುಮ್ಮನೆ ಸಿಕ್ಕಿದ್ದಲ್ಲ. ಬಹಳ ವರ್ಷಗಳಿಂದ ಇಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿರುವುದರ ಫಲ ಇದು. 2020ರಿಂದ 2024ರವರೆಗೆ ಬೆಂಗಳೂರಿನಲ್ಲಿ 32 ಯೂನಿಕಾರ್ನ್ ಕಂಪನಿಗಳು ಶುರುವಾಗಿವೆ. ಹಲವು ಕಂಪನಿಗಳು ಜಾಗತಿಕ ಮಟ್ಟಕ್ಕೂ ಬೆಳೆದಿವೆ. 2024ರಲ್ಲಿ ಬೆಂಗಳೂರಿನಲ್ಲಿರುವ ಒಟ್ಟು ಸ್ಟಾರ್ಟಪ್ ಇಕೋಸಿಸ್ಟಂ ಮೌಲ್ಯ 136 ಬಿಲಿಯನ್ ಡಾಲರ್ (11.7 ಲಕ್ಷ ಕೋಟಿ ರೂ) ಮುಟ್ಟಿದೆ.
ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ ಅನ್ನು ಹಿಂದಿಕ್ಕಿದ ಸ್ಯಾಮ್ಸುಂಗ್; ಎಐ ಶಕ್ತ ಪರಿಕರಗಳೇ ಈ ಮುನ್ನಡೆಗೆ ಕಾರಣ
ವೈವಿಧ್ಯಮಯ ಪ್ರತಿಭಾನ್ವಿತ ಮಾನವ ಸಂಪನ್ಮೂಲಗಳ ಲಭ್ಯತೆ, ಸರ್ಕಾರದಿಂದ ಬಂಡವಾಳ ಹೂಡಿಕೆ, ವಿವಿಧ ವಲಯಗಳ ಪ್ರಬಲ ಬೆಳವಣಿಗೆ ಇತ್ಯಾದಿ ಹಲವು ಅಂಶಗಳು ಬೆಂಗಳೂರಿನಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಬಲವಾಗಿ ಬೇರೂರುವಂತೆ ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ