Domestic Crude: ದೇಶೀಯ ಕಚ್ಚಾತೈಲದ ಮೇಲೆ ವಿಂಡ್​ಫಾಲ್ ಟ್ಯಾಕ್ಸ್​ ಹೆಚ್ಚಿಸಿದ ಭಾರತ ಸರ್ಕಾರ, ವೈಮಾನಿಕ ಇಂಧನಕ್ಕೆ ಸೆಸ್ ಬರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 01, 2022 | 9:05 AM

ವಿದೇಶಿ ವಿನಿಮಯ ಮೀಸಲು ಸಂಗ್ರಹ, ಜಾಗತಿಕ ಕಚ್ಚಾ ತೈಲ ಬೆಲೆ ಹಾಗೂ ಇತರ ವಿದ್ಯಮಾನಗಳನ್ನು ಆಧರಿಸಿ ಪ್ರತಿ 15 ದಿನಗಳಿಗೆ ಒಮ್ಮೆ ಕೇಂದ್ರ ಸರ್ಕಾರವು ವಿಂಡ್​ಫಾಲ್ ಟ್ಯಾಕ್ಸ್​ ಪರಿಷ್ಕರಿಸುತ್ತದೆ.

Domestic Crude: ದೇಶೀಯ ಕಚ್ಚಾತೈಲದ ಮೇಲೆ ವಿಂಡ್​ಫಾಲ್ ಟ್ಯಾಕ್ಸ್​ ಹೆಚ್ಚಿಸಿದ ಭಾರತ ಸರ್ಕಾರ, ವೈಮಾನಿಕ ಇಂಧನಕ್ಕೆ ಸೆಸ್ ಬರೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಸ್ಥಳೀಯವಾಗಿ ಉತ್ಪಾದಿಸಿದ ಕಚ್ಚಾತೈಲದ (Domestic Crude Oil) ಮೇಲೆ ಭಾರತ ಸರ್ಕಾರವು ವಿಂಡ್​ಫಾಲ್ ಟ್ಯಾಕ್ಸ್​ (Windfall Tax) ಹೆಚ್ಚಿಸಿದೆ. ಒಂದು ಟನ್ ಕಚ್ಚಾತೈಲದ ಮೇಲೆ ₹ 13,300 ವಿಂಡ್​ಫಾಲ್ ಟ್ಯಾಕ್ಸ್​ ವಿಧಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಹೊಸ ತೆರಿಗೆ ಗುರುವಾರದಿಂದಲೇ (ಸೆಪ್ಟೆಂಬರ್ 1) ಜಾರಿಗೆ ಬರಲಿದೆ. ಕಳೆದ ಎರಡು ವಾರಗಳಿಂದ ಭಾರತದಲ್ಲಿ ಉತ್ಪಾದನೆಯಾಗುವ ಕಚ್ಚಾತೈಲಕ್ಕೆ ₹ 13,000 ವಿಂಡ್​ಫಾಲ್ ಟ್ಯಾಕ್ಸ್ ವಿಧಿಸಲಾಗುತ್ತಿತ್ತು. ಅದಕ್ಕೂ ಮೊದಲು ತೆರಿಗೆ ಪ್ರಮಾಣ ಹೆಚ್ಚಾಗಿತ್ತು. ಆಗಸ್ಟ್ 19ರಲ್ಲಿ ವಿಂಡ್​ಫಾಲ್ ಟ್ಯಾಕ್ಸ್ ಮೊತ್ತವನ್ನು ₹ 17,750 ದಿಂದ ₹ 13,000ಕ್ಕೆ ಇಳಿಸಲಾಗಿತ್ತು.

ವೈಮಾನಿಕ ಕ್ಷೇತ್ರದಲ್ಲಿ ಬಳಕೆಯಾಗುವ ಇಂಧನದ (Aviation Turbine Fuel – ATF) ಮೇಲಿದ್ದ ತೆರಿಗೆಯನ್ನು ₹ 2ರಿಂದ ₹ 9ಕ್ಕೆ ಹೆಚ್ಚಿಸಲಾಗಿದೆ. ಡೀಸೆಲ್ ರಫ್ತಿನ ಮೇಲೆ ವಿಧಿಸುತ್ತಿದ್ದ ವಿಶೇಷ ಅಬಕಾರಿ ಸುಂಕವನ್ನು ₹ 6ರಿಂದ ₹ 12ಕ್ಕೆ ಹೆಚ್ಚಿಸಲಾಗಿದೆ. ಕಳೆದ ಜುಲೈ 1ರಂದು ಕೇಂದ್ರ ಸರ್ಕಾರವು ಒಂದು ಲೀಟರ್​ ಪೆಟ್ರೋಲ್ ಮತ್ತು ವೈಮಾನಿಕ ಇಂಧನದ ಮೇಲೆ ₹ 6 ಮತ್ತು ಡೀಸೆಲ್ ಮೇಲೆ ಎಟಿಎಫ್​ ರಫ್ತಿನ ಮೇಲೆ ₹ 13ರ ಸುಂಕ ವಿಧಿಸಿತ್ತು. ಪ್ರತಿ ಟನ್ ದೇಶೀಯ ಕಚ್ಚಾತೈಲ ಮಾರಾಟದ ಮೇಲೆ ₹ 23,250ರ ವಿಂಡ್​ಫಾಲ್ ಟ್ಯಾಕ್ಸ್ ಹೇರಿತ್ತು.

ವಿದೇಶಿ ವಿನಿಮಯ ಮೀಸಲು ಸಂಗ್ರಹ, ಜಾಗತಿಕ ಕಚ್ಚಾ ತೈಲ ಬೆಲೆ ಹಾಗೂ ಇತರ ವಿದ್ಯಮಾನಗಳನ್ನು ಆಧರಿಸಿ ಪ್ರತಿ 15 ದಿನಗಳಿಗೆ ಒಮ್ಮೆ ದೇಶೀಯ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವಿಂಡ್​ಫಾಲ್ ಟ್ಯಾಕ್ಸ್ ಪರಿಷ್ಕರಿಸಲಾಗುವುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಭಾರತ ಸರ್ಕಾರವು ಜುಲೈ 1ರಂದು ಮೊದಲ ಬಾರಿಗೆ ವಿಂಡ್​ಫಾಲ್ ಟ್ಯಾಕ್ಸ್​ ವಿಧಿಸಿತ್ತು. ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿತ್ತು. ದೇಶೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರುತ್ತಿದ್ದ ತೈಲ ಕಂಪನಿಗಳು ಉತ್ತಮ ಆದಾಯ ಗಳಿಸುತ್ತಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪ್ರಾತಿನಿಧಿಕ ಉತ್ಪನ್ನವಾಗಿರುವ ಬ್ರೆಂಟ್​ ಕ್ರೂಡ್​ ಗರಿಷ್ಠ ಮಟ್ಟದಲ್ಲಿ ವಹಿವಾಟಾಗುತ್ತಿತ್ತು.

Published On - 9:05 am, Thu, 1 September 22