ಗೂಗಲ್ನಲ್ಲಿ ಇಡೀ ಪೈತಾನ್ ತಂಡವೇ ಲೇ ಆಫ್; ಅಮೆರಿಕ ಬದಲು ಜರ್ಮನಿಯಲ್ಲಿ ಹೊಸ ತಂಡ ಸ್ಥಾಪನೆ ಸಾಧ್ಯತೆ
Google Lays Off its entire Python Team in US: ಗೂಗಲ್ ಸಂಸ್ಥೆ ಅಮೆರಿಕದಲ್ಲಿರುವ ಇಡೀ ಪೈತಾನ್ ತಂಡವನ್ನೇ ವಜಾಗೊಳಿಸಿದೆ. ಆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಎಂಜಿನಿಯರುಗಳೂ ಕೆಲಸ ಕಳೆದುಕೊಂಡಿದ್ದಾರೆ. ಪೈತಾನ್ ತಂಡದ ಉದ್ಯೋಗಿಗಳಿಗೆ ಅಧಿಕ ಸಂಬಳ ನೀಡಲಾಗುತ್ತಿತ್ತು. ವೆಚ್ಚ ಕಡಿತದ ಉದ್ದೇಶದಿಂದ ಗೂಗಲ್ ಈ ಲೇ ಆಫ್ ಕ್ರಮ ಕೈಗೊಂಡಿದೆ. ಜರ್ಮನಿಯ ಮ್ಯೂನಿಕ್ ನಗರದಲ್ಲಿ ಹೊಸ ಪೈತಾನ್ ತಂಡ ಸ್ಥಾಪಿಸಲು ಗೂಗಲ್ ಯೋಜಿಸಿರುವುದು ತಿಳಿದುಬಂದಿದೆ.

ಕ್ಯಾಲಿಫೋರ್ನಿಯಾ, ಏಪ್ರಿಲ್ 30: ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಎನಿಸಿರುವ ಗೂಗಲ್ ತನ್ನ ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವುದನ್ನು (layoffs) ಮುಂದುವರಿಸುತ್ತಿದೆ. ವರದಿ ಪ್ರಕಾರ ಗೂಗಲ್ ಸಂಸ್ಥೆ ತನ್ನ ಇಡೀ ಪೈತಾನ್ ತಂಡವನ್ನೇ (Python team in google) ಲೇ ಆಫ್ ಮಾಡಿದೆ. ಎಐ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಹಣ ಸಂಪನ್ಮೂಲ ಬೇಕಾಗಿರುವುದರಿಂದ ಬೇರೆಡೆ ವೆಚ್ಚ ಕಡಿತಕ್ಕೆ ಗೂಗಲ್ ಕೈಹಾಕಿರಬಹುದು ಎಂದು ಹೇಳಲಾಗುತ್ತಿದೆ. ಪೈತಾನ್ ಮಾತ್ರವಲ್ಲ, ಡಾರ್ಟ್, ಫ್ಲಟ್ಟರ್ ಹಾಗೂ ಇತರ ತಂಡಗಳಿಂದಲೂ ಬಹಳಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಒಟ್ಟು ಎಷ್ಟು ಮಂದಿಯನ್ನು ಲೇ ಆಫ್ ಮಾಡಲಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಗೂಗಲ್ನಿಂದ ಅಧಿಕೃತವಾಗಿ ಹೇಳಿಕೆ ಬಂದಿಲ್ಲ.
ಕಳೆದ ಎರಡು ವರ್ಷದಲ್ಲಿ ಗೂಗಲ್ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ಇತ್ತೀಚೆಗಷ್ಟೇ ದುರ್ವರ್ತನೆ ಇತ್ಯಾದಿ ಕಾರಣಕ್ಕೆ 50 ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಇದೀಗ ಪೈತಾನ್ ಮತ್ತಿತರ ತಂಡಗಳಿಂದ ಬಹಳಷ್ಟು ಎಂಜಿನಿಯರುಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಲೇ ಆಫ್ ಆಗುತ್ತಿರುವವರೆಲ್ಲಾ ಅಮೆರಿಕನ್ ಉದ್ಯೋಗಿಗಳೇ ಆಗಿದ್ದಾರೆ. ಪೈತಾನ್ ತಂಡದಲ್ಲಿ ಸುಮಾರು 10 ಉದ್ಯೋಗಗಳಿದ್ದಾರೆ ಎನ್ನಲಾಗಿದೆ. ಆದರೆ, ಡಾರ್ಟ್, ಫ್ಲಟರ್ ಮೊದಲಾದ ತಂಡಗಳಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: ದುಬೈನಲ್ಲಿ ಸಿದ್ದವಾಗುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್ಪೋರ್ಟ್; 400 ಗೇಟ್, 5 ರನ್ವೇ ಇರುವ ಟರ್ಮಿನಲ್ನ ವಿಶೇಷತೆಗಳು ಹಲವು
ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ ಅಮೆರಿಕದಲ್ಲಿ ಗೂಗಲ್ ಉದ್ಯೋಗಿಗಳಿಗೆ ವೇತನ ಹೆಚ್ಚು ಕೊಡಲಾಗುತ್ತಿದೆ. ಈ ಕಾರಣಕ್ಕೆ ಉದ್ಯೋಗಕಡಿತ ಮಾಡಲಾಗಿದೆ. ಜರ್ಮನಿಯ ಮ್ಯೂನಿಕ್ ನಗರದಲ್ಲಿ ಹೊಸ ತಂಡವನ್ನೇ ಸ್ಥಾಪಿಸಲು ಗೂಗಲ್ ಯೋಜಿಸಿರುವುದು ತಿಳಿದುಬಂದಿದೆ. ಅಮೆರಿಕಕ್ಕೆ ಹೋಲಿಸಿದರೆ ಜರ್ಮನಿಯಲ್ಲಿ ಸಂಬಳ ಇತ್ಯಾದಿ ಕಡಿಮೆ ಇದೆ ಎಂಬುದು ಗೂಗಲ್ ಲೆಕ್ಕಾಚಾರ.
ಯಾವುವಿವು ಪೈತಾನ್ ಮತ್ತಿತರ ತಂಡಗಳು?
ಪೈತಾನ್ ಎಂಬುದು ಪ್ರೋಗ್ರಾಮಿಂಗ್ ಲಾಂಗ್ವೇಜ್. ಐಟಿ ವಲಯದಲ್ಲಿ ಬಹಳಷ್ಟು ಬಳಕೆಯಲ್ಲಿರುವ ಸಾಫ್ಟ್ವೇರ್ ಇದು. ಯೂಟ್ಯೂಬ್ ಸೇರಿದಂತೆ ಗೂಗಲ್ನ ಹಲವು ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಹಳಷ್ಟು ಅಪ್ಲಿಕೇಶನ್ಗಳಿಗೆ ಪೈತಾನ್ ಅವಶ್ಯಕತೆ ಇದೆ. ಗೂಗಲ್ ಮಾತ್ರವಲ್ಲದೇ, ಇಂಟೆಲ್, ಐಬಿಎಂ, ಫೇಸ್ಬುಕ್, ಸ್ಪಾಟಿಫೈ, ನೆಟ್ಫ್ಲಿಕ್ಸ್ ಇತ್ಯಾದಿ ಸಂಸ್ಥೆಗಳು ಪೈತಾನ್ ಸಾಫ್ಟ್ವೇರ್ ಬಳಸುತ್ತವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿಗೆ ಈ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಬಳಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ