ಸಣ್ಣ ಹೂಡಿಕೆದಾರರನ್ನು ಸಂರಕ್ಷಿಸುವ ಉದ್ದೇಶದಿಂದ ಕ್ರಿಪ್ಟೋಕರೆನ್ಸಿಗಳನ್ನು ಹಣಕಾಸಿನ ಆಸ್ತಿಯಾಗಿ ಪರಿಗಣಿಸುವ ಪ್ರಸ್ತಾವವನ್ನು ಭಾರತವು ಪರಿಗಣಿಸುತ್ತಿದೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ನವೆಂಬರ್ 29ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಬಯಸುತ್ತಿರುವ ಮಸೂದೆಯನ್ನು ಅಂತಿಮಗೊಳಿಸಲು ಅಧಿಕಾರಿಗಳು ಹವಣಿಸುತ್ತಿರುವಾಗ ಈ ಚರ್ಚೆಗಳು ಬಂದಿವೆ. ಕಾಯ್ದೆಯು ಡಿಜಿಟಲ್ ಕರೆನ್ಸಿಗಳಲ್ಲಿನ ಹೂಡಿಕೆಗೆ ಕನಿಷ್ಠ ಮೊತ್ತವನ್ನು ನಿಗದಿಪಡಿಸಬಹುದು. ಆದರೆ ಕಾನೂನು ಬದ್ಧವಾಗಿ ಅವುಗಳ ಬಳಕೆಯನ್ನು ನಿಷೇಧಿಸುತ್ತದೆ. ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಮೂಲಗಳು ತಮ್ಮ ಗುರುತನ್ನು ಬಹಿರಂಗ ಪಡಿಸಿಲ್ಲ.
ನೀತಿ ನಿರೂಪಕರು ಮಂಗಳವಾರ ತಡರಾತ್ರಿ ಸಂಸತ್ ವೆಬ್‌ಸೈಟ್‌ನಲ್ಲಿ ಮಸೂದೆಯ ವಿವರಣೆಯನ್ನು ಪೋಸ್ಟ್ ಮಾಡಿದಾಗ, “ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಮಸೂದೆ ಪ್ರಯತ್ನಿಸುತ್ತದೆ,” ಎಂದು ಹೇಳುವ ಮೂಲಕ ಕೆಲವು ಮಟ್ಟಿಗೆ ವ್ಯವಹಾರಕ್ಕೆ ಅವಕಾಶ ಹಾಗೇ ಬಿಟ್ಟಂತಿದೆ.
ಈ ಅನಿಶ್ಚಿತತೆಯು ಬುಧವಾರದಂದು ಶಿಬಾ ಇನು ಮತ್ತು Doge Coin ಸೇರಿದಂತೆ ಕ್ರಿಪ್ಟೋಕರೆನ್ಸಿಗಳಲ್ಲಿ ಮಾರಾಟವನ್ನು ಕಾಣುವಂತೆ ಮಾಡಿತು. ಇದು ಭಾರತದ ಪ್ರಮುಖ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಒಂದಾದ WazirX ಪ್ಲಾಟ್‌ಫಾರ್ಮ್‌ನಲ್ಲಿ ವ್ಯಾಪಾರದಲ್ಲಿ ಒಂದು ಹಂತದಲ್ಲಿ ಶೇ 20ಕ್ಕಿಂತ ಕಡಿಮೆಯಾಯಿತು. Binance ಅಥವಾ Krakenನಂತಹ ವ್ಯಾಪಾರ ಪ್ಲಾಟ್ಫಾರ್ಮ್ಗೆ ಹೋಲಿಸಿದರೆ ಕಡಿಮೆ ಪರಿಣಾಮ ಬೀರಿದೆ.
ಈ ಬಗ್ಗೆ ಅಭಿಪ್ರಾಯ ಪಡೆಯುವುದಕ್ಕೆ ಮಾಧ್ಯಮಗಳು ಯತ್ನಿಸಿದಾಗ ಹಣಕಾಸು ಸಚಿವಾಲಯದ ವಕ್ತಾರರನ್ನು ತಕ್ಷಣವೇ ಸಂಪರ್ಕಿಸಲು ಸಾಧ್ಯವಾಗಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಡಿಜಿಟಲ್ ಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧವನ್ನು ಬಯಸುತ್ತದೆ. ಏಕೆಂದರೆ ಇದು ರಾಷ್ಟ್ರದ ಸ್ಥೂಲ ಆರ್ಥಿಕ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಕೇಂದ್ರ ಬ್ಯಾಂಕ್ ಭಾವಿಸುತ್ತದೆ. ಮುಂದಿನ ಬಜೆಟ್‌ನಲ್ಲಿ ಕ್ರಿಪ್ಟೋಕರೆನ್ಸಿಯಿಂದ ಬರುವ ಲಾಭದ ಮೇಲೆ ತೆರಿಗೆ ವಿಧಿಸಲು ಸರ್ಕಾರವು ಪರಿಗಣಿಸುತ್ತಿರುವಾಗ, ಗವರ್ನರ್ ಶಕ್ತಿಕಾಂತ ದಾಸ್ ಕಳೆದ ವಾರ ದೇಶಕ್ಕೆ ಈ ವಿಷಯದ ಬಗ್ಗೆ ಹೆಚ್ಚು ಆಳವಾದ ಚರ್ಚೆಗಳ ಅಗತ್ಯವಿದೆ ಎಂದು ಹೇಳಿದ್ದರು. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ಸಮಸ್ಯೆಯನ್ನು ಸಕ್ರಿಯವಾಗಿ ಗಮನಿಸುತ್ತಿದೆ ಮತ್ತು ಮಸೂದೆಯ ವಿಷಯಗಳು ಅಂತಿಮಗೊಂಡ ನಂತರ ಅದನ್ನು ಸಂಪುಟದ ಅನುಮೋದನೆಗಾಗಿ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಪ್ಟೋಕರೆನ್ಸಿಗಳ ಕುರಿತು ಸಭೆಯನ್ನು ನಡೆಸಿದ್ದರು. ನಂತರ ಅಧಿಕಾರಿಗಳು ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಗಳನ್ನು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮಾರ್ಗಗಳಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ನಂತರ, ಕಳೆದ ವಾರದ ಭಾಷಣದಲ್ಲಿ, ಖಾಸಗಿ ವರ್ಚುವಲ್ ಕರೆನ್ಸಿಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಲು ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಒತ್ತಾಯಿಸಿದ್ದು, ವಿಫಲವಾದರೆ “ತಪ್ಪಾದ ಕೈಗಳಿಗೆ” ಸೇರಬಹುದು ಎಂದಿದ್ದರು.
ಇದನ್ನೂ ಓದಿ: Cryptocurrency Bill ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ ಕ್ರಿಪ್ಟೋಕರೆನ್ಸಿ ಮಸೂದೆ
Published On - 5:59 pm, Wed, 24 November 21