Twitter Case: ಟ್ವಿಟರ್ ಪ್ರಕರಣ ಮತ್ತೆ ಮುಂದೂಡಿಕೆಗೆ ಮನವಿ; ಕೇಂದ್ರದ ವಿರುದ್ಧ ಕರ್ನಾಟಕ ಹೈಕೋರ್ಟ್ ಅಸಮಾಧಾನ
ಕೇಂದ್ರ ಸರ್ಕಾರದ ಪರ ವಕೀಲರು ಪ್ರಕರಣದ ವಿಚಾರಣೆಯನ್ನು ಜನವರಿ 27 ಅಥವಾ ಫೆಬ್ರವರಿ 3ಕ್ಕೆ ಮುಂದೂಡುವಂತೆ ಕೇಳಿಕೊಂಡದ್ದಕ್ಕೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಒಂದು ವಾರಕ್ಕಿಂತ ಹೆಚ್ಚಿನ ಕಾಲಾವಕಾಶವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗದು ಎಂದಿರುವ ನ್ಯಾಯಮೂರ್ತಿಗಳು ಜನವರಿ 18ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.
ಬೆಂಗಳೂರು: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮತ್ತೆ ಮುಂದೂಡುವಂತೆ ಕೇಂದ್ರ ಸರ್ಕಾರ (Union government) ಮಾಡಿರುವ ಮನವಿಗೆ ಕರ್ನಾಟಕ ಹೈಕೋರ್ಟ್ (Karnataka high court) ಅಸಮಾಧಾನ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ಇದೇ 18ಕ್ಕೆ ನಿಗದಿ ಮಾಡಿದೆ. 39 ಖಾತೆಗಳನ್ನು ಬ್ಲಾಕ್ ಮಾಡುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಟ್ವಿಟರ್, ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ, ನಾವು ಸರ್ಕಾರ ಹೇಳಿದಂತೆಯೇ ಕೇಳಿಕೊಂಡಿರಲು ಸಾಧ್ಯವಿಲ್ಲ. ಜನರು ಏನೆಂದು ಯೋಚಿಸಬಹುದು? ನಾವು ನೀವು ಹೇಳಿದಂತೆ ಕೇಳಿಕೊಂಡಿರಲು ಸಾಧ್ಯವಿಲ್ಲ. ಎಷ್ಟು ಬಾರಿ ನೀವು ಮುಂದೂಡುವಂತೆ ಕೇಳಿಕೊಂಡಿದ್ದೀರಿ? ಆದೇಶದ ಪ್ರತಿಯನ್ನು ಒಮ್ಮೆ ನೋಡಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಪರ ವಕೀಲರು ಪ್ರಕರಣದ ವಿಚಾರಣೆಯನ್ನು ಜನವರಿ 27 ಅಥವಾ ಫೆಬ್ರವರಿ 3ಕ್ಕೆ ಮುಂದೂಡುವಂತೆ ಕೇಳಿಕೊಂಡದ್ದಕ್ಕೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಒಂದು ವಾರಕ್ಕಿಂತ ಹೆಚ್ಚಿನ ಕಾಲಾವಕಾಶವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗದು ಎಂದಿರುವ ನ್ಯಾಯಮೂರ್ತಿಗಳು ಜನವರಿ 18ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.
ಇದನ್ನೂ ಓದಿ: Twitter Case: ಟ್ವಿಟರ್ಗೆ ಭಾರತದ ಕಾನೂನು ಉಲ್ಲಂಘಿಸುವ ಚಾಳಿಯಿದೆ: ಕರ್ನಾಟಕ ಹೈಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಅಫಿಡವಿಟ್
ಈ ಹಿಂದೆ 2022ರ ಅಕ್ಟೋಬರ್ 27ರಂದು ವಿಚಾರಣೆ ನಡೆದಿತ್ತು. ಖಾತೆಗಳನ್ನು ಬ್ಲಾಕ್ ಮಾಡಿದ್ದಕ್ಕೆ ಅಧಿಕಾರಿಗಳು ಸೂಕ್ತ ಕಾರಣ ನೀಡಬೇಕು. ಇಲ್ಲವಾದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದಂತೆ ಎಂದು ಟ್ವಿಟರ್ ಪರ ವಕೀಲರು ವಾದಿಸಿದ್ದರು. ಬಳಿಕ ವಾದ ಮಂಡನೆಗೆ ಕಾಲಾವಕಾಶ ಬೇಕೆಂದು ಸರ್ಕಾರದ ಪರ ವಕೀಲರು ಕೋರಿದ್ದರು. ಹೀಗಾಗಿ ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ವಿಚಾರಣೆ ನಡೆದಿರಲಿಲ್ಲ. ನಂತರ ಡಿಸೆಂಬರ್ 12ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗಿತ್ತು. ಅಂದು ಮತ್ತೆ ಮುಂದೂಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಹೀಗಾಗಿ ಜನವರಿ 9ಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು. ಇದೀಗ ಮತ್ತೆ ವಿಚಾರಣೆ ಮುಂದೂಡಿಕೆಗೆ ಕೇಂದ್ರ ಮನವಿ ಮಾಡಿದೆ. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಟ್ವಿಟರ್ ಜೂನ್ 26ರಂದು ಕರ್ನಾಟಕ ಹೈಕೋರ್ಟ್ ಮೊರೆಹೋಗಿತ್ತು.