Investment in Silver: 5G ಆರಂಭಕ್ಕೂ ಬೆಳ್ಳಿ ಬೆಲೆ ಏರಿಕೆಗೂ ಇದೆ ನಂಟು; ಹೂಡಿಕೆದಾರರ ಹೊಸ ಆಕರ್ಷಣೆಯಾದ ಬೆಳ್ಳಿಗೆ ಡಿಮಾಂಡಪ್ಪೋ ಡಿಮಾಂಡು
Mutual Fund: 5ಜಿ ತಂತ್ರಜ್ಞಾನವು ಚಾಲ್ತಿಗೆ ಬಂದ ನಂತರ ಬೆಳ್ಳಿಯ ಬಳಕೆ ಹೆಚ್ಚಾಗಿ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇರುವುದರಿಂದ ಹೂಡಿಕೆದಾರರು ಬೆಳ್ಳಿಯನ್ನು ಖರೀದಿಸಲು ಒಲವು ತೋರುತ್ತಿದ್ದಾರೆ.
ಬೆಂಗಳೂರು: ಕಳೆದ ಎರಡು ಮೂರು ತಿಂಗಳುಗಳಿಂದ ಹೂಡಿಕೆದಾರರು ಬೆಳ್ಳಿ ಖರೀದಿಗೆ (Investment in Silver) ಹೆಚ್ಚು ಒಲವು ತೋರಿಸುತ್ತಿದ್ದಾರೆ. ಭವಿಷ್ಯದಲ್ಲಿ ಚಿನ್ನಕ್ಕಿಂತಲೂ ಬೆಳ್ಳಿ ಹೆಚ್ಚಿನ ಪ್ರತಿಫಲ ತಂದುಕೊಡುವ ಉತ್ತಮ ಹೂಡಿಕೆ ಆಗಬಲ್ಲದು ಎನ್ನುವುದು ಈ ಉತ್ಸಾಹಕ್ಕೆ ಇರುವ ಮುಖ್ಯ ಕಾರಣ. ಕೇಂದ್ರ ಸರ್ಕಾರವು 5ಜಿ ತಂತ್ರಜ್ಞಾನಕ್ಕೆ ಅನುವು ಮಾಡಿಕೊಡುವುದರ ಜೊತೆಜೊತೆಗೆ ಇಂಟರ್ನೆಟ್ ಬಳಕೆಯಲ್ಲಿ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ, ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ, ಸೌರಶಕ್ತಿ ಬಳಕೆಗೆ ಸರ್ಕಾರದ ಪ್ರೋತ್ಸಾಹ, ಸೌರಶಕ್ತಿ ಬಳಕೆಗೆ ಜನರ ಒಲವು, ಕೆಲ ಸೂಕ್ಷ್ಮ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಸಂಖ್ಯೆ ಆದ ಹೆಚ್ಚಳ ಹೂಡಿಕೆದಾರರ ಚಿತ್ತ ಬೆಳ್ಳಿಯತ್ತ ಹರಿಯಲು ಮುಖ್ಯ ಕಾರಣವಾಗಿದೆ. ಏಕೆಂದರೆ ಚಿನ್ನದಂತೆ ಬೆಳ್ಳಿ ಕೇವಲ ಆಭರಣ ಲೋಹವಷ್ಟೇ ಅಲ್ಲ. ಕೈಗಾರಿಕೆಯ ಯಂತ್ರಗಳು ಮತ್ತು ಸೂಕ್ಷ್ಮ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಬೆಳ್ಳಿಯ ಬಳಕೆಯಾಗುತ್ತಿದೆ. 5ಜಿ ತಂತ್ರಜ್ಞಾನವು ಚಾಲ್ತಿಗೆ ಬಂದ ನಂತರ ಬೆಳ್ಳಿಯ ಬಳಕೆ ಹೆಚ್ಚಾಗಿ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇರುವುದರಿಂದ ಹೂಡಿಕೆದಾರರು ಬೆಳ್ಳಿಯನ್ನು ಖರೀದಿಸಲು ಒಲವು ತೋರುತ್ತಿದ್ದಾರೆ.
ಮೊದಲು ಬೆಳ್ಳಿಯನ್ನು ಕೇವಲ ಭೌತಿಕ ರೂಪದಲ್ಲಿ (ಆಭರಣ, ಬೆಳ್ಳಿ ಪಾತ್ರೆ, ಪೂಜಾ ಸಾಮಗ್ರಿ, ಗಟ್ಟಿ, ತಂತಿ) ಮಾತ್ರವೇ ಖರೀದಿಸಬೇಕಿತ್ತು (Silver in Physical Format). ನಂತರದ ದಿನಗಳಲ್ಲಿ ಕಮಾಡಿಟಿ ಟ್ರೇಡಿಂಗ್ನಲ್ಲಿ ಬೆಳ್ಳಿ ವಹಿವಾಟು ನಡೆಸಲು ಅವಕಾಶ ದೊರೆಯಿತು. ಆದರೆ ಎಲ್ಲರಿಗೂ ಇದು ಅರ್ಥವಾಗುವುದು, ಸುಲಭವಾಗಿ ಹಣ ವಿನಿಯೋಗಿಸುವುದು ಸಾಧ್ಯವಿರಲಿಲ್ಲ. ಹೀಗಾಗಿಯೇ ಚಿನ್ನದ ಮಾದರಿಯಲ್ಲಿ ಬೆಳ್ಳಿಯಲ್ಲಿಯೂ ಸುಲಭವಾಗಿ ಹಣ ತೊಡಗಿಸಲು ಸಾಧ್ಯವಾಗುವ ಆರ್ಥಿಕ ಉತ್ಪನ್ನವೊಂದು ಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಿತ್ತು. ಹೂಡಿಕೆದಾರರ ಆಸಕ್ತಿಯನ್ನು ಮನಗಂಡ ಹಲವು ಎಎಂಸಿಗಳು (Asset Management Company – AMC) ಇದೀಗ ಇಟಿಎಫ್ (Exchange Traded Fund – ETF) ಹಾಗೂ ಮ್ಯೂಚುವಲ್ ಫಂಡ್ಗಳ ಎಫ್ಒಎಫ್ (Fund of Fund Mutual Fund- FOF) ಮಾದರಿಯಲ್ಲಿ ಬೆಳ್ಳಿ ಖರೀದಿಗೆ ಅವಕಾಶ ಕಲ್ಪಿಸಿವೆ.
ಇಡಲ್ವೈಸ್ ಮ್ಯೂಚುವಲ್ ಫಂಡ್ ಚಿನ್ನ ಮತ್ತು ಬೆಳ್ಳಿಯಲ್ಲಿ ಏಕಕಾಲಕ್ಕೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ‘ಗೋಲ್ಡ್ ಅಂಡ್ ಸಿಲ್ವರ್’ ಫಂಡ್ಗೆ ಎನ್ಎಫ್ಒ ಘೋಷಿಸಿದೆ. ಕಳೆದ ಆಗಸ್ಟ್ 24ರಿಂದ ಚಾಲ್ತಿಯಲ್ಲಿರುವ ಎನ್ಎಫ್ಒ ಸೆಪ್ಟೆಂಬರ್ 7ಕ್ಕೆ ಮುಕ್ತಾಯವಾಗುತ್ತದೆ. ಮೋತಿಲಾಲ್ ಓಸ್ವಾಲ್ ಮತ್ತು ಐಸಿಐಸಿಐ ಪ್ರುಡೆನ್ಷಿಯಲ್ ಎಎಂಸಿಗಳು ಸಹ ಇಂಥದ್ದೇ (ಚಿನ್ನ-ಬೆಳ್ಳಿ) ಸಂಯೋಜಿತ ಫಂಡ್ಗಳನ್ನು ಲಾಂಚ್ ಮಾಡಲು ಸೆಬಿ ಎದುರು ಅರ್ಜಿ ಹಾಕಿಕೊಂಡಿವೆ. ಆದರೆ ಈವರೆಗೂ ಎನ್ಎಫ್ಒ ಘೋಷಿಸಿಲ್ಲ.
ಪ್ರಸ್ತುತ ಆದಿತ್ಯ ಬಿರ್ಲಾ ಸನ್ಲೈಫ್, ಐಸಿಐಸಿಐ ಪ್ರುಡೆನ್ಷಿಯಲ್, ನಿಪ್ಪಾನ್ ಇಂಡಿಯಾ, ಮಿರಾಯ ಅಸೆಟ್ ಮ್ಯೂಚುವಲ್ ಫಂಡ್ಗಳು ಸಿಲ್ವರ್ ಫಂಡ್ಗಳ ಇಟಿಎಫ್ ಹಾಗೂ ಫಂಡ್ ಆಫ್ ಫಂಡ್ಗಳನ್ನು ಮಾರುಕಟ್ಟೆಗೆ ತಂದಿವೆ. ಕಳೆದ ಜುಲೈ ಅಂತ್ಯದ ವೇಳೆಗೆ ಭಾರತದ ಮ್ಯೂಚುವಲ್ ಫಂಡ್ ಕಂಪನಿಗಳು ₹ 1,400 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿಲ್ವರ್ ಫಂಡ್ಗಳ ಮೂಲಕ ಸಂಗ್ರಹಿಸಿವೆ.
ಹೂಡಿಕೆ ಮಾಡುವುದು ಹೇಗೆ?
ಮ್ಯೂಚುವಲ್ ಫಂಡ್ ಎಎಂಸಿಗಳು ನಿರ್ವಹಿಸುವ ಇಟಿಎಫ್ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಇರಲೇ ಬೇಕು. ಆದರೆ ಫಂಡ್ ಆಫ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಬೇಕಿಲ್ಲ. ನೇರವಾಗಿ ಕಂಪನಿಯ ವೆಬ್ಸೈಟ್ಗೆ ಲಾಗಿನ್ ಆಗಿ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಫೋಲಿಯೊ ತೆಗೆದು ಹೂಡಿಕೆ ಆರಂಭಿಸಬಹುದು. ಒಮ್ಮೆಲೆ ಇಡಗಂಟು ರೂಪದಲ್ಲಿ ಹೂಡಿಕೆ ಮಾಡಲು ಮತ್ತು ಪ್ರತಿ ತಿಂಗಳಿಗೆ ಇಂತಿಷ್ಟು ಎಂದು ನಿಯಮಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ಇದೆ.
ಬೆಳ್ಳಿಗೆ ಏಕಿಷ್ಟು ಪ್ರಾಮುಖ್ಯತೆ?
ಷೇರುಪೇಟೆಯ ಹೊಯ್ದಾಟಕ್ಕೂ ಚಿನ್ನ-ಬೆಳ್ಳಿ ಬೆಲೆಗಳಿಗೂ ಸಂಬಂಧವಿದೆ. ಸಾಮಾನ್ಯವಾಗಿ ಷೇರುಪೇಟೆ ಕುಸಿದಾಗ ಚಿನ್ನ-ಬೆಳ್ಳಿ ಬೆಲೆಗಳು ಮೇಲೇರುತ್ತವೆ. ಷೇರುಪೇಟೆ ವಿಜೃಂಭಿಸಿದಾಗ ಚಿನ್ನ-ಬೆಳ್ಳಿಯ ಬೆಲೆಗಳು ಕಡಿಮೆಯಾಗುತ್ತವೆ. ಹೂಡಿಕೆದಾರರ ಪೋರ್ಟ್ಫೋಲಿಯೊಗೆ ಸ್ಥಿರತೆ ತಂದುಕೊಡುತ್ತವೆ ಎನ್ನುವ ಕಾರಣಕ್ಕೆ ಒಟ್ಟು ಹೂಡಿಕೆಯ ಶೇ 10ರಿಂದ 20ರಷ್ಟು ಮೊತ್ತವನ್ನು ಚಿನ್ನ-ಬೆಳ್ಳಿಯಲ್ಲಿ ಹೂಡಿಕೆ ಮಾಡಬೇಕು ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಶಿಫಾರಸು ಮಾಡುತ್ತಾರೆ. ಭಾರತೀಯರು ಪ್ರತಿ ವರ್ಷ ಸರಿಸುಮಾರು 1 ಶತಕೋಟಿ ಅಮೆರಿಕ ಡಾಲರ್ ಮೊತ್ತದಷ್ಟು ಬೆಳ್ಳಿಯನ್ನು ಖರೀದಿಸುತ್ತಾರೆ.