Gold: ಕಳೆದ ಎರಡು ವರ್ಷ ಶೇ. 14ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆದಿರುವ ಚಿನ್ನದ ಬೆಲೆ ಈ ವರ್ಷ ಎಷ್ಟಾಗಬಹುದು?

|

Updated on: Jan 03, 2024 | 3:50 PM

Gold Price Prediction: 2024ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂ ಗಡಿ ದಾಟುತ್ತದೆ ಎಂದು ಆಭರಣ ಮಂಡಳಿ ಮುಖ್ಯಸ್ಥರು ಅಂದಾಜು ಮಾಡಿದ್ದಾರೆ. 2022 ಮತ್ತು 2023ರಲ್ಲಿ ಚಿನ್ನದ ಬೆಲೆ ಶೇ. 14 ಮತ್ತು ಶೇ. 16ರಷ್ಟು ಬೆಳೆದಿತ್ತು. ಹೀಗಾಗಿ, 2024ರಲ್ಲೂ ಅದೇ ವೇಗದಲ್ಲಿ ಬೆಳೆದರೆ ಅಚ್ಚರಿ ಇಲ್ಲ. ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ರಾಜಕೀಯ ಸೂಕ್ಷ್ಮ ವಾತಾವರಣದಿಂದಾಗಿ ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

Gold: ಕಳೆದ ಎರಡು ವರ್ಷ ಶೇ. 14ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆದಿರುವ ಚಿನ್ನದ ಬೆಲೆ ಈ ವರ್ಷ ಎಷ್ಟಾಗಬಹುದು?
ಚಿನ್ನ
Follow us on

ನವದೆಹಲಿ, ಜನವರಿ 3: ಇತ್ತೀಚಿನ ವರ್ಷಗಳಲ್ಲಿ ಚಿನ್ನವು ಬಹಳ ಹೆಚ್ಚಿನ ರಿಟರ್ನ್ ತರುವ ಹೂಡಿಕೆಯಾಗಿ (investment) ಪರಿಣಮಿಸಿದೆ. ಕಳೆದ ಕೆಲ ವರ್ಷಗಳಿಂದ ಚಿನ್ನದ ಬೆಲೆ (gold price) ಬಹಳ ವೇಗವಾಗಿ ಹೆಚ್ಚುತ್ತಿದೆ. 2023ರ ಜನವರಿಯಲ್ಲಿ 55,000 ರೂ ಇದ್ದ 10 ಗ್ರಾಂ ಚಿನ್ನದ ಬೆಲೆ ಈಗ ಬಹುತೇಕ 64,000 ರೂ ಸಮೀಪಕ್ಕೆ ಬಂದಿದೆ. ಶೇ. 16ರಷ್ಟು ಮೌಲ್ಯ ಹೆಚ್ಚಳವಾಗಿದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಚಿನ್ನದ ಬೆಲೆ ಶೇ. 14-15ರಷ್ಟು ಹೆಚ್ಚಿತ್ತು. ಈ ವರ್ಷವೂ ಚಿನ್ನದ ಬೆಲೆ ಏರಿಕೆ ನಾಗಾಲೋಟದಲ್ಲಿ ಸಾಗುವ ಸಾಧ್ಯತೆ ಇದೆ. ಅಖಿಲ ಭಾರತ ಆಭರಣ ಮಂಡಳಿ (ಎಐಜಿಜೆಸಿ) ಮಾಡಿರುವ ಅಂದಾಜು ಪ್ರಕಾರ ಈ ವರ್ಷ ಚಿನ್ನದ ಬೆಲೆ 10 ಗ್ರಾಂ ಚಿನ್ನದ ಬೆಲೆ 70,000 ರೂ ದಾಟಲಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ರಾಜಕೀಯ ಸೂಕ್ಷ್ಮ ವಾತಾವರಣದಿಂದಾಗಿ ಚಿನ್ನದ ಮೇಲಿನ ಹೂಡಿಕೆಗಳು ಹೆಚ್ಚಾಗಲಿವೆ. ಇದರಿಂದಾಗಿ ಸ್ವರ್ಣ ಲೋಹದ ಬೆಲೆ ಈ ವರ್ಷ 70,000 ರೂ ಮೈಲಿಗಲ್ಲು ದಾಟಲಿದೆ ಎಂದು ಜಿಜೆಸಿ ಸಂಘಟನೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?

ಕಳೆದ ಹಬ್ಬದ ಸೀಸನ್ ವೇಳೆಯೂ ತಜ್ಞರು ಚಿನ್ನದ ಬೆಲೆ ಮುಂದಿನ ಹಬ್ಬದ ಋತುವಿನ ವೇಳೆಗೆ (2024ರ ಸೆಪ್ಟೆಂಬರ್) 70,000 ರೂ ಗಡಿ ಮುಟ್ಟಬಹುದು ಎಂದು ಅಂದಾಜಿಸಿದ್ದರು. ಅವರ ಆ ಭವಿಷ್ಯ ನಿಜವಾಗುತ್ತಿರುವಂತಿದೆ.

‘ಹಣದುಬ್ಬರ ವಿರುದ್ಧ ಚಿನ್ನ ರಕ್ಷಾ ಕವಕವಾಗಿ ಮುಂದುವರಿಯಲಿದೆ. ಸರಕು ವಸ್ತುಗಳ ಬೆಲೆ ಏರಿಕೆಯ ಬಿಸಿಯಲ್ಲಿ ಗ್ರಾಹಕರು ಚಿನ್ನದಲ್ಲಿ ತಮ್ಮ ಹಣ ವಿನಿಯೋಗಿಸಬಹುದು. ಜಾಗತಿಕ ಆರ್ಥಿಕ ಅನಿಶ್ಚಿತ ಸ್ಥಿತಿಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್​ಗೆ 2,300 ಡಾಲರ್, ಅಥವಾ 10 ಗ್ರಾಮ್ ಚಿನ್ನಕ್ಕೆ 70,000 ರೂಗೆ ಏರಬಹುದು.

ಇದನ್ನೂ ಓದಿ: RBI: ನಿಮ್ಮ ಬ್ಯಾಂಕ್ ಖಾತೆ ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಣವಾಗಿದೆಯಾ? ಹಣ ಹಿಂಪಡೆಯುವುದು ಹೇಗೆ?

‘ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ರಕ್ಷಣಾತ್ಮಕ ಆಸ್ತಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಅಂತೆಯೇ, ಚಿನ್ನವು ಹಿಂದಿನ ಎಲ್ಲಾ ಭವಿಷ್ಯಗಳನ್ನು ಮೀರಿಸುವ ರೀತಿಯಲ್ಲಿ ಬೆಲೆ ಏರಿಕೆ ಕಾಣಬಹುದು,’ ಎಂದು ಜಿಜೆಸಿ ಸಂಘಟನೆಯ ಛೇರ್ಮನ್ ಸಾಯಮ್ ಮೆಹ್ರಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ