Google: ಸಿಸಿಐ ದಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗೂಗಲ್

ಗೂಗಲ್ ಕಂಪನಿಯು ಮೇಲ್ಮನವಿ ಸಲ್ಲಿಸಿರುವುದು ಸುಪ್ರೀಂ ಕೋರ್ಟ್​​ನ ದಾಖಲೆಗಳಿಂದ ತಿಳಿದುಬಂದಿದೆ. ಆದರೆ, ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

Google: ಸಿಸಿಐ ದಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗೂಗಲ್
ಗೂಗಲ್
Updated By: Ganapathi Sharma

Updated on: Jan 10, 2023 | 10:02 AM

ನವದೆಹಲಿ: ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (CCI) ತೀರ್ಪನ್ನು ಪ್ರಶ್ನಿಸಿ ಗೂಗಲ್ (Google) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದಕ್ಕೂ ಮುನ್ನ ಗೂಗಲ್, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ (NCLAT) ಅರ್ಜಿ ಸಲ್ಲಿಸಿತ್ತು. ಆದರೆ, ಎನ್​​ಸಿಎಲ್​​ಎಟಿ ದಂಡದ ಶೇಕಡಾ 10ರಷ್ಟು ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿತ್ತು. ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್​ಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಲ್ಫಾಬೆಟ್ ಇಂಕ್‌ನ ಗೂಗಲ್‌ಗೆ ಸ್ಪರ್ಧಾ ಆಯೋಗವು 2022ರ ಅಕ್ಟೋಬರ್​ನಲ್ಲಿ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ವಿಧಿಸಿದ ಕ್ರಮಕ್ಕೆ ಗೂಗಲ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಭಾರತದ ಗ್ರಾಹಕರು ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಹೇಳಿತ್ತು.

ಗೂಗಲ್ ಕಂಪನಿಯು ಮೇಲ್ಮನವಿ ಸಲ್ಲಿಸಿರುವುದು ಸುಪ್ರೀಂ ಕೋರ್ಟ್​​ನ ದಾಖಲೆಗಳಿಂದ ತಿಳಿದುಬಂದಿದೆ. ಆದರೆ, ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಸಿಸಿಐ ತೀರ್ಪಿನಿಂದ ಬಚಾವಾಗಲು ಕೊನೆಯ ಪ್ರಯತ್ನವಾಗಿ ಗೂಗಲ್ ಕಾನೂನು ಸಮರದ ಮೊರೆ ಹೋಗಲಿದೆ ಎಂಬುದಾಗಿ ಇತ್ತೀಚೆಗೆ ವರದಿಯಾಗಿತ್ತು.

ಇದನ್ನೂ ಓದಿ: Google: ಗೂಗಲ್​ಗೆ ಮತ್ತೆ ಹಿನ್ನಡೆ; ಶೇ 10 ದಂಡ ಪಾವತಿಸಲು ಎನ್​ಸಿಎಲ್​ಎಟಿ ಸೂಚನೆ

ಗೂಗಲ್​ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡರೆ ಸಿಸಿಐ ಆದೇಶಕ್ಕೆ ಸದ್ಯಕ್ಕೆ ತಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರವಾಗಿ ಗೂಗಲ್​ ವಕ್ತಾರರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗೂಗಲ್ ಕಂಪನಿ ವಿರುದ್ಧ ಭಾರತವೂ ಸೇರಿದಂತೆ ವಿಶ್ವದ ಕೆಲವು ದೇಶಗಳಲ್ಲಿ ವಿವಿಧ ಪ್ರಕರಣಗಳಿವೆ. ಗೂಗಲ್ ಸ್ವಾಮ್ಯದ ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯದ ಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಈ ಪ್ರಕರಣದ ಪ್ರಮುಖ ಅಂಶವಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ