Gold Demand: 6 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಚಿನ್ನದ ದರ; ಇಲ್ಲಿವೆ ಕಾರಣಗಳು

ಚಿನ್ನದ ಬೆಲೆ ಆರು ತಿಂಗಳ ಕನಿಷ್ಠ ಮಟ್ಟದ ಸಮೀಪ ಇದೆ. ಯಾವ ಕಾರಣಕ್ಕೆ ಹೀಗಾಗಿದೆ ಎಂಬುದರ ವಿಶ್ಲೇಷಣೆ ನಿಮ್ಮೆದುರು ಇದೆ.

Gold Demand: 6 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಚಿನ್ನದ ದರ; ಇಲ್ಲಿವೆ ಕಾರಣಗಳು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Sep 20, 2021 | 10:07 PM

“ಕೊರೊನಾ ಪ್ರಕರಣಗಳು ಕಡಿಮೆ ಆಗುತ್ತಿವೆ. ಒಂದು ಹಾಗೂ ಎರಡನೇ ಡೋಸ್ ಲಸಿಕೆ ಪೂರ್ತಿ ಆಗಿದೆ. ವಿವಿಧ ಆರ್ಥಿಕ ಚಟುವಟಿಕೆಗಳು ಶುರುವಾಗಿರುವುದರಿಂದ ಹೂಡಿಕೆಗೆ ಬೇರೆ ಬೇರೆ ಅವಕಾಶಗಳು ತೆರೆದುಕೊಂಡಿವೆ. ಉದಾಹರಣೆಗೆ ಷೇರು ಮಾರ್ಕೆಟ್, ರಿಯಲ್ ಎಸ್ಟೇಟ್ ಹೀಗೆ ಬೇರೆ ಅವಕಾಶಗಳಿವೆ. ಆ ಕಾರಣದಿಂದಲೇ ಚಿನ್ನದ ಬೇಡಿಕೆ ಇಳಿಕೆಯಾಗಿದೆ. ಅದರಿಂದ ಬೆಲೆ ಇಳಿಮುಖವಾಗಿದೆ,” ಎಂದರು ಕರ್ನಾಟಕ ಜ್ಯುವೆಲ್ಲರ್ಸ್ ಅಸೋಸಿಯೇಷನ್​ನ ಅಧ್ಯಕ್ಷರಾದ ಟಿ.ಎ. ಶರವಣ. 22 ಕ್ಯಾರೆಟ್ ಚಿನ್ನದ ದರವು ಗ್ರಾಮ್​ಗೆ 4,300 ರೂಪಾಯಿಗಿಂತ ಸ್ವಲ್ಪ ಹೆಚ್ಚಿತ್ತು. ಇದು ಹತ್ತಿರ ಹತ್ತಿರ ಆರು ತಿಂಗಳಲ್ಲೇ ಕನಿಷ್ಠ ಮಟ್ಟದ ಬೆಲೆ ಆಗಿದೆ. ಈಗಿನ ಸನ್ನಿವೇಶದಲ್ಲಿ ಚಿನ್ನವನ್ನು ಖರೀದಿಸಬಹುದೇ ಅಥವಾ ಇನ್ನೂ ಸ್ವಲ್ಪ ದಿನ ಕಾಯಬೇಕೆ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಅವರನ್ನು ಟಿವಿ9 ಕನ್ನಡ ಡಿಜಿಟಲ್​ನಿಂದ ಮಾತನಾಡಿಸಲಾಯಿತು.

TA Sharavana

ಕರ್ನಾಟಕ ಜ್ಯುವೆಲ್ಲರ್ಸ್ ಅಧ್ಯಕ್ಷ ಟಿ.ಎ. ಶರವಣ

ಇನ್ನೂ ಮುಂದುವರಿದು ಮಾತನಾಡಿದ ಶರವಣ, ಕೊರೊನಾ ಪ್ರಮಾಣ ಕಡಿಮೆ ಆಗಿ, ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಸಡಿಲಿಕೆ ಆಗಿವೆ. ಷೇರು ಮಾರುಕಟ್ಟೆ ಮೇಲೇರಿದಾಗ ಚಿನಿವಾರ ಪೇಟೆ ಇಳಿಯುವುದು ಸಹಜ ವಿದ್ಯಮಾನ. ಇನ್ನು ಕಳೆದ ಆಗಸ್ಟ್​ನಲ್ಲಿ ಏರಿಕೆ ಆಗಿದ್ದ ಚಿನ್ನದ ದರ ಕೂಡ ಸಾಮಾನ್ಯ ಬಗೆಯದ್ದಾಗಿರಲಿಲ್ಲ. ಏಕಾಏಕಿ ಉಳಿದೆಲ್ಲ ಆಯ್ಕೆಗಳು ಮುಚ್ಚಿಹೋದವು ಅಂತಾದಾಗ ಚಿನ್ನದ ಖರೀದಿ ಕಡೆಗೆ ಎಲ್ಲರೂ ತಿರುಗಿದ್ದರು. ಕಳೆದ ವರ್ಷ ಚಿನ್ನ ಬಹಳ ಎತ್ತರದಲ್ಲಿತ್ತು. ಅಲ್ಲಿಂದ ಕೆಳಗೆ ಇಳಿಯಬಹುದು ಎಂಬುದು ಗೊತ್ತಿದ್ದ ವಿಚಾರವೇ. ಆದರೆ ಈಗ ಷೇರು ಮಾರ್ಕೆಟ್ ಬಹಳ ಚೆನ್ನಾಗಿದೆ. ರಿಯಲ್ ಎಸ್ಟೇಟ್ ಚೇತರಿಸಿಕೊಂಡಿದೆ. ಈ ಕಾರಣಕ್ಕೆ ಸಹಜವಾಗಿಯೇ ಚಿನ್ನದ ಬೇಡಿಕೆ ಕುಸಿದಿದೆ. ಒಂದು ವೇಳೆ ಕೊರೊನಾ ಮೂರನೇ ಅಲೆ ಪ್ರಭಾವ ಹೆಚ್ಚಾದಲ್ಲಿ ಇಲ್ಲಿಂದ ಆಚೆಗೆ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣಬಹುದು ಎನ್ನುತ್ತಾರೆ.

Dinesh Rao

ಅನ್ನಪೂರ್ಣಾ ಜ್ಯುವೆಲ್ಲರ್ಸ್ ದಿನೇಶ್ ರಾವ್

ಗ್ರಾಹಕರಿಂದ ಬೇಡಿಕೆ ಕೂಡ ಕಡಿಮೆ ಆಗಿದೆ. ಗಣಪತಿ ಹಬ್ಬದ ತನಕ ಬೇಡಿಕೆ ಇತ್ತು. ಆದರೆ ಈಗ ಇಳಿಕೆ ಆಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಇದ್ದ ಚಿನ್ನದ ಬೆಲೆಗೆ ಹೋಲಿಸಿದರೆ ಈ ಬಾರಿ ಗ್ರಾಮ್​ಗೆ 1000 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಲೆ ಕಡಿಮೆ ಆಗಬಹುದು ಎಂಬುದು ನಿರೀಕ್ಷೆ ಇತ್ತು. ಆದರೆ 4,500 ರೂಪಾಯಿಗಿಂತ ಕೆಳಗೆ ಬರಬಹುದು ಎಂಬ ಅಂದಾಜಿರಲಿಲ್ಲ. ಅದಕ್ಕಿಂತ ಬೆಲೆ ಕಡಿಮೆ ಆಗಿದೆ. ಇಲ್ಲಿಂದ ಹೆಚ್ಚು ಬೆಲೆ ಕಡಿಮೆ ಆಗಬಹುದು ಅನ್ನಿಸುವುದಿಲ್ಲ. ಒಂದು ವೇಳೆ ಚಿನ್ನದ ಖರೀದಿ ಮಾಡಬೇಕು ಅಂತಿರುವವರು ಈಗ ಕೊಳ್ಳಬಹುದು. ಇಲ್ಲಿಂದ ನಂತರ ಬೆಲೆ ಮೇಲಕ್ಕೆ ಹೋಗಬಹುದು. ಈಗ ಇಳಿಕೆ ಆಗಿರುವುದಕ್ಕಂತೂ ಅತಿ ಮುಖ್ಯವಾದ ಕಾರಣ ಏನೆಂದರೆ ಸೆನ್ಸೆಕ್ಸ್​ ಗರಿಷ್ಠ ಮಟ್ಟದಲ್ಲಿರುವುದು. ದೀಪಾವಳಿ ಹೊತ್ತಿಗೆ ಮತ್ತೆ ಬೇಡಿಕೆ ಕುದುರಬಹುದು ಎಂಬ ಅಭಿಪ್ರಾಯ ತೀರ್ಥಹಳ್ಳಿಯ ಅನ್ನಪೂರ್ಣಾ ಜ್ಯುವೆಲ್ಲರ್ಸ್​ನ ದಿನೇಶ್​ ರಾವ್ ಅವರದು.

ಚಿನ್ನದ ಬೆಲೆಯನ್ನು ನಿರ್ಧರಿಸುವ ಅಂಶಗಳು ಹಲವಾರಿವೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳು ತೀರ್ಮಾನ ಮಾಡುತ್ತವೆ. ಅಮೆರಿಕದ ಕೇಂದ್ರ ಬ್ಯಾಂಕ್​ ಹಣಕಾಸು ನೀತಿ, ಚೀನಾದ ಭೌಗೋಳಿಕ ರಾಜಕೀಯ ಪಲ್ಲಟಗಳು ಇತ್ಯಾದಿಗಳು ಇದರಲ್ಲಿ ಸೇರಿಕೊಂಡಿವೆ. ಆದರೆ ಈ ಅಂಶಗಳು ಹೂಡಿಕೆದಾರರ ದೃಷ್ಟಿಯಿಂದ ಹೇಳಬಹುದಾದದ್ದು. ಆದರೆ ಭಾರತದಂಥ ಬಳಕೆದಾರರ ದೇಶದಲ್ಲಿ ಖರೀದಿಯನ್ನು ಹಾಗೂ ಬೇಡಿಕೆಯನ್ನು ತೀರ್ಮಾನಿಸುವ ಅಂಶಗಳು ಬೇರೆ ಇರುತ್ತವೆ. ಉತ್ತಮ ಮಳೆಯಾಗಿ, ಕೃಷಿ ವಲಯ ತುಂಬ ಚೆನ್ನಾಗಿ ಆದಲ್ಲಿ ಹಲವು ವಲಯಕ್ಕೆ ಅನುಕೂಲ ಆಗಲಿದೆ. ಅದರ ಜತೆಗೆ ಚಿನ್ನಕ್ಕೂ ಬೇಡಿಕೆ ಕುದುರುತ್ತದೆ.

ಇದನ್ನೂ ಓದಿ: Gold Price Today: ಇಂದು ಸಹ ಸ್ಥಿರತೆಯಲ್ಲಿದೆ ಚಿನ್ನದ ದರ; ಬೆಳ್ಳಿ ಬೆಲೆಯಲ್ಲಿಯೂ ಯಾವುದೇ ಬದಲಾವಣೆಗಳಿಲ್ಲ

(Gold Rate Nearly 6 Months Low What Jewelers Tell About Future Trends IS It A Right Time Buy)

Published On - 10:00 pm, Mon, 20 September 21