ಮುಂಬೈ: ಭಾರತವೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ (Layoffs) ಬಗ್ಗೆಯೇ ಚರ್ಚೆಯಾಗುತ್ತಿರುವ ಮಧ್ಯೆ 24ನೇ ಹಣಕಾಸು ವರ್ಷದಲ್ಲಿ 1.25 ಲಕ್ಷ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾಫ್ಟ್ವೇರ್ ಕಂಪನಿ ಟಿಸಿಎಸ್ (TCS) ತಿಳಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿತ್ತು. ಅಕ್ಟೋಬರ್ – ಡಿಸೆಂಬರ್ ಅವಧಿಯಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆಯಲ್ಲಿ 2,197ರಷ್ಟು ಇಳಿಕೆಯಾಗಿದ್ದು, 6.13 ಲಕ್ಷ ಆಗಿದೆ. ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿರುವುದರಿಂದ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ. ಆದಾಗ್ಯೂ, ಕಳೆದ 18 ತಿಂಗಳ ಅವಧಿಯಲ್ಲಿ ಹೆಚ್ಚು ನೇಮಕಾತಿ ಮಾಡಿಕೊಂಡಿದ್ದರಿಂದ ಈಗ ಉದ್ಯೋಗಿಗಳ ಸಂಖ್ಯೆ ಇಳಿಕೆಯಾದಂತೆ ಕಾಣಿಸುತ್ತಿದೆಯೇ ವಿನಹ ಬೇಡಿಕೆ ವಾತಾವರಣದಿಂದಾಗಿ ಅಲ್ಲ ಎಂದು ಕಂಪನಿ ತಿಳಿಸಿದೆ.
‘ಒಟ್ಟಾರೆಯಾಗಿ ನಮ್ಮ ನೇಮಕಾತಿ ಟ್ರೆಂಡ್ ಗಮನಿಸಿದರೆ, ನಾವು ಹಿಂದಿನ ಅದೇ ಮಟ್ಟದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ವರ್ಷ ಅಂದಾಜು 1,25,000ದಿಂದ 1,50,000 ವರೆಗೆ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಮಧ್ಯಮ ಅವಧಿ ಮತ್ತು ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕ್ರಿಯೆ ನಡೆಯಲಿದೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ.
ಇದನ್ನೂ ಓದಿ: Amazon Employees Layoff: ಈ ತಿಂಗಳು ಮತ್ತೆ ಅಮೆಜಾನ್ ಉದ್ಯೋಗಿಗಳ ವಜಾ, ಪ್ರಭಾವಿ ಹುದ್ದೆಯಲ್ಲಿರುವವರಿಗೆ ಸಂಕಷ್ಟ
‘ನಮ್ಮ ನಿಲುವು ಸಕಾರಾತ್ಮಕವಾಗಿದೆ. ನಾವು ಜನರನ್ನು ತಳ್ಳುತ್ತಿಲ್ಲ. ನಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಪ್ರಸ್ತುತವಾಗಿದ್ದೇವೆ. ಪ್ರತಿಭಾ ಸಾಮರ್ಥ್ಯದ ದೃಷ್ಟಿಕೋನದಿಂದ ಹೂಡಿಕೆ ಮಾಡಿದ್ದೇವೆ. ಕಳೆದ ವರ್ಷ ಹೆಚ್ಚು ಹೂಡಿಕೆ ಮಾಡಿದ್ದೆವು. ಅದರ ಪ್ರಯೋಜನ ಈ ತ್ರೈಮಾಸಿಕದಲ್ಲಿ ಗೊತ್ತಾಗಿದೆ’ ಎಂದು ಅವರು ತಿಳಿಸಿದ್ದಾರೆ.
22ನೇ ಹಣಕಾಸು ವರ್ಷದಲ್ಲಿ 55,000 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತಲ್ಲದೆ, ಒಟ್ಟಾರೆಯಾಗಿ ಸಿಬ್ಬಂದಿ ವರ್ಗಕ್ಕೆ 1.03 ಲಕ್ಷ ಮಂದಿಯನ್ನು ಸೇರಿಸಿಕೊಳ್ಳಲಾಗಿತ್ತು. 23ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ ವೇಳೆಗೆ ಸಿಬ್ಬಂದಿ ಸಂಖ್ಯೆಯಲ್ಲಿ 2,197 ಕುಸಿತವಾಗಿತ್ತು ಎಂದು ಕಂಪನಿ ತಿಳಿಸಿದೆ.
ಡಿಸೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಹೊಸ ನೇಮಕಾತಿಗಿಂತಲೂ ಹೆಚ್ಚಾಗಿದೆ. 23ನೇ ಹಣಕಾಸು ವರ್ಷದಲ್ಲಿ ಈವರೆಗೆ 42,000 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಅಂದರೆ ಮೂರನೇ ತ್ರೈಮಾಸಿಕದಲ್ಲಿ ಕೇವಲ 7,000 ಮಂದಿಯನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ವರ್ಷದ ಮೊದಲಾರ್ಧದಲ್ಲಿ 35,000 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕದ್ ತಿಳಿಸಿದ್ದಾರೆ.