
ನವದೆಹಲಿ, ಜನವರಿ 29: ಡಿಜಿಟಲ್ ಟ್ರಾನ್ಸಾಕ್ಷನ್ ವ್ಯಾಪಕವಾಗಿ ಹೆಚ್ಚಾಗಿದ್ದರೂ ಕ್ಯಾಷ್ ವಹಿವಾಟು (cash transactions) ಕೂಡ ಸಾಕಷ್ಟು ನಡೆಯುತ್ತದೆ. 10, 20, 50 ಇತ್ಯಾದಿ ಸಣ್ಣ ಸಣ್ಣ ಮೊತ್ತದ ನೋಟುಗಳು ಕೆಲವೊಮ್ಮೆ ಬಹಳ ಅಗತ್ಯ ಬೀಳುತ್ತವೆ. ಚಿಲ್ಲರೆ ಅಂಗಡಿಯಲ್ಲಿ 500 ರುಪಾಯಿಗೋ ಅಥವಾ ನೂರು ರುಪಾಯಿಗೋ ಚಿಲ್ಲರೆ ನೀಡಲು ನಿರಾಕರಿಸುತ್ತಾರೆ. ಯುಪಿಐ ಮೂಲಕ ಪಾವತಿಸಲಾಗದವರಿಗೆ ಈ ಸಂದರ್ಭ ಕಷ್ಟವಾಗಬಹುದು. ಇದನ್ನು ತಪ್ಪಿಸಲು ಸರ್ಕಾರ ಹೈಬ್ರಿಡ್ ಎಟಿಎಂ ಮೆಷೀನ್ಗಳನ್ನು ಅಳವಡಿಸಲು ಯೋಜಿಸಿದೆ ಎಂದು ವರದಿಗಳು ಹೇಳುತ್ತಿವೆ.
ಈಗಿರುವ ಎಟಿಎಂ ಮೆಷೀನ್ಗಳಲ್ಲಿ 500 ರೂ ಮತ್ತು 100 ರೂ ನೋಟುಗಳು ಸಿಗುತ್ತವೆ. ಸರ್ಕಾರ ಪ್ಲಾನ್ ಮಾಡಿರುವ ಹೊಸ ಎಟಿಎಂ ಮೆಷೀನ್ಗಳು 10 ರೂ, 20 ರೂ ಮತ್ತು 50 ರೂ ನೋಟುಗಳನ್ನು ಡಿಸ್ಪೆನ್ಸ್ ಮಾಡುತ್ತವೆ.
ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ
ಹಾಗೆಯೇ, ಈ ಎಟಿಎಂಗಳಲ್ಲಿ ನೋಟು ವಿನಿಮಯಕ್ಕೂ ಅವಕಾಶ ಕೊಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ ಎನ್ನಲಾಗಿದೆ. ಈ ಪ್ರಸ್ತಾಪದ ಪ್ರಕಾರ, ನೀವು ನಿಮ್ಮಲ್ಲಿರುವ 100 ರೂ ಅಥವಾ 500 ರೂ ನೋಟುಗಳನ್ನು ಎಟಿಎಂಗೆ ಫೀಡ್ ಮಾಡಿದರೆ, ಆ ಮೌಲ್ಯದಷ್ಟು ಸಣ್ಣ ನೋಟುಗಳನ್ನು ಮರಳಿಸುತ್ತದೆ. ಇಂಥ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆ.
ವರದಿಗಳ ಪ್ರಕಾರ ಮುಂಬೈನಲ್ಲಿ ಈಗಾಗಲೇ ಈ ಹೈಬ್ರಿಡ್ ಎಟಿಎಂಗಳನ್ನು ಕೆಲವೆಡೆ ಪ್ರಾಯೋಗಿಕವಾಗಿ ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆ, ರೈಲ್ವೆ ಸ್ಟೇಷನ್, ಬಸ್ ಡಿಪೋ, ಆಸ್ಪತ್ರೆ, ಸರ್ಕಾರಿ ಕಚೇರಿ ಇತ್ಯಾದಿ ಕ್ಯಾಷ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ ಪ್ರಾಯೋಗಿಕ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್
ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕುಗಳಿಗೆ ವೆಚ್ಚವಾಗುತ್ತದೆ. ಸ್ಥಾಪನೆ ವೆಚ್ಚ ಹಾಗೂ ಮೈಂಟನೆನ್ಸ್ ವೆಚ್ಚವೂ ಇರುತ್ತದೆ. ಹೀಗಾಗಿ, ಗ್ರಾಹಕರಿಂದ ಇಂತಿಷ್ಟು ಶುಲ್ಕ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಸಣ್ಣ ಮೊತ್ತದ ನೋಟುಗಳನ್ನು ಸರ್ಕಾರ ಹೆಚ್ಚೆಚ್ಚು ಮುದ್ರಿಸಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ