AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಗೂಗಲ್​ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ

Google to build massive AI hub at Vishakhapatnam: ಆಂಧ್ರದ ವೈಜಾಗ್​ನಲ್ಲಿ ಗೂಗಲ್ ಸಂಸ್ಥೆ ಬೃಹತ್ ಎಐ ಕೇಂದ್ರ ನಿರ್ಮಿಸಲಿದೆ. ಮುಂದಿನ 5 ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಇದು ಗೂಗಲ್​ನ ಅತಿದೊಡ್ಡ ಎಐ ಹಬ್ ಆಗಿರಲಿದೆ. ಅಮೆರಿಕದ ಹೊರಗೆ ನಿರ್ಮಾಣವಾದ ಬೃಹತ್ ಎಐ ಹಬ್ ಎನಿಸಲಿದೆ. ಭಾರತ್ ಏರ್ಟೆಲ್ ಮತ್ತು ಗೂಗಲ್ ಜಂಟಿಯಾಗಿ ಇದನ್ನು ನಿರ್ಮಿಸಲಿದ್ದು, ಇದರಲ್ಲಿ ಡಾಟಾ ಸೆಂಟರ್ ಕೂಡ ಇರುತ್ತದೆ.

ಭಾರತದಲ್ಲಿ ಗೂಗಲ್​ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ
ಕೇಂದ್ರ ಸಚಿವರು, ಆಂಧ್ರ ಸಚಿವರು ಮತ್ತು ಗೂಗಲ್ ಅಧಿಕಾರಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 14, 2025 | 3:37 PM

Share

ವಿಶಾಖಪಟ್ಟಣಂ, ಅಕ್ಟೋಬರ್ 14: ವಿಶ್ವದ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ದೊಡ್ಡ ಎಐ ಹಬ್ (Google AI Hub) ನಿರ್ಮಿಸಲು ಸಿದ್ಧವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೃಹತ್ ಡಾಟಾ ಸೆಂಟರ್ ಮತ್ತು ಎಐ ಬೇಸ್ ನಿರ್ಮಿಸುವುದಾಗಿ ಹೇಳಿದೆ. ಗೂಗಲ್​ನ ಅತಿದೊಡ್ಡ ಎಐ ಹಬ್ ಇದಾಗಿರಲಿದೆ. ಅಮೆರಿಕ ಹೊರಗೆ ಯಾವುದೇ ಕಂಪನಿ ನಿರ್ಮಿಸಿದ ಅತಿದೊಡ್ಡ ಎಐ ಹಬ್ ಇದಾಗಿರಲಿದೆ. ಗೂಗಲ್ ಮುಂದಿನ ಐದು ವರ್ಷದಲ್ಲಿ ಈ ಸೌಕರ್ಯಗಳನ್ನು ನಿರ್ಮಿಸಲು 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿ ವೈಜಾಗ್​ನಲ್ಲಿ ಗೂಗಲ್​ನ ಉದ್ದೇಶಿತ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ಎಕ್ಸ್​ನಲ್ಲಿ ಅವರೇ ಹಂಚಿಕೊಂಡಿದ್ದಾರೆ. ಈ ಎಐ ಹಬ್​ನಲ್ಲಿ ಗೀಗಾವ್ಯಾಟ್ ಮಟ್ಟದ ಗಣಕ ಸಾಮರ್ಥ್ಯ, ಹೊಸ ಇಂಟರ್​ನ್ಯಾಷನಲ್ ಸಬ್​ಸೀ ಗೇಟ್​ವೇ, ದೊಡ್ಡ ಮಟ್ಟದ ವಿದ್ಯುತ್ ಸೌಕರ್ಯ ಮೊದಲಾದವು ಇರಲಿವೆ. ಗೂಗಲ್​ನ ವಿನೂತನ ತಂತ್ರಜ್ಞಾನವು ಭಾರತದಲ್ಲಿ ವಿವಿಧ ಉದ್ದಿಮೆಗಳು ಮತ್ತು ಬಳಕೆದಾರರಿಗೆ ಲಭ್ಯವಾಗಲಿವೆ. ಇದರಿಂದ ದೇಶಾದ್ಯಂತ ಎಐ ಇನ್ನೋವೇಶನ್​ಗೆ ಪುಷ್ಟಿ ಸಿಗುತ್ತದೆ. ಅಭಿವೃದ್ಧಿಗೂ ಪುಷ್ಟಿ ಸಿಗುತ್ತದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.

ಇದನ್ನೂ ಓದಿ: ಟೆಲಿಗ್ರಾಮ್ ಸಿಇಒ ಆದರೂ ಮೊಬೈಲ್ ಮುಟ್ಟಲ್ಲ, ಒಂದೂ ಚಟ ಹೊಂದಿಲ್ಲ; ಪಾವೆಲ್ ದುರೋವ್ ಕಥೆ ಇದು…

ಆಂಧ್ರದಲ್ಲಿ ಗೂಗಲ್ ಎಐ ಹಬ್ ನಿರ್ಮಾಣವಾಗುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಇದು ವಿಕಸಿತ ಭಾರತ ನಿರ್ಮಾಣ ಮಾಡುವ ತಮ್ಮ ಗುರಿಗೆ ಪೂರಕವಾಗಿದೆ. ಅತ್ಯಾಧುನಿಕ ಪರಿಕರಗಳಿಂದ ನಮ್ಮ ಜನರೆಲ್ಲರಿಗೂ ಎಐ ಫಲ ದೊರಕಲಿದೆ. ಇದರಿಂದ ಡಿಜಿಟಲ್ ಆರ್ಥಿಕತೆಗೆ ಸಹಾಯಕವಾಗುತ್ತದೆ. ಭಾರತವು ಜಾಗತಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಲು ಸಾಧ್ಯವಾಗುತ್ತದೆ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಎಕ್ಸ್ ಪೋಸ್ಟ್

ಏರ್ಟೆಲ್ ಜೊತೆ ಸೇರಿ ಗೂಗಲ್​ನಿಂದ ಎಐ ಹಬ್

ಗೂಗಲ್ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ವಿಶಾಖಪಟ್ಟಣಂನಲ್ಲಿ ಜಂಟಿಯಾಗಿ ಸೇರಿ ಭಾರತದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಬ್ ನಿರ್ಮಿಸಲಿವೆ. ಇದರಲ್ಲಿ ಬೃಹತ್ ಡಾಟಾ ಸೆಂಟರ್ ಕೂಡ ಇರುತ್ತದೆ. ಗೂಗಲ್​ನ ಹೊಸ ಅಂತಾರಾಷ್ಟ್ರೀಯ ಸಾಗರತಳದ ಕೇಬಲ್​ಗಳನ್ನು ಬೆಂಬಲಿಸುವಂತಹ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಕೂಡ ನಿರ್ಮಾಣವಾಗಲಿದೆ. ಗೂಗಲ್​ನ ಜಾಗತಿಕ ನೆಟ್ವರ್ಕ್ಗೆ ಇದು ನೆರವಾಗುತ್ತದೆ.

ಇದನ್ನೂ ಓದಿ: ಸಾಲಕ್ಕೆ ಹೆದರಿ ಕವಡೆಕಾಸಿಗೆ ಆ್ಯಪಲ್ ಷೇರು ಮಾರಿದ್ದ ವಾಯ್ನೆ; ಇವತ್ತು ಷೇರುಮೌಲ್ಯ 26 ಲಕ್ಷ ಕೋಟಿ ರೂ

ಗೂಗಲ್ ಕ್ಲೌಡ್ಸ್ ಸಿಇಒ ಥಾಮಸ್ ಕುರಿಯನ್ ಅವರು ಬೃಹತ್ ಎಐ ಸೌಕರ್ಯ, ಗೂಗಲ್ ಕ್ಲೌಂಡ್ ಸೌಲಭ್ಯ, ಸಬ್​ಸೀ ಕೇಬಲ್ ಲ್ಯಾಂಡಿಂಗ್, ಗ್ಲೋಬಲ್ ಕನ್ಸೂಮರ್ ಸರ್ವಿಸಸ್ ಡಾಟಾ ಸ್ಟೋರೇಜ್ ಸ್ಥಾಪನೆಯ ಯೋಜನೆಗಳನ್ನು ಪ್ರಕಟಿಸಿದರು.

ನಿರ್ಮಲಾ ಸೀತಾರಾಮನ್ ಎಕ್ಸ್ ಪೋಸ್ಟ್

ದೆಹಲಿಯಲ್ಲಿ ನಡೆದ ಭಾರತ್​ಎಐಶಕ್ತಿ ಕಾರ್ಯಕ್ರಮದಲ್ಲಿ ವೈಜಾಗ್ ಎಐ ಹಬ್ ಅನ್ನು ಅನಾವರಣಗೊಳಿಸಲಾಯಿತು. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಆಂಧ್ರ ಐಟಿ ಸಚಿವ ನರ ಲೋಕೇಶ್ ಅವರೂ ಈ ಸಂದರ್ಭದಲ್ಲಿ ಇದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Tue, 14 October 25