ಅಧಿಕ ಲಾಭಕ್ಕೆ ಬೇಳೆಕಾಳುಗಳ ಮಾರಾಟ; ರೀಟೇಲ್ ಮಾರಾಟಗಾರರಿಗೆ ಸರ್ಕಾರ ಎಚ್ಚರಿಕೆ

|

Updated on: Jul 16, 2024 | 4:38 PM

Govt Warns Retailers: ಕಡಲೆ, ತೊಗರಿಬೇಳೆ, ಉದ್ದಿನಬೇಳೆಗಳ ಬೆಲೆ ಮಂಡಿಗಳಲ್ಲಿ ಕಡಿಮೆಗೊಂಡಿದ್ದರೂ ರೀಟೇಲ್ ಉದ್ದಿಮೆಗಳು ಬೆಲೆ ಕಡಿಮೆ ಮಾಡಿಲ್ಲ ಎಂದು ಸರ್ಕಾರ ಹೇಳಿದೆ. ಸೋಮವಾರ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ರೀಟೇಲ್ ಉದ್ಯಮ ಪ್ರತಿನಿಧಿಗಳ ನಡುವೆ ನಡೆದ ಸಭೆಯಲ್ಲಿ ಈ ಅಭಿಪ್ರಾಯ ಬಂದಿದೆ. ಮಿತಿಗಿಂತ ಹೆಚ್ಚು ದಾಸ್ತಾನು ಮಾಡುವುದು, ಅಧಿಕ ಲಾಭ ಇಟ್ಟುಕೊಳ್ಳುವುದು ಸರ್ಕಾರದ ಗಮನಕ್ಕೆ ಬಂದರೆ ಅಂತಹ ರೀಟೇಲರ್ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಇಲಾಖೆ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.

ಅಧಿಕ ಲಾಭಕ್ಕೆ ಬೇಳೆಕಾಳುಗಳ ಮಾರಾಟ; ರೀಟೇಲ್ ಮಾರಾಟಗಾರರಿಗೆ ಸರ್ಕಾರ ಎಚ್ಚರಿಕೆ
ಬೇಳೆಕಾಳು
Follow us on

ನವದೆಹಲಿ, ಜುಲೈ 16: ಕಳೆದ ಒಂದು ತಿಂಗಳಲ್ಲಿ ದೇಶದ ಪ್ರಮುಖ ಮಂಡಿಗಳಲ್ಲಿ ಕಡಲೆಬೇಳೆ, ತೊಗರಿ ಬೇಳೆ ಮತ್ತು ಉದ್ದಿನಬೇಳೆಗಳ ಬೆಲೆ ಶೇ. 4ರವರೆಗೂ ಇಳಿಕೆ ಆಗಿದೆ. ಆದರೆ, ಈ ಬೇಳೆ ಕಾಳುಗಳ ರೀಟೇಲ್ ಬೆಲೆ ಮಾತ್ರ ಅನುಗುಣವಾಗಿ ಇಳಿಕೆ ಆಗಿಲ್ಲ ಎಂದು ಸರ್ಕಾರ ಪ್ರಶ್ನೆ ಮಾಡಿದೆ. ಭಾರತೀಯ ಚಿಲ್ಲರೆ ಮಾರಾಟಗಾರರ ಸಂಸ್ಥೆ (ಆರ್​ಎಐ) ಜೊತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಇಲಾಖೆ ಕಾರ್ಯದರ್ಶಿ ನಿಧಿ ಖರೆ ಅವರು ರೀಟೇಲ್ ಮಾರಾಟಗಾರರು ಬೆಲೆ ಇಳಿಸದೇ ಲಾಭದ ಮುಖ ನೋಡುತ್ತಿರಬಹುದು ಎಂದು ಹೇಳಿದರು. ಸರ್ಕಾರ ಬೆಲೆ ಏರಿಕೆ ತಡೆಯಲು ಹರಸಾಹಸ ನಡೆಸುತ್ತಿದೆ. ಇದಕ್ಕೆ ರೀಟೇಲ್ ಉದ್ಯಮ ಸಹಕಾರ ನೀಡಬೇಕು ಎಂದೂ ಅವರು ಮನವಿ ಮಾಡಿದರು.

ಈ ಸಭೆಯಲ್ಲಿ ರೀಟೇರ್ಸ್ ಅಸೋಸಿಯೇಶನ್ ಮಾತ್ರವಲ್ಲದೇ ರಿಲಾಯನ್ಸ್ ರೀಟೇಲ್, ಡಿ ಮಾರ್ಟ್, ಟಾಟಾ ಸ್ಟೋರ್ಸ್, ಸ್ಪೆನ್ಸರ್ಸ್, ಆರ್​ಎಸ್​ಪಿಜಿ, ವಿ ಮಾರ್ಟ್ ಮೊದಲಾದ ರೀಟೇಲ್ ಮಾರಾಟ ಸಂಸ್ಥೆಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು. ರೀಟೇಲ್ ಮಾರಾಟದಲ್ಲಿ ಲಾಭದ ಅಂತರವನ್ನು ಕಡಿಮೆಗೊಳಿಸಿ, ಗ್ರಾಹಕರಿಗೆ ಕಡಿಮೆ ಬೆಲೆ ಸರಕು ಸಿಗುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದಾಗಿ ರೀಟೇಲ್ ಮಾರಾಟ ಸಂಸ್ಥೆಗಳು ಈ ಸಭೆಯಲ್ಲಿ ಭರವಸೆ ನೀಡಿದವು.

ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಹಣ ಶೇ. 30ರಷ್ಟು ಹೆಚ್ಚಿಸುವ ಸಾಧ್ಯತೆ; ಬಜೆಟ್​ನಲ್ಲಿ 80,000 ಕೋಟಿ ರೂ ನಿಯೋಜನೆ?

ಬೇಳೆಕಾಳುಗಳ ಆವಕ ಹೆಚ್ಚಿಸಲು ಸರ್ಕಾರದಿಂದ ಅವಿರತ ಯತ್ನ

ಬೇಳೆಕಾಳುಗಳನ್ನು ಬೆಳೆಯುವ ಕರ್ನಾಟಕ ಮೊದಲಾದ ಪ್ರಮುಖ ರಾಜ್ಯಗಳಲ್ಲಿ ತೊಗರಿ ಬೇಳೆ, ಉದ್ದಿನಬೇಳೆಗಳ ಉತ್ಪಾದನೆ ಹೆಚ್ಚಿಸಲು ಈ ರಾಜ್ಯಗಳ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸುವುದು ಸೇರಿದಂತೆ ಸರ್ಕಾರ ವಿವಿಧ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಕೇಂದ್ರ ಕೃಷಿ ಇಲಾಖೆ ಮತ್ತು ರಾಜ್ಯಗಳ ಕೃಷಿ ಇಲಾಖೆಗಳ ನಡುವೆ ಸಮನ್ವಯತೆ ತರಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿಧಿ ಖರ್ ತಿಳಿಸಿದರು.

ದೊಡ್ಡ ರೀಟೇಲ್ ಮಾರಾಟ ಸಂಸ್ಥೆಗಳು ಸೇರಿದಂತೆ ಎಲ್ಲಾ ದಾಸ್ತಾನುದಾರರ ಬಳಿ ಎಷ್ಟೆಷ್ಟು ಸಂಗ್ರಹ ಇದೆ, ದಾಸ್ತಾನು ಮಿತಿಯೊಳಗೆ ಇದೆಯಾ ಎಂಬುದನ್ನು ಗಮನಿಸುತ್ತಿರುತ್ತೇವೆ. ಈ ರೀತಿ ನಿಯಮ ಮೀರಿ ಮಿತಿಗಿಂತ ಹೆಚ್ಚು ದಾಸ್ತಾನು ಇಡುವುದು ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಸರ್ಕಾರದಿಂದ ಕಠಿಣ ಕ್ರಮ ಜಾರಿಯಾಗುತ್ತದೆ ಎಂದೂ ಈ ಸಭೆಯಲ್ಲಿ ರೀಟೇಲ್ ಉದ್ಯಮದ ಪ್ರತಿನಿಧಿಗಳಿಗೆ ನಿಧಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ರೀಟೇಲ್ ಬಳಿಕ ಹೋಲ್​ಸೇಲ್ ಹಣದುಬ್ಬರ ಏರಿಕೆ ಸರದಿ; ಜೂನ್ ತಿಂಗಳಲ್ಲಿ ಶೇ. 3.4ರಷ್ಟು ಡಬ್ಲ್ಯುಪಿಐ ಇನ್​ಫ್ಲೇಶನ್

ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ರೀಟೇರ್ಸ್ ಅಸೋಸಿಯೇಶನ್ ಸಂಸ್ಥೆ ದೇಶಾದ್ಯಂತ 2,300 ಸದಸ್ಯರು ಮತ್ತು 6 ಲಕ್ಷ ಮಳಿಗೆಗಳನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ