BBMP: 25 ತಿಂಗಳಿಂದ 2,700 ಕೋಟಿ ಬಾಕಿ; ಬಿಲ್ ಇತ್ಯರ್ಥಪಡಿಸದಿದ್ದರೆ ಕೆಲಸ ಸ್ಥಗಿತಗೊಳಿಸುವುದಾಗಿ ಬಿಬಿಎಂಪಿಗೆ ಗುತ್ತಿಗೆದಾರರ ಎಚ್ಚರಿಕೆ
ಅಧಿಕಾರಿಗಳು ನಮ್ಮ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ. ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಗುತ್ತಿಗೆದಾರರು ಹೇಳಿದರು.
ಬೆಂಗಳೂರು: ವಿವಿಧ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ₹ 2,700 ಕೋಟಿ ಬಿಲ್ಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಬಿಬಿಎಂಪಿ ಕಚೇರಿ ಎದುರು ತಮಟೆ ಬಾರಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಕಳೆದ 2 ವರ್ಷಗಳಿಂದ ಬಿಲ್ಗಳು ಬಾಕಿ ಉಳಿದಿದ್ದು, ಪಾವತಿ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿದೆ. ಫೆಬ್ರುವರಿ 1ರ ಒಳಗೆ ಬಾಕಿ ಪಾವತಿಯಾಗದಿದ್ದರೆ ಕೆಲಸಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗುತ್ತಿಗೆದಾರರ ಸಂಕಷ್ಟ ವಿವರಿಸಿದ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್, ‘ಬಾಕಿ ಹಣ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಸಾಲದ ಬಲೆಯಲ್ಲಿ ಸಿಲುಕುವಂತೆ ಆಗಿದೆ. ಅವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ನಮ್ಮ ಕಷ್ಟವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಹೇಳಿದರು.
ನಾವು ಮುಷ್ಕರ ಮಾಡಿದರೆ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ ಎನ್ನುವುದು ನಮಗೆ ಗೊತ್ತಿದೆ. ಆದರೆ ನಮಗೂ ಕುಟುಂಬಗಳಿವೆ. ನಾವು ಅವರ ಕಡೆಗೂ ಗಮನ ಕೊಡಬೇಕಿದೆ. ಬಿಬಿಎಂಪಿ ನಮ್ಮ ಬಾಕಿ ಬಿಲ್ಗಳನ್ನು ಒಂದು ಅಥವಾ ಎರಡು ಕಂತುಗಳಲ್ಲಿ ಇತ್ಯರ್ಥಪಡಿಸಿದರೆ ನಾವು ಉಳಿಯಲು ಸಾಧ್ಯವಾಗುತ್ತದೆ ಎಂದು ಬಿಬಿಎಂಪಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಗುತ್ತಿಗೆದಾರರು ಹೇಳಿದರು.
ಗುತ್ತಿಗೆದಾರರ ಬೇಡಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ‘ನವೆಂಬರ್ 2020ರವರೆಗಿನ ಬಿಲ್ಗಳನ್ನು ಇತ್ಯರ್ಥಪಡಿಸಲಾಗಿದೆ. ಆಸ್ತಿ ತೆರಿಗೆ, ಕಂದಾಯ ವಸೂಲಿ ಸೇರಿದಂತೆ ಆದಾಯ ಕ್ರೋಡೀಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಗುತ್ತಿಗೆದಾರರ ಬಾಕಿ ಮೊತ್ತವನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು. ಗುತ್ತಿಗೆದಾರರು ಆತುರದ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಮನವಿ ಮಾಡಿದರು.
‘ಗುತ್ತಿಗೆದಾರರಿಗೆ ಬಿಲ್ ಇತ್ಯರ್ಥಪಡಿಸಲು 2 ವರ್ಷಗಳ ಕಾಲಾವಕಾಶ ಇದೆ. ಅದರಂತೆ ಡಿಸೆಂಬರ್ 2020ರವರೆಗಿನ ಬಿಲ್ಗಳನ್ನು ಇತ್ಯರ್ಥಪಡಿಸಬೇಕಾಗಿದೆ. ಪ್ರಸ್ತುತ ₹ 150 ಕೋಟಿಗಳಷ್ಟು ಬಿಲ್ ಬಾಕಿಯಿದೆ. ಬಿಬಿಎಂಪಿ ಶಿಷ್ಟಾಚಾರಗಳ ಪ್ರಕಾರ ನಿರ್ವಹಣೆಗೆ ಸಂಬಂಧಿಸಿದ ಬಿಲ್ಗಳನ್ನು ಮೊದಲು ಇತ್ಯರ್ಥಪಡಿಸಲಾಗುವುದು. ನಂತರ ಕಾರ್ಮಿಕರ ಬಿಲ್ಗಳನ್ನು ಪಾವತಿಸಲಾಗುವುದು’ ಎಂಬ ತುಷಾರ್ ಗಿರಿನಾಥ್ ಹೇಳಿಕೆಯನ್ನು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
‘ರಾಜ್ಯ ಸರ್ಕಾರದಿಂದ ಬಿಬಿಎಂಪಿ ₹ 600 ಕೋಟಿ ಅನುದಾನಕ್ಕೆ ಮನವಿ ಮಾಡಿದೆ. ಮುಂದಿನ ಬಜೆಟ್ ಸಂದರ್ಭದಲ್ಲಿ ಈ ಮೊತ್ತ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ’ ಎಂದು ಬಿಬಿಎಂಪಿಯ ಆಯುಕ್ತರಾದ (ಕಂದಾಯ) ಜಯರಾಮ್ ರಾಯ್ಪುರ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Bengaluru: ಆರೇಳು ವರ್ಷದಲ್ಲಿ ಗುಂಡಿ ಮುಚ್ಚಲು ಬಿಬಿಎಂಪಿ ಖರ್ಚು ಮಾಡಿದ್ದು 25 ಸಾವಿರ ಕೋಟಿ, ಆದರೂ ರಸ್ತೆಗಳು ಗುಂಡಿಮಯ
ಮತ್ತಷ್ಟು ಬೆಂಗಳೂರು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Tue, 10 January 23