ವಿಮಾನ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಯೋಜನೆ; ಏರ್​ಬಸ್ ನೆರವಿಗೆ ಯೋಚನೆ

|

Updated on: Oct 25, 2024 | 11:50 AM

Airbus may help India to manufacture civil aircrafts: ಪೂರ್ಣ ಪ್ರಮಾಣದ ನಾಗರಿಕ ವಿಮಾನಗಳನ್ನು ಭಾರತದಲ್ಲೇ ತಯಾರುವಂತಾಗಲು ಕೇಂದ್ರ ಸರ್ಕಾರ ಯೋಜನೆ ಹಾಕಿದೆ. ದೇಶದ ವಿವಿಧ ವೈಮಾನಿಕ ಸೇವಾ ಸಂಸ್ಥೆಗಳ ಬಳಿ 800 ವಿಮಾನಗಳಿವೆ. 20 ವರ್ಷದಲ್ಲಿ 8,000 ವಿಮಾನಗಳ ಅವಶ್ಯಕತೆ ಇದೆ. ಇವುಗಳ ನಿರ್ಮಾಣದಲ್ಲಿ ಭಾರತದಲ್ಲಿ ಸ್ವಾವಲಂಬನೆ ಸಾಧಿಸಲು ಹೊರಟಿದೆ.

ವಿಮಾನ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಯೋಜನೆ; ಏರ್​ಬಸ್ ನೆರವಿಗೆ ಯೋಚನೆ
ಏರ್​ಬಸ್
Follow us on

ನವದೆಹಲಿ, ಅಕ್ಟೋಬರ್ 25: ಭಾರತವು ವಿಮಾನ ತಯಾರಿಕೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕೆಂಬ ಗುರಿಯನ್ನು ಸರ್ಕಾರ ಇಟ್ಟಿದೆ. ಭಾರತದಲ್ಲಿ ಈಗಾಗಲೇ ಎಚ್​ಎಎಲ್​ನಿಂದ ಸಣ್ಣ ಮಟ್ಟದಲ್ಲಿ ನಾಗರಿಕ ವಿಮಾನಗಳ ತಯಾರಿಕೆ ನಡೆಯುತ್ತಿದೆ. ಆದರೆ, ಅವು ಬಹಳ ಹಗುರ ವಿಮಾನಗಳು ಮಾತ್ರ. ಬೋಯಿಂಗ್, ಏರ್​ಬಸ್ ಕಂಪನಿಗಳ ರೀತಿಯಲ್ಲಿ ಪೂರ್ಣ ವಿಮಾನಗಳ ನಿರ್ಮಿಸುವ ಕೆಲಸ ಭಾರತದಲ್ಲಿ ನಡೆಯಬೇಕು ಎಂಬುದು ಸರ್ಕಾರ ಪ್ಲಾನ್ ಹಾಕಿದೆ. ಸದ್ಯ ಭಾರತದಲ್ಲಿ ವಿಮಾನಗಳ ಬಿಡಿಭಾಗಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಡಿಸೈನ್​ನಿಂದ ಹಿಡಿದು ಪೂರ್ಣ ತಯಾರಿಕೆವರೆಗೂ ಎಲ್ಲವನ್ನೂ ಭಾರತದಲ್ಲೇ ಮಾಡಲು ಯೋಜಿಸಲಾಗಿದೆ.

ಭಾರತದ ವೈಮಾನಿಕ ಮಾರುಕಟ್ಟೆ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಹಲವು ಪ್ರದೇಶಗಳಿಗೆ ಏರ್ ಕನೆಕ್ಟಿವಿಟಿ ಹೆಚ್ಚುತ್ತಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಪ್ರಕಾರ ಮುಂದಿನ 20 ವರ್ಷದಲ್ಲಿ ಭಾರತಕ್ಕೆ 8,000 ವಿಮಾನಗಳ ಅವಶ್ಯಕತೆ ಬೀಳುತ್ತದೆ. ಸದ್ಯ ಭಾರತದಲ್ಲಿ 800 ವಿಮಾನಗಳಿವೆ. ವಿವಿಧ ವೈಮಾನಿಕ ಸಂಸ್ಥೆಗಳು ಬುಕ್ ಮಾಡಿರುವ ವಿಮಾನಗಳ ಸಂಖ್ಯೆ 1,200 ಇರಬಹುದು.

ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಫಂಡ್ ಮತ್ತು ಎರಡು ರೈಲ್ವೆ ಯೋಜನೆಗಳಿಗೆ ಸಂಪುಟ ಅನುಮೋದನೆ

ಏರ್​ಬಸ್ ಸಂಸ್ಥೆಯ ಸಹಯೋಗದ ನಿರೀಕ್ಷೆಯಲ್ಲಿ ಭಾರತ

ಯೂರೋಪ್​ನ ಏರ್​ಬಸ್ ಮತ್ತು ಅಮೆರಿಕದ ಬೋಯಿಂಗ್ ಈ ವಿಶ್ವದಲ್ಲಿ ವಿಮಾನ ತಯಾರಿಸುವ ಎರಡು ಪ್ರಮುಖ ಸಂಸ್ಥೆಗಳು. ಏರ್​ಬಸ್ ಸಂಸ್ಥೆ ಭಾರತದಲ್ಲಿ ತನ್ನ ಸಿ295 ಮಿಲಿಟರಿ ಸಾರಿಗೆ ವಿಮಾನ ಮತ್ತು ಎಚ್125 ಸಿವಿಲ್ ಹೆಲಿಕಾಪ್ಟರುಗಳನ್ನು ತಯಾರಿಸಲು ಅಂಗಸಂಸ್ಥೆಗಳನ್ನು ಸ್ಥಾಪಿಸಿದೆ. ವಿಮಾನದ ಬಿಡಿಭಾಗಗಳನ್ನು ಭಾರತದಲ್ಲಿ ಅದು ತಯಾರಿಸುವ ಕೆಲಸ ಮಾಡುತ್ತಿದೆ. ಆದರೆ, ನಾಗರಿಕ ವಿಮಾನಗಳನ್ನು, ಅಂದರೆ ರೆಗ್ಯುಲರ್ ವಿಮಾನಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲು ಅದಿನ್ನೂ ಯಾವ ಯೋಜನೆ ಹಾಕಿಲ್ಲ.

ಇತ್ತೀಚೆಗೆ ನಡೆದ ಏರ್​ಬಸ್​ನ ದಕ್ಷಿಣ ಏಷ್ಯಾ ಮುಖ್ಯಕಚೇರಿ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವ ರಾಮಮೋಹನ್ ನಾಯ್ಡು, ‘ಭಾರತದಲ್ಲಿ ನಾಗರಿಕ ವಿಮಾನಗಳ ತಯಾರಿಕೆ ಆಗಲೆಂದು ನಿರೀಕ್ಷಿಸುತ್ತಿದ್ದೇವೆ. ಇದರಲ್ಲಿ ಏರ್​ಬಸ್ ದೊಡ್ಡ ಪಾತ್ರ ವಹಿಸಬಹುದು. ವಿಮಾನ ಬಿಡಿಭಾಗಗಳ ತಯಾರಿಕೆಯಲ್ಲಿ ಏರ್​ಬಸ್ ಸ್ವಲ್ಪ ತೊಡಗಿಸಿಕೊಂಡಿದೆ. ಆದರೆ, ವಿಮಾನದ ಡಿಸೈನ್ ಮತ್ತು ತಯಾರಿಕೆ ಇಲ್ಲೇ ಆಗಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 80 ವರ್ಷ ಮೇಲ್ಪಟ್ಟ ವಯಸ್ಸಿನ ಪಿಂಚಣಿದಾರರಿಗೆ ಹೆಚ್ಚುವರಿ ಭತ್ಯೆ ನೀಡಲಿರುವ ಕೇಂದ್ರ ಸರ್ಕಾರ

ಭಾರತದಲ್ಲಿ ವಿಮಾನಗಳ ವಿನ್ಯಾಸ ಮತ್ತು ತಯಾರಿಕೆಗೆ ಅನುವು ಮಾಡಿಕೊಡುವಂತಹ ಕಾನೂನುಗಳಿರುವ ಭಾರತೀಯ ವಾಯುಯಾನ ವಿಧೇಯಕ ಮಸೂದೆಯನ್ನು ಆಗಸ್ಟ್ ತಿಂಗಳಲ್ಲಿ ಮಂಡಿಸಲಾಗಿತ್ತು.

ಏರ್​ಬಸ್​ನಿಂದ ಭಾರತದಲ್ಲಿ 5,000 ಮಂದಿಗೆ ನೇರ ಉದ್ಯೋಗ

ಭಾರತದಲ್ಲಿ ತನ್ನ ಕೆಲ ವಿಮಾನ ಬಿಡಿಭಾಗಗಳನ್ನು ತಯಾರಿಸುತ್ತಿರುವ ಏರ್​ಬಸ್ ಸಂಸ್ಥೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುತ್ತಿದೆ. ಸದ್ಯ ಭಾರತದಲ್ಲಿ 3,500 ನೇರ ಉದ್ಯೋಗಿಗಳನ್ನು ಅದು ಹೊಂದಿದೆ. ಒಂದು ಬಿಲಿಯನ್ ಯೂರೋ (ಸುಮಾರು 10,000 ಕೋಟಿ ರೂ) ಮೌಲ್ಯದ ಬಿಡಿಭಾಗಗಳು ಮತ್ತು ಸೇವೆಗಳನ್ನು ಭಾರತದಿಂದ ಅದು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ವ್ಯವಹಾರವನ್ನು ದ್ವಿಗುಣಗೊಳಿಸಲು ಮತ್ತು ನೇರ ಉದ್ಯೋಗಿಗಳ ಸಂಖ್ಯೆಯನ್ನು 5,000ಕ್ಕಿಂತಲೂ ಹೆಚ್ಚು ಹೆಚ್ಚಿಸಲು ಏರ್​ಬಸ್ ಯೋಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Fri, 25 October 24