ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್ (Google) ಉದ್ಯೋಗ ಕಡಿತವು (Layoff) ಹೊಸಬರ ಮೇಲಷ್ಟೇ ಪರಿಣಾಮ ಬೀರಿಲ್ಲ. ಉನ್ನತ ಕಾರ್ಯನಿರ್ವಾಹಕರ ಕೆಲಸಕ್ಕೂ ಕುತ್ತು ತಂದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಗೂಗಲ್ ಜಾಗತಿಕವಾಗಿ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಲ್ಲಿ ವಾರ್ಷಿ 8ರಿಂದ 10 ಕೋಟಿ ರೂ. ವೇತನ ಪಡೆಯುತ್ತಿದ್ದವರೂ ಸೇರಿದ್ದಾರೆ ಎನ್ನಲಾಗಿದೆ. ಸಿಇಒ ಸುಂದರ್ ಪಿಚೈ ಅವರು ಕೆಲವೊಂದು ಉನ್ನತ ಹುದ್ದೆಗಳನ್ನು ಕಡಿತಗೊಳಿಸಿದ್ದು, ವಾರ್ಷಿಕ 5 ಲಕ್ಷ ಡಾಲರ್ನಿಂದ 10 ಲಕ್ಷ ಡಾಲರ್ ವರೆಗೆ ವ್ಯವಸ್ಥಾಪಕ ಸ್ಥಾನಗಳಲ್ಲಿದ್ದ ಉದ್ಯೋಗಿಗಳ ಕೆಲಸಕ್ಕೂ ಕುತ್ತುಂಟಾಗಿದೆ ಎಂದು ಮಾಧ್ಯಮವೊಂದರ ವರದಿ ತಿಳಿಸಿದೆ. ಇತ್ತೀಚಿನ ಉದ್ಯೋಗ ಕಡಿತವು ಗೂಗಲ್ ಕ್ಲೌಡ್, ಕ್ರೋಮ್, ಆ್ಯಂಡ್ರಾಯ್ಡ್ ವರೆಗೆ ಪರಿಣಾಮ ಬೀರಿದೆ.
ಕಂಪನಿಯ ಎಲ್ಲ ವಿಭಾಗಗಳ ಪರಾಮರ್ಶೆ ನಡೆಸಿದ್ದೇವೆ. ನಮ್ಮ ಅತ್ಯುನ್ನತ ಆದ್ಯತೆ ಕಂಪನಿಗೆ ಸಂಬಂಧಿಸಿದ್ದಾಗಿದೆ. ಈ ಪರಾಮರ್ಶೆಯ ಭಾಗವಾಗಿ ಕೆಲವು ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಅಲ್ಫಾಬೆಟ್, ಪ್ರಾಡಕ್ಟ್, ಫಂಕ್ಷನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ಕಡಿತ ಮಾಡಿದ್ದೇವೆ ಎಂದು ಸುಂದರ್ ಪಿಚೈ ಉದ್ಯೋಗಿಗಳಿಗೆ ಕಳುಹಿಸಿದ್ದ ಇ-ಮೇಲ್ ಸಂದೇಶದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: Alphabet Layoff: ಗೂಗಲ್‌ನಿಂದ ವಜಾಗೊಂಡ ಉದ್ಯೋಗಿಗಳಿಗೆ ಏನೇನು ಸೌಲಭ್ಯ ಸಿಗಲಿದೆ?; ಇಲ್ಲಿದೆ ಸುಂದರ್ ಪಿಚೈ ಸಂದೇಶದ ಪೂರ್ಣಪಾಠ
ಕಾರ್ಯಕ್ಷಮತೆ ಪರಾಮರ್ಶೆಯ ಸಂದರ್ಭದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ಕಳಪೆ ಕಾರ್ಯನಿರ್ವಹಣೆ ಪಟ್ಟಿಗೆ ಸೇರಿಸುವಂತೆ ಮ್ಯಾನೇಜರ್ಗಳಿಗೆ ಗೂಗಲ್ ಸೂಚಿಸಿತ್ತು. ಉದ್ಯೋಗ ಕಡಿತಕ್ಕೆ ಉದ್ಯೋಗಿಗಳನ್ನು ಆಯ್ಕೆ ಮಾಡುವುದನ್ನು ಸುಲಭಗೊಳಿಸುವುದಕ್ಕಾಗಿ ಕಂಪನಿಯು ಈ ಸೂಚನೆ ನೀಡಿತ್ತು ಎಂದು ವರದಿ ಉಲ್ಲೇಖಿಸಿದೆ. ಹೊಸ ಪರಾಮರ್ಶೆ ನೀತಿ ಜಾರಿಗೊಳಿಸಿರುವುದನ್ನು ಗೂಗಲ್ ಉದ್ಯೋಗಿಯೊಬ್ಬರು ಖಚಿತಪಡಿಸಿದ್ದಾರೆ.
ಗೂಗಲ್‌ನಿಂದ 12,000 ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಕಳೆದ ವಾರ ಅಲ್ಫಾಬೆಟ್ ಇಂಕ್ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ, ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳನ್ನು ಉದ್ದೇಶಿಸಿ ಇ-ಮೇಲ್ ಸಂದೇಶ ಕಳುಹಿಸಿದ್ದರು. ಕಂಪನಿಯ ಎಲ್ಲ ತಂಡಗಳ ಮೇಲೆ ಉದ್ಯೋಗ ಕಡಿತದ ಪ್ರಭಾವ ಆಗಲಿದೆ ಎಂದೂ ಅಮೆರಿಕದ ಸಿಬ್ಬಂದಿಯ ಮೇಲೆ ತಕ್ಷಣವೇ ಪರಿಣಾಮ ಬೀರಲಿದೆ ಎಂದೂ ಅವರು ಇ-ಮೇಲ್ನಲ್ಲಿ ಉಲ್ಲೇಖಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Mon, 23 January 23