ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬೆಮೆಲ್ ಸಂಸ್ಥೆಯನ್ನು ಖಾಸಗಿಕರಣಗೊಳಿಸುವ (BEML Privatisation) ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ ಪ್ರಿಲಿಮಿನರಿ ಬಿಡ್ ಕರೆದಿದ್ದ ಕೇಂದ್ರ ಸರ್ಕಾರ ಇದೀಗ ಶೀಘ್ರದಲ್ಲೇ ಹಣಕಾಸು ಬಿಡ್ಗಳನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ರಕ್ಷಣಾ ವಲಯದ ಬೆಮೆಲ್ ಸಂಸ್ಥೆಯ ಶೇ. 26ರಷ್ಟು ಪಾಲನ್ನು (26% Stake) ಸರ್ಕಾರ ಮಾರಲು ಹೊರಟಿದೆ. ಕೇವಲ ಪಾಲು ಮಾತ್ರವಲ್ಲ ಸಂಸ್ಥೆಯ ಆಡಳಿತವೂ ಕೂಡ ಖಾಸಗಿಯವರ ಕೈ ಸೇರಲಿದೆ. ಏಷ್ಯಾದ ಎರಡನೇ ಅತಿದೊಡ್ಡ ಅರ್ಥ್ ಮೂವಿಂಗ್ ಉಪಕರಣಗಳ ತಯಾರಕ ಸಂಸ್ಥೆ ಎನಿಸಿರುವ ಬೆಮೆಲ್ ಅನ್ನು ಖಾಸಗೀಕರಣಗೊಳಿಸುವ ಪ್ರಸ್ತಾವ 2016ರಿಂದಲೇ ಇತ್ತು. ಈ ನಿಟ್ಟಿನಲ್ಲಿ ಬೆಮೆಲ್ನಿಂದ ಮುಖ್ಯ ಭಾಗವಲ್ಲದ ವ್ಯವಹಾರಗಳನ್ನು ಪ್ರತ್ಯೇಕರಿಸಿ ಬೆಮೆಲ್ ಲ್ಯಾಂಡ್ ಅಸೆಟ್ಸ್ ಲಿ (BLAL) ಎಂಬ ಹೊಸ ಕಂಪನಿಯನ್ನು ಸ್ಥಾಪಿಸಲಾಗಿದೆ. ಇದು ಬೆಮೆಲ್ ಖಾಸಗೀಕರಣದ ಭಾಗವಾಗಿ ಮಾಡಲಾದ ಪ್ರಕ್ರಿಯೆ. ಈ ಹೊಸ ಕಂಪನಿ ಷೇರುಮಾರುಕಟ್ಟೆಗಳಲ್ಲಿ 2023 ಏಪ್ರಿಲ್ ತಿಂಗಳಲ್ಲಿ ಲಿಸ್ಟ್ ಕೂಡ ಆಗಿದೆ. ಇದರ ಬೆನ್ನಲ್ಲೇ ಈಗ ಬೆಮೆಲ್ನ ಖಾಸಗೀಕರಣಕ್ಕೆ ಸರ್ಕಾರ ಗಟ್ಟಿ ಹೆಜ್ಜೆಗಳನ್ನು ಇಡುವ ನಿರೀಕ್ಷೆ ಇದೆ.
2021 ಜನವರಿಯಲ್ಲಿ ಬೆಮೆಲ್ನ ಶೇ. 26ರಷ್ಟು ಪಾಲು ಮಾರಾಟಕ್ಕೆ ಸರ್ಕಾರ ಪ್ರಿಲಿಮಿನರಿ ಬಿಡ್ ಆಹ್ವಾನಿಸಿದಾಗ ಹಲವು ಕಡೆಗಳಿಂದ ಆಸಕ್ತಿ (EoI- Expression of Interest) ವ್ಯಕ್ತವಾಗಿವೆಯಂತೆ. ಇದೀಗ ಫೈನಾನ್ಷಿಯಲ್ ಬಿಡ್ ಆಹ್ವಾನಿಸಲು ಸರ್ಕಾರ ನಿರ್ಧರಿಸಿರುವುದು ತಿಳಿದುಬಂದಿದೆ. ಫೈನಾನ್ಷಿಯಲ್ ಬಿಡ್ನಲ್ಲಿ ಎಷ್ಟು ಹಣಕ್ಕೆ ಶೇ. 26ರಷ್ಟು ಪಾಲು ಖರೀದಿಸಲಾಗುವುದು ಎಂಬ ಮಾಹಿತಿ ಇರುತ್ತದೆ. ಅತಿಹೆಚ್ಚು ಹಣಕ್ಕೆ ಬಿಡ್ ಮಾಡಿರುವವರಿಗೆ ಬೆಮೆಲ್ ಆಡಳಿತವು ಕೈಸೇರುತ್ತದೆ.
ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಭಾರತ್ ಅರ್ಥ್ ಮೂವರ್ಸ್ ಲಿ ಸಂಸ್ಥೆ ಬೆಂಗಳೂರು, ಕೆಜಿಎಫ್, ಮೈಸೂರು ಮತ್ತು ಪಾಲಕ್ಕಾಡ್ನಲ್ಲಿ (ಕೇರಳ) ತಯಾರಿಕಾ ಘಟಕಗಳನ್ನು ಹೊಂದಿದೆ. ಇದು ಏಷ್ಯಾದ ಎರಡನೇ ಅತಿದೊಡ್ಡ ಅರ್ಥ್ ಮೂವಿಂಗ್ ಉಪಕರಣಗಳ ತಯಾರಕ ಸಂಸ್ಥೆ ಎನಿಸಿದೆ. ಬುಲ್ಡೋಜರ್, ಎಕ್ಸ್ಕವೇಟರ್, ರೈಲ್ಕೋಚ್, ಡಂಪ್ ಟ್ರಕ್, ವೀಲ್ ಲೋಡರ್ಸ್, ರೋಪ್ ಶೋವಲ್, ಸ್ಕ್ರೇಪರ್, ಮೋಟಾರ್ ಗ್ರೇಡರ್, ಭಾರೀ ತೂಕದ ಟ್ರಕ್ಗಳು, ಟ್ರೈಲರ್ಗಳು ಇತ್ಯಾದಿಯನ್ನು ತಯಾರಿಸುತ್ತದೆ. ಭಾರತದ ಡಿಫೆನ್ಸ್ ಇಲಾಖೆಗೆ ಬೇಕಾದ ವಾಹನಗಳನ್ನು ಬೆಮೆಲ್ ತಯಾರಿಸಿಕೊಡುತ್ತದೆ. ಭಾರತೀಯ ರೈಲ್ವೆ ಇಲಾಖೆಯೂ ಬೆಮೆಲ್ನ ದೊಡ್ಡ ಗ್ರಾಹಕರ ಪೈಕಿ ಇದೆ.
1964ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಸಹಾಯದಿಂದ ಬೆಂಗಳೂರಿನಲ್ಲಿ ಸ್ಥಾಪನೆಯಾದ ಬೆಮೆಲ್ 1992ರವರೆಗೂ ಭಾರತ ಸರ್ಕಾರದ ಏಕೈಕ ಸ್ವಾಮ್ಯತೆಯಲ್ಲಿ ಇತ್ತು. 1992ರಲ್ಲಿ ಸರ್ಕಾರ ತನ್ನ ಶೇ. 25ರಷ್ಟು ಪಾಲನ್ನು ಖಾಸಗಿಗೆ ಮಾರಿತು. ಷೇರುಪೇಟೆಯಲ್ಲೂ ಇದು ಲಿಸ್ಟ್ ಆಗಿದೆ.
ಇದನ್ನೂ ಓದಿ: China vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?
ಸದ್ಯ ಬಿಇಎಂಎಲ್ನಲ್ಲಿ ಸರ್ಕಾರದ ಪಾಲು ಶೇ. 54.03ರಷ್ಟಿದೆ. ಅದರಲ್ಲಿ ಶೇ. 26ರಷ್ಟು ಪಾಲನ್ನು ಸರ್ಕಾರ ಮಾರಲು ಹೊರಟಿದೆ. ಇದು ನೆರವೇರಿದರೆ ಬೆಮೆಲ್ನಲ್ಲಿ ಸರ್ಕಾರಕ್ಕಿರುವ ಪಾಲು ಶೇ. 28.03ಕ್ಕೆ ಇಳಿಕೆ ಆಗುತ್ತದೆ. ಹಾಗೆಯೇ, ಬೆಮೆಲ್ ಆಡಳಿತದ ಚುಕ್ಕಾಣಿಯೂ ಖಾಸಗಿಯವರ ಕೈಗೆ ಸೇರಲಿದೆ.
ಬೆಮೆಲ್ನ ಮುಖ್ಯ ವ್ಯವಹಾರದಿಂದ ಪ್ರತ್ಯೇಕವಾಗಿ ಇತರ ವ್ಯವಹಾರಗಳನ್ನು ಬೆಮೆಲ್ ಲ್ಯಾಂಡ್ ಅಸೆಟ್ಸ್ ಕಂಪನಿಗೆ ಜೋಡಿಸಲಾಗಿದೆ. ಇದು 2023 ಏಪ್ರಿಲ್ 19ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಲಿಸ್ಟ್ ಆಗಿತ್ತು. ಬಿಎಸ್ಇನಲ್ಲಿ 290.2 ಮತ್ತು ಎನ್ಎಸ್ಇನಲ್ಲಿ 287 ರೂ ಷೇರುಬೆಲೆಗೆ ಇದು ಲಿಸ್ಟ್ ಆಗಿತ್ತು. ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಈ ಸಂಸ್ಥೆಯ ಷೇರು ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಕೆಲ ಮಾರುಕಟ್ಟೆ ತಜ್ಞರು ಇದರ ಷೇರು ಬೆಲೆ 600 ರೂವರೆಗೂ ಏರಬಹುದು ಎಂದು ಅಂದಾಜಿಸಿದ್ದರು. ಇದೀಗ ಅದರ ಬೆಲೆ 200ರೂಗಿಂತಲೂ ಕಡಿಮೆಗೆ ಕುಸಿದಿದೆ.